ರಾಜಕೀಯ

ಬೆಂಗಳೂರು ಉತ್ತರದಲ್ಲಿ 'ಗೌಡ'ರ ಕಾಳಗ: ದೇವೇಗೌಡರ ಬಗ್ಗೆ ನನಗೆ ಭಯವಿಲ್ಲ, ಗೌರವವಿದೆ: ಸದಾನಂದಗೌಡ

Shilpa D
ಬೆಂಗಳೂರು:  ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರ ಬಗ್ಗೆ ನನಗೆ ಭಯವಿಲ್ಲ, ಗೌರವವಿದೆ. ಬೆಂಗಳೂರು ಉತ್ತರ ಲೋಕಸಭೆ ಕ್ಷೇತ್ರದಿಂದ ಅವರ ವಿರುದ್ಧ ಸ್ಪರ್ಧಿಸಲು ನಾನು ಸಿದ್ದನಿದ್ದೇನೆ ಎಂದು ಕೇಂದ್ರ ಸಚಿವ ಡಿ.ವಿ ಸದಾನಂದ ಗೌಡ ಹೇಳಿದ್ದಾರೆ.
ದೇವೇಗೌಡರು ಬೆಂಗಳೂರು ಉತ್ತರ ಕ್ಷೇತ್ರದಿಂದ ಸ್ಪರ್ಧಿಸಬಹುದೆಂಬ ವಿಚಾರದಲ್ಲಿ ನನಗೆ ಭಯವಿಲ್ಲ. ಗೌಡರ ಬಗ್ಗೆ ನನಗೆ ಗೌರವವಿದೆ. ನನ್ನ ಇದುವರೆಗಿನ ಚುನಾವಣೆಯಲ್ಲಿ ನಾನು ಸಣ್ಣವರ ಜತೆ ಸೆಣೆಸಿದ್ದೇನೆ. ಈ ಬಾರಿ ದೊಡ್ಡವರ ಜತೆ ಕಾದಾಡುವ ಆಸೆ ಇದೆ, ಎಂದು ಹೇಳಿದರು. 
ಹಾಸನ ಕ್ಷೇತ್ರವನ್ನು ತಮ್ಮ ಮೊಮ್ಮಗ ಪ್ರಜ್ವಲ್ ರೇವಣ್ಣ ಅವರಿಗೆ ಬಿಟ್ಟು ಕೊಟ್ಟು, ಬೆಂಗಳೂರು ಉತ್ತರ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಲು ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಸಿದ್ಧತೆ ನಡೆಸುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ, ಈ ಹಿನ್ನೆಲೆಯಲ್ಲಿ ಡಿವಿ ಸದಾನಂದ ಗೌಡ ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಸಂಸದರಾಗಿ ಹಾಗೂ ಕೇಂದ್ರ ಸಚಿವರಾಗಿ ತಮ್ಮ ಐದು ವರ್ಷದ ಸಾಧನೆಯ ಪಟ್ಟಿ ಬಿಡುಗಡೆಗೊಳಿಸಿದ ಬಳಿಕ ಮಾತನಾಡಿದ ಅವರು, ನನಗೆ ಪಕ್ಷದಲ್ಲಿ ಯಾರ ವಿರೋಧವೂ ಇಲ್ಲ.  ನಾನು ಬೆಂಗಳೂರು ಉತ್ತರ ಲೋಕಸಭೆ ಕ್ಷೇತ್ರವನ್ನು ಬಿಟ್ಟು ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ ಎಂಬ ಇಲ್ಲ ಸಲ್ಲದ ಸುದ್ದಿಗಳನ್ನು ಹರಿ ಬಿಡಲಾಗುತ್ತಿದೆ. ನನ್ನನ್ನು ಸೇರಿದಂತೆ ಯಾರ ಬಗ್ಗೆಯಾದರೂ ಹಾರಿಕೆ ಸುದ್ದಿ ಹಬ್ಬಿಸುವವರು ದೇಶದ್ರೋಹಿಗಳು ಎಂದು ವಾಗ್ದಾಳಿ ನಡೆಸಿದರು.
ಪಕ್ಷ ನನಗೆ ಎಲ್ಲವನ್ನೂ ಕೊಟ್ಟಿದೆ. ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಟಿಕೆಟ್‌ ಕೊಟ್ಟರೆ ಸ್ಪರ್ಧಿಸಿ ಗೆಲ್ಲುತ್ತೇನೆ. ಇಲ್ಲವಾದರೆ ಉತ್ತರದಲ್ಲಿ ಯಾರನ್ನೇ ಅಭ್ಯರ್ಥಿಯಾಗಿ ನಿಲ್ಲಿಸಿದರೂ ಬಿಜೆಪಿಯ ಆ ಅಭ್ಯರ್ಥಿಯನ್ನು ಗೆಲ್ಲಿಸುತ್ತೇನೆ ಎಂದರು. 
ಫೆಬ್ರವರಿ 3 ರಿಂದ ಚುನಾವಣೆ ಸಂಬಂಧ ಕೆಲಸಗಳು ಆರಂಭವಾಗಿದ್ದು, ಸುಮಾಕರು 250 ಪ್ರಮುಖ ಮುಖಂಡರ ಜೊತೆ ಸಭೆ ನಡೆಸಲಾಗಿದೆ, 8 ರಲ್ಲಿ ಐದು ವಿಧಾನಸಭೆ ಕ್ಷೇತ್ರಗಳಲ್ಲಿ ಸಂಚರಿಸಿದ್ದೇವೆ, ನಮಗೆ ಒಳ್ಳೆಯ ರೆಸ್ಪಾನ್ಸ್ ಸಿಗುತ್ತಿದೆ, ಬಿಜೆಪಿ ಬಹುಮಗಳ ಅಂತರದಿಂದ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.
SCROLL FOR NEXT