ರಾಜಕೀಯ

ಕಾಂಗ್ರೆಸ್ ಪಕ್ಷದ ಅಸಮರ್ಥ ನಾಯಕತ್ವದ ವಿರುದ್ಧ ಧ್ವನಿ ಎತ್ತಿದ್ದಕ್ಕೆ ನೋಟಿಸ್: ಮತ್ತೆ ಗುಡುಗಿದ ರೋಷನ್ ಬೇಗ್

Srinivasamurthy VN
ಬೆಂಗಳೂರು: ಕಾಂಗ್ರೆಸ್ ಪಕ್ಷದ ಅಸಮರ್ಥ ನಾಯಕತ್ವದ ವಿರುದ್ಧ ನಾನು ಧನಿ ಎತ್ತಿದ್ದಕ್ಕೇ ನನಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ಹಿರಿಯ ಶಾಸಕ ರೋಷನ್ ಬೇಗ್ ಮತ್ತೆ ವಾಗ್ದಾಳಿ ನಡೆಸಿದ್ದಾರೆ.
ಬೆಳಗ್ಗೆ ಮಾಧ್ಯಮಗಳಲ್ಲಿ ಹೇಳಿಕೆ ನೀಡಿದ ಬೆನ್ನಲ್ಲೇ ಕೆಪಿಸಿಸಿ ರೋಷನ್ ಬೇಗ್ ಅವರಿಗೆ ಒಂದು ವಾರದಲ್ಲಿ ಉತ್ತರಿಸುವಂತೆ ನೋಟಿಸ್ ಜಾರಿ ಮಾಡಿದೆ. ಈ ಕುರಿತಂತೆ ಟ್ವಿಟರ್ ನಲ್ಲಿ ಮತ್ತೆ ತಮ್ಮ ಅಸಮಾಧಾನ ವ್ಯಕ್ತಪಡಿಸಿರುವ ರೋಷನ್ ಬೇಗ್ ಅವರು, ನಾನು ಕಾಂಗ್ರೆಸ್ ಪಕ್ಷದ ಎಲ್ಲ ನಾಯಕರ ವಿರುದ್ಧ ಮಾತನಾಡುತ್ತಿಲ್ಲ. ಪಕ್ಷದಲ್ಲಿ ನಾನು ಅತ್ಯಂತ ಗೌರವ ಹೊಂದಿರುವ ಸಾಕಷ್ಟು ನಾಯಕರಿದ್ದಾರೆ. ಡಿಕೆ ಶಿವಕುಮಾರ್, ರಾಮಲಿಂಗಾ ರೆಡ್ಡಿ, ಎಂಬಿ ಪಾಟೀಲ್, ಕೆಜೆ ಜಾರ್ಜ್ ರಂತಹ ನಾಯಕರು ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಕೆಲಸ ಮಾಡುತ್ತಿದ್ದಾರೆ. ನನ್ನ ಮಾತು ಇವರಂತಹ ನಾಯಕರ ವಿರುದ್ಧವಲ್ಲ.
ಆದರೆ ತಮ್ಮ ಸ್ವಾರ್ಥಕ್ಕಾಗಿ ಪಕ್ಷವನ್ನು ಬಳಸಿಕೊಳ್ಳುತ್ತಿರುವ ನಾಯಕರ ವಿರುದ್ಧ ಮಾತ್ರ ನಾನು ಮಾತನಾಡುತ್ತಿದ್ದೇನೆ. ಪಕ್ಷಕ್ಕಾಗಿ ದುಡಿಯುವ ನಾಯಕರನ್ನು ಪಕ್ಷದ ಈ ಅಸಮರ್ಥ ನಾಯಕತ್ವ ತಮ್ಮ ವೈಯುಕ್ತಿಕ ಎಟಿಎಂಗಳಂತೆ ದುಡಿಸಿಕೊಳ್ಳುತ್ತಿದೆ.  ನನಗೆ ನೋಟಿಸ್ ಜಾರಿ ಮಾಡುವ ಮೂಲಕ ಅವರು ವಿಚಾರವನ್ನು ಮತ್ತು ಜನರ ಗಮನವನ್ನು ಬೇರೆಡೆ ಸೆಳೆಯುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ ಎಂದು ಬೇಗ್ ಟ್ವೀಟ್ ಮೂಲಕ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
SCROLL FOR NEXT