ರಾಜಕೀಯ

ದೇವೇಗೌಡ-ಜಮೀರ್ ಅಹ್ಮದ್ ಭೇಟಿ: ಬೆಂಗಳೂರು ಉತ್ತರದಿಂದ ಮಾಜಿ ಪ್ರಧಾನಿ ಸ್ಪರ್ಧೆ ಸಾಧ್ಯತೆ

Lingaraj Badiger
ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕು ಎಂಬ ಗೊಂದಲದಲ್ಲಿರುವ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಅವರಿಗೆ ಬೆಂಗಳೂರು ಉತ್ತರ ಕ್ಷೇತ್ರದಿಂದ ಸ್ಪರ್ಧಿಸುವಂತೆ  ಕಾಂಗ್ರೆಸ್ ನಾಯಕರು ಮನವಿ ಮಾಡಿದ್ದಾರೆ. 
ದೇವೇಗೌಡ ಅವರನ್ನು ಗೆಲ್ಲಿಸಿಕೊಂಡು ಬರುವ ಜವಾಬ್ದಾರಿಯನ್ನು ಜೆಡಿಎಸ್‍ ಪಕ್ಷದ ಮಾಜಿ ಭಂಟ ಹಾಗೂ ಸಚಿವ ಜಮೀರ್ ಅಹ್ಮದ್ ಅವರಿಗೆ ವಹಿಸಲಾಗಿದೆ.
ಸ್ಪರ್ಧಿಸಲು ಮನಸಿದ್ದರೂ ಕ್ಷೇತ್ರದ ಆಯ್ಕೆ ಇನ್ನೂ ನಿರ್ಧಾರವಾಗಿಲ್ಲ ಎಂದು ದೇವೇಗೌಡರು ಹೇಳಿಕೆ ನೀಡಿದ್ದರು. ತುಮಕೂರಿನಿಂದ ದೇವೇಗೌಡ ಅವರು ಸ್ಪರ್ಧಿಸಲು ಸ್ಥಳೀಯ ಕಾಂಗ್ರೆಸ್ ನಾಯಕರು ಹಾಗೂ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅಸಮಾಧಾನ ವ್ಯಕ್ತಪಡಿಸಿದ್ದರು. ಹೀಗಾಗಿ ಬೆಂಗಳೂರು ಉತ್ತರ ಕ್ಷೇತ್ರದಿಂದಲೇ ದೇವೇಗೌಡ ಅವರು ಸ್ಪರ್ಧಿಸಬೇಕು ಎಂಬುದು ಕಾಂಗ್ರೆಸ್ ನಾಯಕರ ಬಯಕೆಯಾಗಿದೆ. 
ಈ ಹಿನ್ನೆಲೆ ಇಂದು ಬೆಳಿಗ್ಗೆ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಮಾಜಿ ಪ್ರಧಾನಿ ದೇವೇಗೌಡ ಅವರನ್ನು ಪದ್ಮನಾಭ ನಗರ ನಿವಾಸದಲ್ಲಿ ಭೇಟಿಯಾಗಿ ಕ್ಷೇತ್ರದ ಪರಿಸ್ಥಿತಿ, ಉಭಯ ಪಕ್ಷಗಳ ಶಕ್ತಿ ಸಾಮರ್ಥ್ಯದ ಬಗ್ಗೆ ಚರ್ಚೆ ನಡೆಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜಮೀರ್ ಅಹ್ಮದ್, ರಾಜಕೀಯ ವಿಚಾರವಾಗಿ ಚರ್ಚಿಸಲು ದೇವೇಗೌಡ ಅವರನ್ನು ಭೇಟಿ ಮಾಡಿದ್ದೇನೆ. ಜೆಡಿಎಸ್ ಪಕ್ಷಕ್ಕೆ 8 ಕ್ಷೇತ್ರಗಳನ್ನು ಹಂಚಿಕೆ ಮಾಡಲಾಗಿದ್ದು, ಇದರಲ್ಲಿ  ಮಂಡ್ಯ, ತುಮಕೂರಿನಿಂದ ಸ್ಪರ್ಧಿಸುವಂತೆ ದೇವೇಗೌಡರಿಗೆ ಆಹ್ವಾನ ನೀಡುತ್ತಿದ್ದಾರೆ. ದೇವೇಗೌಡರು ಮೈತ್ರಿಕೂಟದ ಅಭ್ಯರ್ಥಿಯಾಗಿರುವುದರಿಂದ ಅವರಿಗೆ ಬೆಂಗಳೂರು ಉತ್ತರ ಕ್ಷೇತ್ರದಿಂದ ಸ್ಪರ್ಧಿಸುವಂತೆ ಕಾಂಗ್ರೆಸ್ ಪಕ್ಷ ಮನವಿ ಮಾಡಿದೆ. ಬೆಂಗಳೂರು ಉತ್ತರ ಕ್ಷೇತ್ರದಿಂದ ಸ್ಪರ್ಧಿಸಿದರೆ ಅವರನ್ನು ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ನಮ್ಮದು. ತಾವು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿದ್ದು, ಪಕ್ಷ ಸೂಚಿಸಿದ ಕೆಲಸವನ್ನು ಕಳೆದ 8 ತಿಂಗಳಿನಿಂದ ನಿಷ್ಠೆಯಿಂದ ಮಾಡಿಕೊಂಡು ಬರುತ್ತಿದ್ದೇನೆ. ಮುಂದೆಯೂ ಪಕ್ಷಕ್ಕಾಗಿ ಶ್ರಮಿಸುತ್ತೇನೆ ಎಂದರು.
SCROLL FOR NEXT