ರಾಜಕೀಯ

ಹಿರಿಯ ಕಾಂಗ್ರೆಸ್ ನಾಯಕ ಮಾಲಕರೆಡ್ಡಿ ಬಿಜೆಪಿಗೆ ಸೇರ್ಪಡೆ ಸಾಧ್ಯತೆ

Lingaraj Badiger
ಬೆಂಗಳೂರು: ಹೈದರಾಬಾದ್ ಕರ್ನಾಟಕದ ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಸಚಿವ ಎ.ಬಿ.ಮಾಲಕರೆಡ್ಡಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರುವ ಸಾಧ್ಯತೆ ಇದೆ.
ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿಧಾನ ಸಭೆಯ ಪ್ರತಿಪಕ್ಷ ನಾಯಕ ಹಾಗೂ ಬಿಜೆಪಿ ರಾಜ್ಯಾಧ‍್ಯಕ್ಷ ಬಿ.ಎಸ್.ಯಡಿಯೂರಪ್ಪ, ಹೈದರಾಬಾದ್ ಕರ್ನಾಟಕದ ಯಾದರಿಗಿ ಜಿಲ್ಲೆಯನ್ನು ಪ್ರತಿನಿಧಿಸುವ ಮಾಲಕರೆಡ್ಡಿ ಅವರು ತಮ್ಮನ್ನು ಭೇಟಿಯಾಗಿದ್ದು, ಪಕ್ಷಕ್ಕೆ ಸೇರುವ ಇಂಗಿತ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದರು.
ಮಾಲಕರೆಡ್ಡಿ ಅವರು ಬಿಜೆಪಿ ಸೇರುವ ನಿರ್ಧಾರ ಬಹಳ ಪ್ರಮುಖವಾಗಿದ್ದು, ಜೆಡಿಎಸ್ ಶಾಸಕ ನಾಗನಗೌಡ್ ಕಂದಕೂರ್ ಅವರನ್ನು ಬಿಜೆಪಿ ಸೇರುವಂತೆ ಮನವೊಲಿಸಲು ಪ್ರಯತ್ನಿಸಿ ತೀವ್ರ ಮುಖಭಂಗ ಅನುಭವಿಸಿದ್ದ ಯಡಿಯೂರಪ್ಪ ಅವರಿಗೆ ಒಂದು ರೀತಿಯ ಗೆಲುವೆಂದೇ ಪರಿಗಣಿಸಲಾಗುತ್ತಿದೆ. 
ಇತ್ತೀಚೆಗೆ ಯಡಿಯೂರಪ್ಪ ಹಾಗೂ ಕಂದಕೂರ ಅವರ ಮಗನ ಸಂಭಾಷಣೆಯ ಧ್ವನಿಸುರಳಿಯನ್ನು ಎಚ್.ಡಿ.ಕುಮಾರಸ್ವಾಮಿ ಅವರು ಮಾಧ್ಯಮದ ಮುಂದೆ ಬಿಡುಗಡೆ ಮಾಡಿದ್ದರು. ಇದರಿಂದ ಯಡಿಯೂರಪ್ಪ ತೀವ್ರ ಮುಖಭಂಗ ಅನುಭವಿಸಿದ್ದರು.
2018ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ನಾಗನಗೌಡ ಕಂದಕೂರ ಅವರ ವಿರುದ್ಧ ಕಾಂಗ್ರೆಸ್ ನಾಯಕ ಮಾಲಕರೆಡ್ಡಿ ಸೋಲನ್ನು ಅನುಭವಿಸಿದ್ದರು. ಪಕ್ಷದ ಆಂತರಿಕ ಭಿನ್ನಮತ ಹಿನ್ನೆಲೆಯಲ್ಲಿ ಲೋಕಸಭಾ ಚುನಾವಣೆಯ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲು ಹಿಂದೇಟು ಹಾಕಲಾಕುತ್ತಿದೆ ಎಂಬ ಮಾಧ್ಯಮದಲ್ಲಿನ ವರದಿ ಕುರಿತ ಪ್ರಶ್ನೆಗೆ ಉತ್ತರಿಸಿದ ಯಡಿಯೂರಪ್ಪ, ಇದು ಸತ್ಯಕ್ಕೆ ದೂರವಾದ ಮಾತು. ಕೇಂದ್ರದ ನಾಯಕರು ಇಂದು ಮಧ್ಯಾಹ್ನ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಿದ್ದಾರೆ. ಈ ಕುರಿತು ಪಕ್ಷದದಲ್ಲಿ ಯಾವುದೇ ಭಿನ್ನಮತವಿಲ್ಲ ಎಂದು ಹೇಳಿದರು.
ನಟಿ ಸುಮಲತಾ ಅಂಬರೀಶ್ ಹಾಗೂ ಮುಖ್ಯಮಂತ್ರಿಗಳ ಪುತ್ರ ಮತ್ತು ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರು ಸ್ಪರ್ಧಿಸುತ್ತಿರುವ ಮಂಡ್ಯ ಸೇರಿದಂತೆ ರಾಜ್ಯದ ಎಲ್ಲಾ 28 ಸ್ಥಾನಗಳಲ್ಲಿ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವುದಾಗಿ ಮೂಲಗಳು ತಿಳಿಸಿವೆ.
SCROLL FOR NEXT