ಬೆಂಗಳೂರು:ಮಂಡ್ಯ ಲೋಕಸಭಾ ಚುನಾವಣಾ ಕಣ ದಿನದಿಂದ ದಿನಕ್ಕೆ ರಂಗು ಪಡೆದುಕೊಳ್ಳುತ್ತಿದೆ. ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಸುಮಲತಾ ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರನ್ನು ಭೇಟಿ ಮಾಡಿದ ಬೆನ್ನಲ್ಲೇ ಇಬ್ಬರ ವಿರುದ್ಧ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಟ್ವೀಟರ್ ಮೂಲಕ ಕಿಡಿಕಾರಿದ್ದಾರೆ.
ಎಸ್ ಎಂ ಕೃಷ್ಣ ಅವರೇ, 50 ವರ್ಷ ಕಾಲ ನೀವು ಅಧಿಕಾರದ ಬೆಣ್ಣೆಯನ್ನು ಸಾಕಷ್ಟು ಮೆಯ್ದಿದೀರಿ. ನಮ್ಮ ಕುಟುಂಬದಲ್ಲಿ ಯಾರೂ ಹಿಂಬಾಗಿಲ ಪ್ರವೇಶ ಪಡೆದಿಲ್ಲ. ಜನ ಆರಿಸಿದಾಗ ಮಾತ್ರ ಅಧಿಕಾರ ಪಡೆದಿದ್ದಾರೆ. ಆದರೆ ನೀವು ರಾಜ್ಯಸಭೆಗೆ ಹಿಂಬಾಗಿಲ ಮೂಲಕ ಪ್ರವೇಶ ಪಡೆಯಲು ದೇವೇಗೌಡರ ಸಹಾಯ ಪಡೆದದ್ದು ನೆನಪಿದೆ ಎಂದು ಭಾವಿಸುತ್ತೇನೆ ಎಂದು ಹೇಳಿದ್ದಾರೆ.
ಎರಡು ಬಾರಿ ಕೇಂದ್ರ ಸಚಿವರಾಗಿ, ರಾಜ್ಯದ ಮುಖ್ಯಮಂತ್ರಿಯಾಗಿ, ಉಪ ಮುಖ್ಯಮಂತ್ರಿಯಾಗಿ, ಪಕ್ಕದ ರಾಜ್ಯದಲ್ಲಿ ರಾಜ್ಯಪಾಲರಾಗಿ ಅಧಿಕಾರ ಅನುಭವಿಸಿದಿರಿ. ಇಷ್ಟೆಲ್ಲಾ ಆದಮೇಲೆ ನೀವು ಬಿಜೆಪಿಗೆ ಕಾಲಿಟ್ಟಾಗಲೇ ಟೀಕಿಸುವ ನೈತಿಕತೆಯನ್ನು ಕಳೆದುಕೊಂಡಿದ್ದೀರಿ. ಕುಟುಂಬ ರಾಜಕಾರಣವನ್ನು ಪ್ರಶ್ನೆ ಮಾಡಿದ್ದೀರಿ. ಬಹಳ ಸಂತೋಷ ಎಂದಿದ್ದಾರೆ.
ಸುಮಲತಾ ಅವರೇ, ನನಗಾಗಲೀ ನನ್ನ ತಂದೆಯವರಿಗಾಗಲೀ ರೈತರ ಬಗ್ಗೆ ಏನೇನೂ ಗೊತ್ತಿಲ್ಲ. ಮಣ್ಣಿನ ಮಕ್ಕಳು ಎಂದು ಈ ದೇಶದ ಜನ ಪ್ರೀತಿಯಿಂದ ಕರೆದರು. ನಮ್ಮದು ರೈತರಿಗೆ ಮಿಡಿದ ಮನ. ಆದರೆ.... ಎಂದು ಜಾಗ ಖಾಲಿ ಬಿಟ್ಟಿದ್ದಾರೆ.
ಈಗ ದಿಢೀರನೆ ಪ್ರತ್ಯಕ್ಷರಾಗಿ ಪ್ರತೀ ದಿನ ಹೊಲ ಗದ್ದೆಗಳಲ್ಲಿ ದುಡಿದು, ಉತ್ತು ಬಿತ್ತಿದ ಅನುಭವ ಹಂಚಿಕೊಳ್ಳುತ್ತಿದ್ದೀರಿ. ರೈತರನ್ನು ಉದ್ಧಾರ ಮಾಡಲು ನಿಮ್ಮ ಸಲಹೆ ತುಂಬಾ ಮುಖ್ಯ ಕೇಳಲು ನಾವು ಕಾತರರಾಗಿದ್ದೇವೆ ಎಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics