ರಾಜಕೀಯ

ಬಿಜೆಪಿಯಲ್ಲಿಯೂ ಲಾಬಿ: ನಾನು ಮುಖ್ಯಮಂತ್ರಿ ಹುದ್ದೆಗೆ ಅರ್ಹ ಎಂದ ಯತ್ನಾಳ್

Lingaraj Badiger
ವಿಜಯಪುರ: ಉತ್ತರ ಕರ್ನಾಟಕ ಭಾಗದಿಂದ ಮುಖ್ಯಮಂತ್ರಿಯಾಗಲು ನನಗೂ ಅರ್ಹತೆ ಇದೆ. ಯಡಿಯೂರಪ್ಪ ಅವರ ತರುವಾಯ ಪಕ್ಷದಲ್ಲಿ ಸಕ್ರಿಯ ನಾಯಕನಾಗಿರುವ ನಾನು ಬಿಜೆಪಿ  ರಾಜ್ಯಾಧ್ಯಕ್ಷಕ್ಕೆ ಸ್ಥಾನಕ್ಕೆ ಟವೆಲ್ ಹಾಕಿದ್ದೇನೆ ಎಂದು ಬಿಜಾಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಮಂಗಳವಾರ ಹೇಳಿದ್ದಾರೆ.
ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಗಳ ಪೈಪೋಟಿ ಕಾಂಗ್ರೆಸ್ ಪಕ್ಷದಲ್ಲಿ ಮಾತ್ರವಲ್ಲದೇ ಬಿಜೆಪಿಯಲ್ಲಿಯೂ ಆರಂಭವಾದಂತಿದೆ. ಕಾಂಗ್ರೆಸ್ ಪಕ್ಷದಲ್ಲಿ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಉಪ ಮುಖ್ಯಮಂತ್ರಿ ಪರಮೇಶ್ವರ್, ಡಿ.ಕೆ.ಶಿವಕುಮಾರ್, ಎಂ.ಬಿ.ಪಾಟೀಲ್ ಮುಖ್ಯಮಂತ್ರಿ ಹುದ್ದೆಗೆ ಈಗಾಗಲೇ ಲಾಬಿ ಶುರುಮಾಡಿದ್ದಾರೆ. 
ಇದೀಗ  ಬಸವನಗೌಡ ಪಾಟೀಲ್ ಯತ್ನಾಳ್ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ತಾವೇ ಎಂದು ಹೇಳುವ ಮೂಲಕ ಬಿಜೆಪಿಯಲ್ಲಿಯೂ ಲಾಭಿ ಹಾಗೂ ಪೈಪೋಟಿಗೆ ವೇದಿಕೆ ಕಲ್ಪಿಸಿದ್ದಾರೆ. ಯಡಿಯೂರಪ್ಪ ಅವರ ಬಳಿಕ ಮಾಜಿ ಮುಖ್ಯಮಂತ್ರಿಗಳಾದ ಜಗದೀಶ್ ಶೆಟ್ಟರ್ , ಸದಾನಂದಗೌ‍ಡರು ತಾವು ಮುಂದಿನ ಮುಖ್ಯಮಂತ್ರಿ ಆಕಾಂಕ್ಷಿಗಳೆಂದು ಘೋಷಿಸಿಲ್ಲ. ಆದರೆ ಕೆ.ಎಸ್.ಈಶ್ವರಪ್ಪ, ಆರ್.ಅಶೋಕ್, ಶೋಭಾ ಕರಂದ್ಲಾಜೆ, ಸಿ.ಟಿ.ರವಿ ಸೇರಿದಂತೆ ಘಟಾನುಘಟಿ ನಾಯಕರು ಮುಖ್ಯಮಂತ್ರಿ ಆಕಾಂಕ್ಷಿಗಳು ಎಂಬುದೇನು ರಹಸ್ಯವಾಗಿ ಉಳಿದಿಲ್ಲ. ಹಾಗೆಂದೂ ಅವರೆಲ್ಲಿಯೂ ತಮ್ಮ ಆಸೆಯನ್ನು ಬಹಿರಂಗವಾಗಿ ವ್ಯಕ್ತಪಡಿಸಿದಂತಿಲ್ಲ.
ಆದರೆ ಮಾಜಿ ಕೇಂದ್ರ ಸಚಿವ ಬಸವನಗೌಡ ಪಾಟೀಲ್ ಯತ್ನಾಳ್ ಅಧಿಕೃತವಾಗಿ ಯಡಿಯೂರಪ್ಪ ಅವರ ಬಳಿಕ ತಾವು ಮುಖ್ಯಮಂತ್ರಿ ಅಭ್ಯರ್ಥಿ. ಅಲ್ಲದೆ ಉತ್ತರ ಕರ್ನಾಟಕದ ಪ್ರದೇಶದಿಂದ ಮುಖ್ಯಮಂತ್ರಿಯಾಗಲು ತಮಗೆ ಅವಕಾಶ ನೀಡಬೇಕು ಎಂಬುದನ್ನು ಅಧಿಕೃತವಾಗಿ ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ. ಒಂದೆಡೆ ಉತ್ತರ ಕರ್ನಾಟಕ ಭಾಗದಿಂದ ಎಂ.ಬಿ.ಪಾಟೀಲ್ ಮುಖ್ಯಮಂತ್ರಿ ಸ್ಥಾನಾಕಾಂಕ್ಷಿ ಎಂದು ಪ್ರಕಟಿಸುತ್ತಲೇ ಇತ್ತ ಬಿಜೆಪಿ ಪಾಳೆಯದಲ್ಲೂ ಬಸವನಗೌಡ ಪಾಟೀಲ್ ಯತ್ನಾಳ್ ಮುಖ್ಯಮಂತ್ರಿ ಅಭ್ಯರ್ಥಿ ಸ್ವಯಂ ಪ್ರಕಟಿಸಿ ಬಿಜೆಪಿಯಲ್ಲಿ ಬಿಸಿಬಿಸಿ ಚರ್ಚೆಗೆ ವೇದಿಕೆ ಕಲ್ಪಿಸಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಬಸನಗೌಡ ಪಾಟೀಲ್, ತಾವೊಬ್ಬ ಆರೋಪರಹಿತ ರಾಜಕೀಯ ನಾಯಕ. ತಮ್ಮ ವಿರುದ್ಧ  ಯಾವುದೇ ಹಗರಣಗಳು ಇಲ್ಲ, ಪ್ರಕರಣಗಳೂ ದಾಖಲಾಗಿಲ್ಲ. ಮುಖ್ಯಮಂತ್ರಿ ಹುದ್ದೆಗೆ ತಾವು ಅರ್ಹ ವ್ಯಕ್ತಿ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಬದುಕಿರುವವರೆಗೂ ಮುಖ್ಯಮಂತ್ರಿ ಆಗುತ್ತಾರೆ. ತಮಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಲು ಹೈಕಮಾಂಡ್ ಆಸಕ್ತಿ ತೋರಿಸಿದೆ. ಈ ಹಿನ್ನಲೆಯಲ್ಲಿ ರಾಜ್ಯ ನಾಯಕರಿಂದ ಮಾಹಿತಿ ಪಡೆದಿದ್ದೇನೆ ಎಂದು ಯತ್ನಾಳ್ ತಿಳಿಸಿದ್ದಾರೆ.
ಮಂತ್ರಿ ಸ್ಥಾನ ನೀಡಲಿಲ್ಲ ಎಂದು ಎಂ.ಬಿ.ಪಾಟೀಲ್ ಕಾಂಗ್ರೆಸ್ ನಾಯಕರ ವಿರುದ್ಧ  ಮುನಿಸಿಕೊಂಡಿದ್ದರು. ಆಗ ಅವರನ್ನು ಬಿಜೆಪಿ ಪಕ್ಷಕ್ಕೆ ಸೆಳೆಯುವ ಪ್ರಯತ್ನ ಮಾಡಿದ್ದೇವೆ. ಅವರು ಬಿಜೆಪಿಗೆ  ಬಂದರೆ ಪಾಟೀಲರಿಗೆ ಬಿಜೆಪಿ ಪಕ್ಷ ಉತ್ತಮ ಭವಿಷ್ಯ ಕಲ್ಪಿಸಿಕೊಡಲಿದೆ ಎನ್ನುವ ಮೂಲಕ ಪಾಟೀಲರಿಗೆ ಆಹ್ವಾನ ನೀಡಿದರು. ಎಂ.ಬಿ.ಪಾಟೀಲ್ ಅವರು ಬಿಜೆಪಿಗೆ ಬಂದರೆ ಅವರಿಗೆ ಸಚಿವ ಸ್ಥಾನ ಕೊಡಿಸುತ್ತೇನೆ. ತಮಗೆ ಮಂತ್ರಿ ಸ್ಥಾನ ನೀಡದಿದ್ದರೂ ತೊಂದರೆಯಿಲ್ಲ. ಎಂ.ಬಿ.ಪಾಟೀಲರಿಗೆ ಬೇಕಾಗಿರುವ ಪ್ರಿಯವಾದ ನೀರಾವರಿ ಖಾತೆ ಜೊತೆಗೆ ಬೇರೆ ಖಾತೆಯನ್ನು ನೀಡುವಂತೆ ನಾನು ಲಾಬಿ  ಮಾಡುತ್ತೇನೆ ಎಂದರು.
SCROLL FOR NEXT