ರಾಜಕೀಯ

ಸಿದ್ದರಾಮಯ್ಯ ಮೇಲೆ ವಿಶ‍್ವನಾಥ್‍ ಕೋಪ ಹಾಗೆ ಇದೆ: ಪುತ್ರ ಅಮಿತ್

Lingaraj Badiger
ಮೈಸೂರು: ಮಾಜಿ ಮುಖ್ಯಮಂತ್ರಿ ಹಾಗೂ ಮೈತ್ರಿ ಪಕ್ಷಗಳ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರ ಮೇಲೆ ನಮ್ಮ ತಂದೆಗೆ ಇನ್ನೂ ಸಹ ಸಿಟ್ಟಿದೆ. ಹೀಗಾಗಿಯೇ ನಮ್ಮ ತಂದೆಯನ್ನು ಲೋಕಸಭಾ ಚುನಾವಣಾ ಪ್ರಚಾರದಿಂದ ದೂರವಿಟ್ಟು ಕಡೆಗಣಿಸಲಾಗಿದೆ ಎಂದು ವಿಶ್ವನಾಥ್ ಅವರ ಪುತ್ರ ಅಮಿತ್ ದೇವರಹಟ್ಟಿ ಕಿಡಿಕಾರಿದ್ದಾರೆ.
ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ವಿಶ್ವನಾಥ್ ಅವರಿಗಿಂದು 71 ನೇ ಜನುಮದಿನದ ಸಂಭ್ರಮ. ಮೈಸೂರಿನ ಕಾಮೇಶ್ವರಿ ದೇವಸ್ಥಾನದಲ್ಲಿ ವಿನೋದ್ ಪಾಟೀಲ್ ಸ್ನೇಹ ಬಳಗ ಹಾಗೂ ವಿಶ್ವನಾಥ್ ಅಭಿಮಾನಿ ಬಳಗ ವತಿಯಿಂದ ಕಾಮೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ವಿಶ್ವನಾಥ್ ಅವರ ಹುಟ್ಟುಹಬ್ಬವನ್ನು ಆಚರಿಸಲಾಯಿತು.
ಹುಟ್ಟುಹಬ್ಬ ಆಚರಣೆ ಬಳಿಕ ಮಾತನಾಡಿದ ಅಮಿತ್, ವಿಶ್ವನಾಥ್ ಅವರಿಗೆ 71 ವರ್ಷ ವಯಸಾಗಿದ್ದು, ಇಳಿವಯಸಿನಲ್ಲಿ ಅವರ ಮನಸನ್ನು ನೋಯಿಸಿರುವುದು ನನಗೆ ವೈಯಕ್ತಿಕವಾಗಿ ಬೇಸರ ತಂದಿದೆ. ಸಿದ್ದರಾಮಯ್ಯ ಮೈಸೂರು ಲೋಕಸಭಾ ಚುನಾವಣಾ ಪ್ರಚಾರದಲ್ಲಿ ಸಚಿವ ಜಿ.ಟಿ.ದೇವೇಗೌಡ ಅವರೊಂದಿಗೆ ಹೊಂದಾಣಿಕೆ ಮಾಡಿಕೊಂಡಂತೆ ನಮ್ಮ ತಂದೆಯ ಜೊತೆಗೂ ಹೊಂದಿಕೊಂಡು ಚುನಾವಣಾ ಪ್ರಚಾರದಲ್ಲಿ ತೊಡಗಬೇಕಿತ್ತು. ಆದರೆ ಅವರು ಹಾಗೆ ಮಾಡದೇ ನಮಗೆಲ್ಲ ಬೇಸರವುಂಟು ಮಾಡಿದ್ದಾರೆ ಎಂದರು.
ಚಾಮುಂಡೇಶ್ವರಿ ಕ್ಷೇತ್ರದಲ್ಲಿ 30 ಸಾವಿರ ಮತಗಳ ಅಂತರದಿಂದ ತಮ್ಮನ್ನು ಸೋಲಿಸಿದವರ ಜೊತೆಯಲ್ಲಿಯೇ ಸಿದ್ದರಾಮಯ್ಯ ವೇದಿಕೆ ಹಂಚಿಕೊಳ್ಳುತ್ತಾರೆ. ಆದರೆ  ಬೇರೆ ಪಕ್ಷದಲ್ಲಿದ್ದ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಕರೆದುಕೊಂಡು ಬಂದು ಮುಖ್ಯಮಂತ್ರಿಯಾಗುವವರೆಗೂ ಜೊತೆಗಿದ್ದವರನ್ನು ಕಡೆಗಣಿಸುತ್ತಾರೆ ಎನ್ನುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಹುಣಸೂರಿನ ಜನ ಸಿದ್ದರಾಮಯ್ಯ-ವಿಶ್ವನಾಥ್ ಇಬ್ಬರೂ ವೇದಿಕೆ ಹಂಚಿಕೊಳ್ಳುತ್ತಾರೆ ಎಂದು ನಿರೀಕ್ಷಿಸಿದ್ದರು. ಆದರೆ ತಂದೆಯವರ ಜೊತೆ ವೇದಿಕೆ ಹಂಚಿಕೊಳ್ಳದೇ ಸಿದ್ದರಾಮಯ್ಯ ಜನತೆಗೆ ನೋವುಂಟು ಮಾಡಿದ್ದರಾದರೂ ಸಹ ಮೈತ್ರಿ ಅಭ್ಯರ್ಥಿ ವಿಜಯಶಂಕರ್ ಪರವಾಗಿಯೇ ಪ್ರಚಾರ ಮಾಡಿರುವುದಾಗಿ ಅವರು ತಿಳಿಸಿದರು.
SCROLL FOR NEXT