ರಾಜಕೀಯ

ರಾಜ್ಯದ ಒಳಿತಿಗಾಗಿ ಬಿಜೆಪಿ ಸರ್ಕಾರ ರಚನೆಗೆ ಅವಕಾಶ ನೀಡಿ: ರಾಜ್ಯಪಾಲರಿಗೆ ಶ್ರೀರಾಮುಲು ಮನವಿ

Raghavendra Adiga
ಧಾರವಾಡ: ಮೈತ್ರಿ ಸರ್ಕಾರದ ನಾಯಕರಲ್ಲಿ ಭಿನ್ನಾಭಿಪ್ರಾಯ ತಾರಕಕ್ಕೇರಿದ್ದು, ರಾಜ್ಯದ ಅಭಿವೃದ್ಧಿ ದೃಷ್ಠಿಯಿಂದ ಬಿಜೆಪಿಗೆ ಸರ್ಕಾರ ರಚಿಸಲು ಅನುವು ಮಾಡಿಕೊಡಿ ಎಂದು ಬಿಜೆಪಿ ಶಾಸಕ ಶ್ರೀರಾಮುಲು ರಾಜ್ಯಪಾಲರಿಗೆ ಮನವಿ ಮಾಡಿದ್ದಾರೆ.
ಉಪ ಚುನಾವಣೆ ಪ್ರಚಾರದ ವೇಳೆ ಕುಂದಗೋಳ‌ ತಾಲೂಕಿನ ಚಾಕಲಬ್ಬಿ ಗ್ರಾಮದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿನ ಮೈತ್ರಿ ಸರ್ಕಾರ ಗೊಂದಲದಿಂದಾಗಿ ಅಭಿವೃದ್ಧಿ ಕುಂಠಿತವಾಗಿದೆ. ಹೀಗಾಗಿ ಬಿಜೆಪಿಗೆ ಸರ್ಕಾರ ರಚಿಸಲು ಅನುವು ಮಾಡಿಕೊಡಬೇಕು. ರಾಜ್ಯಪಾಲರು ಬಿಜೆಪಿಗೆ ಅವಕಾಶ ನೀಡಿದರೆ ನಾವು ಬಹುಮತ ಸಾಬೀತುಪಡಿಸಲು ಸಿದ್ದವಾಗಿದ್ದೇವೆ. ಇಲ್ಲವಾದಲ್ಲಿ ಮಧ್ಯಂತರ ಚುನಾವಣೆ ಎದುರಿಸಲು ನಾವು ತಯಾರಿದ್ದೇವೆ ಎಂದು ಹೇಳುವ ಮೂಲಕ ಮೈತ್ರಿ ಸರ್ಕಾರಕ್ಕೆ ವಿಧಾನ ಸಭೆಗೆ ಮಧ್ಯಂತರ ಚುನಾವಣೆ ಎದುರಿಸಲು ಮುಂದಾಗಿ ಎಂದು ಮೈತ್ರಿ ನಾಯಕರಿಗೆ ಸವಾಲು ಹಾಕಿದ್ದಾರೆ.
ಜೆಡಿಎಸ್​ ರಾಜ್ಯಾಧ್ಯಕ್ಷ ಎಚ್​. ವಿಶ್ವನಾಥ್ ಅವರು ಸಿದ್ದರಾಮಯ್ಯ ಅವರ ಬೆಂಬಲಿಗರು ಹೇಳಿರುವ ಚಮಚಾಗಿರಿ ಮಾತು  ನೂರಕ್ಕೆ ನೂರರಷ್ಟು ಸತ್ಯ. ಮೈತ್ರಿ ಪಕ್ಷಗಳ ಶಾಸಕರಿಗೂ ಬೇಡವಾದ ಸರ್ಕಾರವನ್ನು ವಿಸರ್ಜಿಸಬೇಕು. ಸರ್ಕಾರ ವಿಸರ್ಜಿಸಿದರೆ ಮಧ್ಯಂತರ ಚುನಾವಣೆಗೆ ತೆರಳಲು ಸಿದ್ಧರಿದ್ದೇವೆ ಎಂದು ತಿಳಿಸಿದರು.
ಚುನಾವಣೆ ಪ್ರಚಾರದ ನೆಪದಲ್ಲಿ ಮುಖ್ಯಮಂತ್ರಿ ಈಗ ಇತ್ತ ಕಡೆಗೆ ಆಗಮಿಸುತ್ತಿದ್ದಾರೆ. ವಿಧಾನ ಸಭೆ ಚುನಾವಣೆ ವೇಳೆ ಹುಬ್ಬಳ್ಳಿಯಲ್ಲಿ ಮನೆ ಮಾಡಿ ಚುನಾವಣೆ ಬಳಿಕ ಮನೆಯನ್ನೂ ಖಾಲಿ ಮಾಡಿಕೊಂಡು ಹೋದರು. ಹಾಸನ, ಮಂಡ್ಯ, ರಾಮನಗರ ,ಮೈಸೂರು ಸೇರಿದಂತೆ ಐದು ಜಿಲ್ಲೆಗೆ ಕೊಟ್ಟ ಅನುದಾನವನ್ನು ಉತ್ತರ ಕರ್ನಾಟಕ ಭಾಗಕ್ಕೂ ನೀಡಲಿ ಎಂದು ಶ್ರೀರಾಮುಲು ಒತ್ತಾಯಿಸಿದರು.
ಕುಮಾರಸ್ವಾಮಿ ಮುಖ್ಯಮಂತ್ರಿ ಎಂದು ಒಪ್ಪಲು ಮೈತ್ರಿ ಸರ್ಕಾರದ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ಸಿದ್ಧರಿಲ್ಲ. ದುರಂತವೆಂದರೆ 104 ಸ್ಥಾನ ಪಡೆದು ಬಿಜೆಪಿ ವಿರೋಧ ಪಕ್ಷದಲ್ಲಿದ್ದೇವೆ. ಮೈತ್ರಿ ಸರ್ಕಾರದಲ್ಲಿ  ಭಿನ್ನಾಭಿಪ್ರಾಯ ಇರುವ ಹಿನ್ನೆಲೆಯಲ್ಲಿ ಸರ್ಕಾರ ರಚಿಸಲು ನಮಗೆ ಅವಕಾಶ ಕೊಡಬೇಕು ಎಂದು ಅವರು ಒತ್ತಾಯಿಸಿದರು.
SCROLL FOR NEXT