ರಾಜಕೀಯ

ಮೋದಿ ಜತೆ ಕುಮಾರಸ್ವಾಮಿ ಸರ್ಕಾರ ರಚನೆ ಬಗ್ಗೆ ಪ್ರಸ್ತಾಪಿಸಿಲ್ಲ: ಹೆಚ್.ಡಿ.ರೇವಣ್ಣ ಸ್ಪಷ್ಟನೆ

Lingaraj Badiger
ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಜೊತೆ ಸೇರಿ ಸರ್ಕಾರ ರಚಿಸುವ ಕುರಿತು ಮುಖ್ಯಮಂತ್ರಿ ಹೆಚ್. ಡಿ.ಕುಮಾರಸ್ವಾಮಿ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಬಳಿ ಯಾವುದೇ ಪ್ರಸ್ತಾಪ ಇಟ್ಟಿಲ್ಲ. ಇವೆಲ್ಲಾ ಶುದ್ಧ ಸುಳ್ಳು ಎಂದು ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ಸ್ಪಷ್ಟನೆ ನೀಡಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಅವರು ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ತಾವು ಅವರ ಜೊತೆಗಿದ್ದು, ರಾಜ್ಯದಲ್ಲಿ ತಲೆದೋರಿರುವ ಬರಗಾಲ ಪರಿಸ್ಥಿತಿ ಕುರಿತು ಪ್ರಧಾನಿಯೊಂದಿಗೆ ಚರ್ಚಿಸಿದ್ದೇವೆಯೇ ಹೊರತು ಸರ್ಕಾರ ರಚನೆ ಕುರಿತು ಯಾವುದೇ ಮಾತುಕತೆ ನಡೆಸಿಲ್ಲ ಎಂದರು.
ರಾಜ್ಯದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರಕ್ಕೆ ಯಾವುದೇ ಹಾನಿಯಾನಿಯಾಗುವುದಿಲ್ಲ . ಈ ಹಿಂದೆ ಕುಮಾರಸ್ವಾಮಿ ಅವರು ಬಜೆಟ್ ಮಂಡನೆ ಮಾಡುವ ಸಂದರ್ಭದಲ್ಲಿ ಸರ್ಕಾರಕ್ಕೆ ಯಾವುದೇ ತೊಂದರೆ ಬರದು ಎಂದು ಹೇಳಿಕೆ ನೀಡಿದ್ದೆ. ಅದು ನಿಜವಾಗಿತ್ತು. ಮೇ 23ರ ಬಳಿಕ ಮೈತ್ರಿ ಸರ್ಕಾರ ಅಸ್ಥಿರಗೊಳ್ಳುವುದಿಲ್ಲ. ಲೋಕಸಭಾ ಚುನಾವಣೆ ಫಲಿತಾಂಶದಲ್ಲಿ ಜೆಡಿಎಸ್‍ 6 ಸ್ಥಾನಗಳನ್ನು ಗೆಲ್ಲಲ್ಲಿದ್ದು, ನಮ್ಮ ಸರ್ಕಾರ ಸುರಕ್ಷಿತವಾಗಿರಲಿದೆ ಎಂದು ರೇವಣ್ಣ ಭವಿಷ್ಯ ನುಡಿದರು.
3 ತಿಂಗಳ ಹಿಂದೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ದೆಹಲಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಬರಗಾಲ ಪರಿಸ್ಥಿತಿ ಎದುರಿಸಲು ಕೇಂದ್ರದಿಂದ ಅನುದಾನ ಬಿಡುಗಡೆ ಕುರಿತು ಪ್ರಧಾನಿ ಮೋದಿ ಅವರ ಜೊತೆ ಚರ್ಚೆ ನಡೆಸಲಾಗಿತ್ತು. ಆಗ ಕಾಂಗ್ರೆಸ್ ಪಕ್ಷದ ಜೊತೆ ನಮ್ಮ ಸಂಬಂಧ ಸರಿಯಿಲ್ಲ. ಲೋಕಸಭೆ ಚುನಾವಣೆ ಬಳಿಕ ದೇವೇಗೌಡರನ್ನು ಒಪ್ಪಿಸಿ ಬಿಜೆಪಿ ಜೊತೆ ಸರ್ಕಾರ ರಚಿಸುವ ಪ್ರಸ್ತಾಪ ಮಾಡಲಾಗಿದೆ ಎಂದು ಬಿಜೆಪಿ ನಾಯಕರು ಅಪಪ್ರಚಾರ ಮಾಡುತ್ತಿರುವ ಬಗ್ಗೆ ರೇವಣ್ಣ ಈ ರೀತಿ ಪ್ರತಿಕ್ರಿಯೆ ನೀಡಿದರು. 
ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಒಳಗಿಂದೊಳಗೆ ಬಿಜೆಪಿ ಜೊತೆ ಸಂಬಂಧ ಬೆಳೆಸಿ ಕೊನೆಗೆ ಕಾಂಗ್ರೆಸ್ ಜೊತೆ ಹೋಗಿದ್ದು ಸರಿಯಲ್ಲ. ಎನ್‍ಡಿಎ ಒಕ್ಕೂಟ ಸೇರಬೇಕೆಂದರೆ ಕಾಂಗ್ರೆಸ್ ಜೊತೆಗಿನ ಮೈತ್ರಿಯನ್ನು ಆದಷ್ಟು ಬೇಗ ಕಡಿದುಕೊಂಡು ಬನ್ನಿ ಎಂದು ಮೋದಿ, ಕುಮಾರಸ್ವಾಮಿ ಅವರಿಗೆ ಹೇಳಿದ್ದರು ಎಂದು ಬಿಜೆಪಿಯ ಕೆಲ ನಾಯಕರು ಹೇಳಿಕೆ ನೀಡಿದ್ದರು. 
ಲೋಕಸಭಾ ಚುನಾವಣೆ ಫಲಿತಾಂಶ ಕುರಿತು ಪ್ರತಿಕ್ರಿಯಿಸಿದ ರೇವಣ್ಣ, ಹಾಸನದಲ್ಲಿ ಪುತ್ರ ಪ್ರಜ್ವಲ್ ಕನಿಷ್ಠ 2 ಲಕ್ಷ ಮತಗಳ ಅಂತರಗಳಿಂದ ಗೆಲುವು ಸಾಧಿಸಲಿದ್ದಾರೆ. ಪ್ರಜ್ವಲ್ ಸ್ಥಾನದಲ್ಲಿ ದೇವೇಗೌಡರು ಸ್ಪರ್ಧಿಸಿದ್ದರೆ 5 ಲಕ್ಷ ಮತಗಳಷ್ಟು ಅಂತರದಲ್ಲಿ ಗೆಲ್ಲುತ್ತಿದ್ದರು. ತುಮಕೂರು ಹಾಗೂ ಮಂಡ್ಯದಲ್ಲಿಯೂ ಜೆಡಿಎಸ್ ಅಭ್ಯರ್ಥಿಗಳೇ ಗೆಲುವು ಸಾಧಿಸಲಿದ್ದಾರೆ. ಮಂಡ್ಯದಲ್ಲಿ ಜೆಡಿಎಸ್‍ನ 8 ಶಾಸಕರಿದ್ದಾಗಲೂ ಜೆಡಿಎಸ್ ಅಭ್ಯರ್ಥಿ ನಿಖಿಲ್ ಗೆಲ್ಲುವುದಿಲ್ಲ ಎನ್ನುವುದರಲ್ಲಿ ಯಾವುದೇ ಹುರುಳಿಲ್ಲ. ಕಾಂಗ್ರೆಸ್ ಹಾಗೂ ಜೆಡಿಎಸ್‍ ಪಕ್ಷಗಳ ಪಾರಂಪರಿಕ ಮತಗಳೆಂದಿಗೂ ಬದಲಾಗುವುದಿಲ್ಲ. ಹೀಗಾಗಿ ನಮಗೆ ನಮ್ಮ ಗೆಲುವಿನ ಬಗ್ಗೆ ವಿಶ್ವಾಸವಿದೆ ಎಂದರು.
SCROLL FOR NEXT