ರಾಜಕೀಯ

ಆಪರೇಷನ್ ಹಸ್ತ ನಡೆಸಲು ಕಾಂಗ್ರೆಸ್ ಸಜ್ಜು: ಸತೀಶ್ ಜಾರಕಿಹೊಳಿ

Lingaraj Badiger
ಬೆಳಗಾವಿ: ಆಪರೇಷನ್​ ಕಮಲದ ಮೂಲಕ ಬಿಜೆಪಿ 20 ಶಾಸಕರು ಸೆಳೆದರೆ, ಕಾಂಗ್ರೆಸ್​ ಕೂಡ ಆಪರೇಷನ್​ ಹಸ್ತ ನಡೆಸಿ ಸರ್ಕಾರ ಉಳಿಸಿಕೊಳ್ಳಲು ಪ್ರಯತ್ನಿಸಲಿದೆ ಎಂದು ಅರಣ್ಯ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮಗೆ ಯಾರು ಬೇಕೋ ಅಂತಹ ಶಾಸಕರ ಜೊತೆ ಸಂಪರ್ಕ ಸಾಧಿಸಿದ್ದೇವೆ. ಆಪರೇಷನ್​ ಹಸ್ತ ಮಾಡುವಂತೆ ನಮಗೆ ಪಕ್ಷದ ನಾಯಕರು ಸೂಚನೆ ನೀಡಿಲ್ಲ. ಬಿಜೆಪಿ ಶಾಸಕ ಉಮೇಶ್​ ಕತ್ತಿ ನಮ್ಮ ಸಂಪರ್ಕದಲ್ಲಿದ್ದಾರೆಯೇ ಅಥವಾ ಇಲ್ಲವೋ ಎಂಬುದನ್ನು ಮೇ 24 ರಂದು ಅವಶ್ಯಕತೆ ಬಂದಾಗ ತಿಳಿಸುವುದಾಗಿ ಸತೀಶ್​ ಜಾರಕಿಹೊಳಿ ಹೇಳಿದರು.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್​ ಶಾ, ಪ್ರಧಾನಿ ನರೇಂದ್ರ ಮೋದಿ ಆಪರೇಷನ್​ ಕಮಲ ನಡೆಸುವಂತೆ ಬಿಜೆಪಿ ನಾಯಕರಿಗೆ ಹೇಳಿಲ್ಲ. ಆದರೂ ಅವರು ಅಧಿಕಾರ ಹಿಡಿಯಲು ಆಪರೇಷನ್​ ಮಾಡುತ್ತಿದ್ದಾರೆ. ಅದರಂತೆ ನಾವು ಸಹ ಪ್ರತಿತಂತ್ರ ರೂಪಿಸಿಸಿದ್ದು ಆಪರೇಷನ್​ ಹಸ್ತಕ್ಕೆ ಸಜ್ಜಾಗಿದ್ದೇವೆ. ಜಿಲ್ಲಾ ಮಟ್ಟದಲ್ಲಿ ತಮಗೆ ಯಾರು ವಿಶ್ವಾಸಾರ್ಹರೋ ಅವರೊಂದಿಗೆ ನಾವು ಸಂಪರ್ಕದಲ್ಲಿದ್ದೇವೆ ಎಂದು ಹೇಳಿದರು.
2028ರಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್​ ರಾಜ್ಯದ ಮುಖ್ಯಮಂತ್ರಿ ಆಗುತ್ತಾರೆ ಎಂಬ ಪಂಚಮಶಾಲಿ ಮಠದ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಮುಖ್ಯಮಂತ್ರಿ ಆದರೆ ಒಳ್ಳೆಯದು. ಆದರೆ ಯಾವ ಪಕ್ಷದಿಂದ ಆಗಲಿದ್ದಾರೆ ಎಂದು ವ್ಯಂಗ್ಯವಾಡಿದರು.  
ಶಾಸಕಾಂಗ ಪಕ್ಷದ ಸಭೆಯಲ್ಲಿ ಶಾಸಕರು ಯಾರನ್ನು ನಾಯಕನನ್ನಾಗಿ ಆಯ್ಕೆ ಮಾಡುತ್ತಾರೋ ಅವರು ಮುಖ್ಯಮಂತ್ರಿ ಆಗುತ್ತಾರೆ. ಹಾಗೆ ನೋಡಿದರೆ ಮುಖ್ಯಮಂತ್ರಿಯಾಗುವ ಪಟ್ಟಿಯಲ್ಲಿ ತುಂಬಾ ಜನರಿದ್ದಾರೆ. ಆದರೂ ಕಾಂಗ್ರೆಸ್​ ಪಕ್ಷದಿಂದ ಹೆಬ್ಬಾಳ್ಕರ್ ಮುಖ್ಯಮಂತ್ರಿ ಆಗುವುದಾದರೆ ಸ್ವಾಗತಿಸುತ್ತೇನೆ ಎಂದು ತಿಳಿಸಿದರು.
SCROLL FOR NEXT