ರಾಜಕೀಯ

ಊಟಕ್ಕೆ ಹೋಗಿದ್ದಕ್ಕೆ ಸಿಎಂ ಬೇಸರ ಮಾಡಿಕೊಂಡ್ರೆ ಏನೂ ಮಾಡಲಿಕ್ಕಾಗದು: ಜಮೀರ್

Lingaraj Badiger
ಬೆಂಗಳೂರು: ಊಟಕ್ಕೆ ಹೋಗುವುದು ತಪ್ಪಲ್ಲ. ಸ್ನೇಹಿತರ ಊಟಕ್ಕೆ ಕರೆದಾಗ ಊಟಕ್ಕೆ ಹೋಗಿದ್ದಾರೆ ಅಷ್ಟೇ. ಅಷ್ಟಕ್ಕೇ ಮುಖ್ಯಮಂತ್ರಿ ಕುಮಾರಸ್ವಾಮಿ ಬೇಸರ ಮಾಡಿಕೊಂಡರೆ ನಾವೇನು ಮಾಡಲಿಕ್ಕಾಗುತ್ತದೆ ಎಂದು ಸಚಿವ ಜಮೀರ್ ಅಹಮ್ಮದ್ ಖಾನ್ ಅವರು ಜೆಡಿಎಸ್ ನಾಯಕರಿಗೆ ತಿರುಗೇಟು ನೀಡಿದ್ದಾರೆ.
ಇಂದು ಕೆಪಿಸಿಸಿ ಕಚೇರಿಯಲ್ಲಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ನೇಹಿತರ ಆಹ್ವಾನದ ಮೇರೆಗೆ ಊಟಕ್ಕೆ ಹೋಗಿದ್ದು ತಪ್ಪಲ್ಲ. ಯಾರೇ ಕರೆದರೂ ಊಟಕ್ಕೆ ಹೋಗುತ್ತಾರೆ, ಇದಕ್ಕೆ ತಾವೇನೂ ಹೊರತಲ್ಲ. ಹುಟ್ಟುಹಬ್ಬದ ಔತಣ ಕೂಟಕ್ಕೆ ಹೋಗಿದ್ದಾರೆ. ಇದರಲ್ಲಿ ತಪ್ಪೇನಿದೆ? ಎಂದು ಚೆಲುವರಾಯಸ್ವಾಮಿ ಅವರ ನಡೆಯನ್ನು ಸಚಿವ ಜಮೀರ್ ಅಹಮದ್ ಖಾನ್ ಸಮರ್ಥಿಸಿಕೊಂಡರು.
ಸುಮಲತಾ ಅಂಬರೀಶ್ ಪಾರ್ಟಿಗೆ ಬರುತ್ತಾರೆ ಎಂದು ಯಾರಿಗೂ ಗೊತ್ತಿರಲಿಲ್ಲ. ಅಲ್ಲಿಗೆ ಹೋದ ನಂತರವೇ ಸುಮಲತಾ ಎದುರಾಗಿದ್ದಾರೆ. ಇಷ್ಟಕ್ಕೆ ಮುಖ್ಯಮಂತ್ರಿ ಬೇಸರವಾದರೆ ನಾವೇನು ಮಾಡಲು ಸಾಧ್ಯ ಎಂದರು.
ನಿಖಿಲ್ ಕುಮಾರಸ್ವಾಮಿ ಮಂಡ್ಯದಲ್ಲಿ ಸೋಲುವುದಿಲ್ಲ. ಒಂದೂವರೆ-ಎರಡು ಲಕ್ಷದ ಅಂತರದಲ್ಲಿ ಗೆಲ್ಲುತ್ತಾರೆ. ನಿಖಿಲ್ ಸೋಲುವ ಪ್ರಶ್ನೆಯೇ ಇಲ್ಲ. ಮಂಡ್ಯ ಉಪಚುನಾವಣೆಯಲ್ಲಿ ಎಲ್ಲರನ್ನೂ ಕರೆಸಿ ಮುಖ್ಯಮಂತ್ರಿ ಮಾತನಾಡಿದ್ದರು. ಆದರೆ ಈ ಚುನಾವಣೆಯಲ್ಲಿ ಎಲ್ಲರನ್ನು ಅವರು ವಿಶ್ವಾಸಕ್ಕೆ ತೆಗದುಕೊಳ್ಳದೇ ಜೆಡಿಎಸ್ ನಾಯಕರು ತಪ್ಪು ಮಾಡಿದ್ದಾರೆ ಎಂದರು.
ಈ ಹಿಂದೆ ಮಂಡ್ಯದಲ್ಲಿ ಉಪ ಚುನಾವಣೆ ನಡೆದಾಗ ಎಲ್ಲರೂ ಒಟ್ಟಾಗಿ ಕೆಲಸ ಮಾಡಿದ್ದರು. ಆಗ ಮುಖ್ಯಮಂತ್ರಿ ಅವರು ಎಲ್ಲರ ಜೊತೆ ಮಾತಾಡಿದ್ದರು. ಈ ಚುನಾವಣೆಯಲ್ಲಿ ಅದೇ ರೀತಿ ಕರೆಸಿ ಮಾತಾಡಬೇಕಿತ್ತು. ಹಾಗಾಗಿ ಚಲವರಾಯಸ್ವಾಮಿ ಮತ್ತವರ ಬೆಂಬಲಿಗರು ಅಸಮಾಧಾನಗೊಂಡಿದ್ದಾರೆ. ಇದು ಕುಮಾರಸ್ವಾಮಿ ಅವರಿಗೂ ಗೊತ್ತಿದೆ. ಅವರು ಸುಮ್ಮನೆ ಇದ್ದಾರೆ , ಮಧ್ಯದಲ್ಲಿ ಯಾರೋ ಈ ರೀತಿ ಗೊಂದಲ ಮೂಡಿಸುತ್ತಿದ್ದಾರೆ ಎಂದು ಮಂಡ್ಯ ಜೆಡಿಎಸ್ ನಾಯಕರ ವಿರುದ್ದ ಪರೋಕ್ಷ ವಾಗ್ದಾಳಿ ನಡೆಸಿದರು.
SCROLL FOR NEXT