ಬೆಂಗಳೂರು: ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸರ್ಕಾರ ಪತನಾದರೂ, ಸಿದ್ದರಾಮಯ್ಯ ಮುಖ್ಯಮಂತ್ರಿ ಆಗುವುದಿಲ್ಲ, ಮುಖ್ಯಮಂತ್ರಿಯಾಗಲು ಸದ್ಯ ಅವರಿಗೆ ಯಾವುದೇ ಮಾರ್ಗಗಳೂ ಇಲ್ಲ. ಸಮಾನ ಮನಸ್ಕ ಶಾಸಕರು ಸೇರಿದರೂ ಕಾಂಗ್ರೆಸ್‍ಗೆ 113 ಸ್ಥಾನ ಸಿಗುವುದಿಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ವಿಶ್ವನಾಥ್ ಭವಿಷ್ಯ ನುಡಿದಿದ್ದಾರೆ
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ವಿಧಾನ ಸಭೆಯಲ್ಲಿ 79 ಸಂಖ್ಯಾ ಬಲ ಹೊಂದಿದೆ. ಇದರಿಂದ ಯಾವ ಬದಲಾವಣೆಯೂ ಸಾಧ್ಯವಿಲ್ಲ. ಇದರಿಂದ ಮೈತ್ರಿ ಸರ್ಕಾರ ಪತನಗೊಳಿಸಿ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗುವುದು ಅಸಾಧ್ಯ. ಒಂದು ವೇಳೆ ಸರ್ಕಾರ ಬಿದ್ದು ಹೋದರೂ ಏನು ಸಮಸ್ಯೆ ಇಲ್ಲ. ಆಕಾಶವೇನು ಕಳಚಿ ಬೀಳುವುದಿಲ್ಲ. ಮೇ 23 ನಂತರ ಎಲ್ಲ ಬೆಳವಣಿಗೆಯೂ ತಿಳಿಯಲಿದೆ. ಮೈತ್ರಿ ಸರ್ಕಾರಕ್ಕೆ ಯಾವುದೇ ಸಮಸ್ಯೆ ಇಲ್ಲ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿ ಮುಂದುವರಿಯುತ್ತಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ಶಾಸಕರ ಒತ್ತಾಯದ ಬಗ್ಗೆ ಪ್ರತಿಕ್ರಿಯಿಸಿದ ಅವರು,ಪ್ರಸ್ತುತ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಸ್ಥಾನದಲ್ಲಿದ್ದಾರೆ. ಸಿದ್ದರಾಮಯ್ಯ ಅವರೇ ನಮ್ಮ ಮುಖ್ಯಮಂತ್ರಿ ಎಂದು ಕಾಂಗ್ರೆಸ್ ಶಾಸಕರು, ಕೆಲ ನಾಯಕರು ಹೇಳುವುದು ಸರಿಯಲ್ಲ ಎಂದು ಕಾಂಗ್ರೆಸ್ ಶಾಸಕರ ವಿರುದ್ದ ವಿಶ್ವನಾಥ್ ಅಸಮಾಧಾನ ವ್ಯಕ್ತಪಡಿಸಿದರು. ಜೆಡಿಎಸ್ ಬಿಜೆಪಿಯ ಬಿ ಟೀಂ ಎಂದು ವಿಧಾನ ಸಭೆ ಚುನಾವಣೆಯಲ್ಲಿ ಹೇಳಿದ್ದು ಸಿದ್ದರಾಮಯ್ಯ ಅವರೇ. ಜೆಡಿಎಸ್‍ಗೆ ವೋಟ್ ಹಾಕಿದರೆ ಅದು ಬಿಜೆಪಿಗೆ ಹಾಕಿದಂತೆ ಎಂದು ಅಪಪ್ರಚಾರ ಮಾಡಿದ್ದರು. ಈ ಹೇಳಿಕೆಯಿಂದಲೇ ಬಿಜೆಪಿ ಹೆಚ್ಚು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತು. ಹೀಗಾಗಿ ಬಿಜೆಪಿಗೆ 104 ಸೀಟು ಬರಲು ಸಿದ್ದರಾಮಯ್ಯನವರೇ ನೇರ ಕಾರಣ ಎಂದು ಅವರು ತಿರುಗೇಟು ನೀಡಿದರು.
ಬಿಜೆಪಿ ನಾಯಕ ವಿ.ಶ್ರೀನಿವಾಸ್ ಪ್ರಸಾದ್ ಅವರನ್ನು ಮೈಸೂರಿನಲ್ಲಿ ಭೇಟಿ ಮಾಡಿದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಯಾವುದೇ ಪಕ್ಷದಲ್ಲಿ ಇದ್ದರು ನಾವು 40 ವರ್ಷದ ಸ್ನೇಹಿತರು. ಹೀಗಾಗಿ ಭೇಟಿಯಾಗಿದ್ದೇವು. ಯೋಗಕ್ಷೇಮ ವಿಚಾರಣೆ ಮಾಡಲು ಅವರ ಮನೆಗೆ ಹೋಗಿದ್ದೆ. ಭೇಟಿಯಾದಾಗ ರಾಜಕೀಯ ಚರ್ಚೆ ಮಾಡುವುದು ಸಹಜ. ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಬದಲಾವಣೆ ಆಗಲಿದೆ ಎಂದು ಅವರು ಹೇಳಿದ್ದಾರೆ. ಈ ವಿಷಯ ಬಿಟ್ಟು ಬೇರೆ ಯಾವುದನ್ನೂ ಚರ್ಚಿಸಿಲ್ಲ ಎಂದು ಹೇಳಿದರು.
ಮೈಸೂರಿನಲ್ಲಿ ಜೆಡಿಎಸ್ ಕಾರ್ಯಕರ್ತರು ಬಿಜೆಪಿಗೆ ಮತ ಹಾಕಿಸಿದ್ದಾರೆ ಎಂಬ ಸಚಿವ ಜಿ.ಟಿ.ದೇವೇಗೌಡ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈ ಚುನಾವಣೆಯಲ್ಲಿ ಯಾರು ಯಾರಿಗೆ ಮತ ಹಾಕಿದರು ಎಂದು ಹೇಳುವುದು ಸಾಧ್ಯವಿಲ್ಲ. ಅತಿ ಹೆಚ್ಚಿನ ಪ್ರಮಾಣದಲ್ಲಿ ಮತದಾನವಾಗಿದೆ. ಮೇ 23ರ ಬಳಿಕ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಗಲಿದೆ.ಈಗ ನಡೆಯುತ್ತಿರುವ ಚರ್ಚೆಗಳು ಅನಾವಶ್ಯಕ ಎಂದರು.ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳುವುದಿಲ್ಲ. ನಮ್ಮ ಮೈತ್ರಿ ಲೋಕಸಭೆಗೆ ಮಾತ್ರ ಸೀಮಿತವಾಗಿದೆ. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಜೆಡಿಎಸ್ ಏಕಾಂಗಿಯಾಗಿ ಎಲ್ಲಾ ಕ್ಷೇತ್ರಗಳಲ್ಲಿ ಹೋರಾಟ ಮಾಡಲಿದೆ ಎಂದರು.
ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಅವರು ರೆಸಾರ್ಟ್ ನಲ್ಲಿ ವಾಸ್ತವ್ಯ ಹೂಡಿದ್ದರ ಬಗ್ಗೆ ಪ್ರತಿಕ್ರಿಯಿಸಿದ ಅವರು, ರೆಸಾರ್ಟ್ ನಲ್ಲಿಯೂ ದೇವಸ್ಥಾನಗಳಿವೆ. ಹಿರಣ್ಯಕಶಿಪು ಪ್ರಹ್ಲಾದನಿಗೆ ಈ ಕಂಬದಲ್ಲಿ ನಾರಾಯಣನಿದ್ದಾನೋ ಎಂದು ಕೇಳುತ್ತಾನೆ. ಎಲ್ಲೆಲ್ಲೂ ಇದ್ದಾನೆ ಎಂದು ಪ್ರಹ್ಲಾದ ಹೇಳುತ್ತಾನೆ. ಹಾಗೆಯೇ ರೆಸಾರ್ಟಿನ ಕಂಬ ಕಂಬದಲ್ಲೂ ದೇವರಿದ್ದಾನೆ ಎಂದು ಬಿಜೆಪಿ ನಾಯಕರ ಹೇಳಿಕೆಗೆ ಬಗ್ಗೆ ವ್ಯಂಗ್ಯವಾಡಿದರು.
ಬಿಜೆಪಿ ನಾಯಕರು ದೇವಸ್ಥಾನದ ಗಿರಾಕಿಗಳು. ಅವರು ಬೆಳಗ್ಗೆ, ಸಂಜೆ ದೇವಸ್ಥಾನಕ್ಕೆ ಹೋಗುತ್ತಾರೆ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಆಗೊಮ್ಮೆ, ಈಗೊಮ್ಮೆ ದೇವಾಲಯಗಳಿಗೆ ತೆರಳುತ್ತಾರೆ. ದೇವಸ್ಥಾನಕ್ಕೆ ಹೋಗುವುದು ತಪ್ಪಲ್ಲ ಎಂದು ದೇವೇಗೌಡರ ಕುಟುಂಬದ ಟೆಂಪಲ್ ರನ್ ಬಗ್ಗೆ ವಿಶ್ವನಾಥ್ ಸಮರ್ಥಿಸಿಕೊಂಡರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos