ರಾಜಕೀಯ

ಕುಮಾರಸ್ವಾಮಿ ಮುಖ್ಯಮಂತ್ರಿ ಅವಧಿಯನ್ನು ಪೂರ್ಣಗೊಳಿಸಲಿದ್ದಾರೆ: ಸಿದ್ದರಾಮಯ್ಯ

Sumana Upadhyaya
ಕಲಬುರಗಿ: ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಆದ ಒಪ್ಪಂದದ ಪ್ರಕಾರ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ತಮ್ಮ ಹುದ್ದೆಯಲ್ಲಿ ಪೂರ್ಣಾವಧಿ ಮುಗಿಸಲಿದ್ದಾರೆ ಎಂದು ಮಾಜಿ ಸಿಎಂ ಹಾಗೂ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹೇಳಿದ್ದಾರೆ.
ಕಲಬುರಗಿಯಲ್ಲಿ ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿಯವರು ಎಷ್ಟು ಸಮಯದವರೆಗೆ ಮುಖ್ಯಮಂತ್ರಿಯಾಗಿರುತ್ತಾರೆ ಎಂದು ಮಾತ್ರ ವಿವರ ನೀಡಲಿಲ್ಲ.
ಮೇ 23ರ ನಂತರ ರಾಜ್ಯ ರಾಜಕೀಯದಲ್ಲಿ ಮಹತ್ವದ ಬದಲಾವಣೆಯಾಗಲಿದ್ದು 20 ಮಂದಿ ಕಾಂಗ್ರೆಸ್ ನ ಅತೃಪ್ತ ಶಾಸಕರು ಬಿಜೆಪಿಯನ್ನು ಸೇರಲು ಯೋಚಿಸುತ್ತಿದ್ದಾರೆ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪನವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಮೊದಲ ದಿನದಿಂದಲೇ ಯಡಿಯೂರಪ್ಪ ಮತ್ತು ಬಿಜೆಪಿ ನಾಯಕರು ಮೈತ್ರಿ ಸರ್ಕಾರವನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿದ್ದಾರೆ. ಕಾಂಗ್ರೆಸ್ ಶಾಸಕರನ್ನು ಹಣಕೊಟ್ಟು ಖರೀದಿಸಲು ನೋಡುತ್ತಿದ್ದಾರೆ. ತಾವು ಬಿಜೆಪಿಗೆ ಯಾವುದೇ ಕಾರಣಕ್ಕೂ ಸೇರುವುದಿಲ್ಲ ಎಂದು ಕೆಲ ಕಾಂಗ್ರೆಸ್ ಶಾಸಕರು ಯಡಿಯೂರಪ್ಪ ಮತ್ತು ಅವರ ತಂಡದವರಿಗೆ ಹೇಳಿದ್ದಾರೆ. ಇನ್ನು ಕೆಲವರು ಬಿಜೆಪಿಯಿಂದ ಹಣ ಪಡೆದವರು ಹಿಂತಿರುಗಿಸಿದ್ದಾರೆ ಎಂದರು.
ಮುಂಬೈಯ ರೆಸಾರ್ಟ್ ನಲ್ಲಿ ಕಾಂಗ್ರೆಸ್ ಶಾಸಕರನ್ನು ತಮ್ಮ ತೆಕ್ಕೆಯಲ್ಲಿರಿಸಲು ಬಿಜೆಪಿ ಯಾವ ಮೂಲದಿಂದ ಹಣ ಖರ್ಚು ಮಾಡಿತು, ಅದು ಅಮಿತ್ ಶಾ ಅವರಿಂದ ಬಂದ ಹಣವೇ ಅಥವಾ ನರೇಂದ್ರ ಮೋದಿಯಿಂದಲೇ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದರು.
ರಾಜ್ಯದಲ್ಲಿನ ಬರಗಾಲ ಪರಿಸ್ಥಿತಿಯನ್ನು ಕುಮಾರಸ್ವಾಮಿ ಸಂಪುಟ ನಿರ್ಲಕ್ಷ್ಯ ಮಾಡುತ್ತಿದೆ ಎಂದು ಕೇಳಿಬರುತ್ತಿರುವ ಆರೋಪಕ್ಕೆ ಉತ್ತರಿಸಿದ ಸಿದ್ದರಾಮಯ್ಯ, ಚುನಾವಣಾ ಆಯೋಗದ ಮಾರ್ಗಸೂಚಿ ಪ್ರಕಾರ, ಚುನಾವಣಾ ಪ್ರಕ್ರಿಯೆ ಮುಗಿಯುವವರೆಗೆ ಸಚಿವರುಗಳು ಬರಗಾಲ ಸ್ಥಿತಿಯನ್ನು ಅಧ್ಯಯನ ಮಾಡುವಂತಿಲ್ಲ. ಬಿಜೆಪಿಯವರು ಬರಪೀಡಿತ ಜಿಲ್ಲೆಗಳಿಗೆ ಹೋಗಿ ಪರಿಸ್ಥಿತಿ ಅವಲೋಕಿಸಿ ಸಂಬಂಧಪಟ್ಟ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಬಹುದಾಗಿತ್ತು ಎಂದರು.
SCROLL FOR NEXT