ರಾಜಕೀಯ

ಕಾಂಗ್ರೆಸ್ ನಾಯಕರೊಂದಿಗೆ ಚರ್ಚಿಸಿ ಸ್ಪರ್ಧಿಸುವ ತೀರ್ಮಾನ: ದೇವೇಗೌಡ

Lingaraj Badiger
ಬೆಂಗಳೂರು: ತುಮಕೂರು ಹಾಗೂ ಬೆಂಗಳೂರು ಉತ್ತರ ಕ್ಷೇತ್ರದಿಂದ ಸ್ಪರ್ಧಿಸುವಂತೆ ತಮಗೆ ಒತ್ತಡವಿದೆ. ಕಾಂಗ್ರೆಸ್ ನಾಯಕರ ಜೊತೆ ಚರ್ಚಿಸಿ ಸ್ಪರ್ಧಿಸುವ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳುತ್ತೇನೆ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರು ಅವರು ಗುರುವಾರ ಹೇಳಿದ್ದಾರೆ.
ಇಂದು ರೇಸ್ ಕೋರ್ಸ್ ರಸ್ತೆಯಲ್ಲಿರುವ ಸಚಿವರ ಸರ್ಕಾರಿ ಗೃಹ ಕಚೇರಿಯಲ್ಲಿ ಸಚಿವ ಕೃಷ್ಣ ಬೈರೇಗೌಡ ಅವರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತುಮಕೂರಿನಿಂದ ಚುನಾವಣೆಗೆ ಸ್ಪರ್ಧಿಸುವಂತೆ ಒಬ್ಬರೂ ಬಿಡದೆ ಹಿಂಸೆ ನೀಡುತ್ತಿದ್ದಾರೆ. ಅಂತೆಯೇ ಬೆಂಗಳೂರು ಉತ್ತರ ಕ್ಷೇತ್ರದಿಂದಲೂ ಕಣಕ್ಕಿಳಿಯುವಂತೆ ಒತ್ತಡ ಹೇರಿದ್ದಾರೆ. ಈ ಬಗ್ಗೆ ಕಾಂಗ್ರೆಸ್ ನಾಯಕರ ಜೊತೆ ಮತ್ತೊಂದು ಸುತ್ತಿನ ಚರ್ಚೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳುತ್ತೇನೆ ಎಂದು ಹೇಳುವ ಮೂಲಕ ತುಮಕೂರು ಅಥವಾ ಬೆಂಗಳೂರು ಉತ್ತರ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುವ ಸುಳಿವನ್ನು ದೇವೇಗೌಡರು ಬಿಟ್ಟುಕೊಟ್ಟಿದ್ದಾರೆ. 
ರಾಜ್ಯದ 28 ಲೋಕಸಭಾ ಕ್ಷೇತ್ರಗಳಿಂದ ಸ್ಪರ್ಧಿಸುವುದು ಖಚಿತ. ಅಭ್ಯರ್ಥಿಗಳ ಸ್ಥಿತಿಗತಿಗಳ ಬಗ್ಗೆ ಸಚಿವ ಕೃಷ‍್ಣ ಬೈರೇಗೌಡರ ಜೊತೆ ಚರ್ಚೆ ನಡೆಸಿದ್ದೇನೆ ಎಂದು ದೇವೇಗೌಡ ಅವರು ತಿಳಿಸಿದರು.
ಕೃಷ್ಣ ಬೈರೇಗೌಡ ಮಾತನಾಡಿ, ದೇವೇಗೌಡರು ನಮ್ಮ ಅಭ್ಯರ್ಥಿ ಆಗಬೇಕು ಎಂದು ಎಲ್ಲಾ ಶಾಸಕರು, ಮುಖಂಡರು ಮನವಿ ಮಾಡಿದ್ದೇವೆ. ನಿನ್ನೆ ಕಾಂಗ್ರೆಸ್ ಪಕ್ಷದ ಐದು ಶಾಸಕರು ಸಭೆ ನಡೆಸಿ ದೇವೇಗೌಡ ಅವರು ಬೆಂಗಳೂರು ಉತ್ತರ ಕ್ಷೇತ್ರದ ಅಭ್ಯರ್ಥಿ ಆಗಬೇಕು ಎಂದು ನಿರ್ಣಯಿಸಿದ್ದೇವೆ. ಗೌಡರಿಗೆ ಕೇಳಿದಾಗ ಯೋಚನೆ ಮಾಡಿ ಹೇಳುತ್ತೇನೆ ಎಂದು ಹೇಳಿದ್ದಾರೆ. ಅವರಿಗೆ ತುಮಕೂರಿನಿಂದಲೂ ಸ್ಪರ್ಧಿಸುವಂತೆ ಒತ್ತಡ ಇದೆ. ಈ ಬಗ್ಗೆ ಮತ್ತೊಮ್ಮೆ ದೇವೇಗೌಡರ ಜೊತೆ ಚರ್ಚಿಸುತ್ತೇವೆ. ನಾವು ಯಾವುದೇ ಆಯ್ಕೆಯನ್ನು ಮುಂದಿಟ್ಟುಕೊಂಡಿಲ್ಲ ಎಂದರು.
ಮೈತ್ರಿ ಪಕ್ಷಗಳ ಸ್ಥಾನ ಹಂಚಿಕೆಯಂತೆ ಬೆಂಗಳೂರು ಉತ್ತರವನ್ನು ಜೆಡಿಎಸ್ ಗೆ ನೀಡಿದ್ದೇವೆ. ಈ ಕ್ಷೇತ್ರವನ್ನು ಮತ್ತೆ ಕಾಂಗ್ರೆಸ್ ಪಡೆದುಕೊಳ್ಳುವ ಪ್ರಸ್ತಾಪ ತಮ್ಮ ಮುಂದೆ ಇಲ್ಲ. ತಾವು ಸ್ಪರ್ಧೆ ಮಾಡುವ ಸಂದರ್ಭ ಇನ್ನೂ ಬಂದಿಲ್ಲ. ಅಂಥ ಪರಿಸ್ಥಿತಿ ಉದ್ಭವಿಸದು ಎಂದುಕೊಂಡಿದ್ದೇನೆ. ಅಭಿವೃದ್ದಿ ದೃಷ್ಟಿಯಿಂದಲೂ ದೇವೇಗೌಡರು ಅಭ್ಯರ್ಥಿಯಾಗಬೇಕು ಎಂಬುದನ್ನು ದೇವೇಗೌಡರಿಗೆ ಮನವರಿಕೆ ಮಾಡಿಕೊಂಡಿದ್ದೇವೆ. ಅವರ ಅಂತಿಮ ನಿರ್ಧಾರದ ನಂತರ ಪರ್ಯಾಯ ಮಾರ್ಗ ಹುಡುಕಬೇಕಾಗುತ್ತದೆ ಎಂದು ಕೃಷ್ಣ ಭೈರೇಗೌಡ ತಿಳಿಸಿದರು.
SCROLL FOR NEXT