ರಾಜಕೀಯ

ಮೈತ್ರಿ ಸರ್ಕಾರ 'ಉಳಿಸಲು' ಕಾಂಗ್ರೆಸ್ ಹೈಕಮಾಂಡ್ ಎಂಟ್ರಿ: ಗುಲಾಂ ನಬಿ, ವೇಣುಗೋಪಾಲ್ ನಿಯೋಜನೆ

Shilpa D
ಬೆಂಗಳೂರು: ಚೊಚ್ಚಲ ಒಂದು ವರ್ಷ ಅಧಿಕಾರ ಪೂರೈಸಿರುವ ರಾಜ್ಯ ಜೆಡಿಎಸ್- ಕಾಂಗ್ರೆಸ್ ಮೈತ್ರಿ ಸರ್ಕಾರದ ಸ್ಥಿರತೆಗೆ ಎದುರಾಗಿರುವ 'ಗಂಡಾಂತರ' ತಪ್ಪಿಸುವ ಕಾರ್ಯತಂತ್ರ ರೂಪಿಸಿ, ರಾಜ್ಯ ಕಾಂಗ್ರೆಸ್ ನಾಯಕರಿಗೆ ನೆರವಾಗಲು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಪಕ್ಷದ ಕೇಂದ್ರೀಯ ತಂಡವನ್ನು ನಿಯೋಜಿಸಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಉಂಟಾಗಿರುವ ತೀವ್ರ ಹಿನ್ನಡೆಯ ಕಾರಣ ರಾಜ್ಯ ಮೈತ್ರಿ ಕೂಟ ಸರ್ಕಾರ ಗಂಭೀರ ಬಿಕ್ಕಟ್ಟು ಎದುರಿಸುತ್ತಿದ್ದು, ಅವುಗಳನ್ನು ನಿವಾರಿಸಿ ಚೊಚ್ಚಲ ವರ್ಷ ಪೂರೈಸಿರುವ ಸರ್ಕಾರವನ್ನು ಹೇಗಾದರೂ ಮಾಡಿ ಉಳಿಸಲು ಸಂದರ್ಭಕ್ಕೆ ತಕ್ಕಂತೆ ಕಾರ್ಯತಂತ್ರ ರೂಪಿಸಲು ತಂಡಕ್ಕೆ ಸೂಚನೆ ನೀಡಿದ್ದಾರೆ.
ಮೈತ್ರಿ ಕೂಟ ಸರ್ಕಾರದ ಸ್ಥಿರತೆಗೆ ಎದುರಾಗುವ ಯಾವುದೇ 'ಬೆದರಿಕೆ' ನಿವಾರಿಸಲು ರಾಜ್ಯ ನಾಯಕರಿಗೆ ನೆರವಾಗಲು, ಮಾಜಿ ಕೇಂದ್ರ ಸಚಿವ ಗುಲಾಂ ನಬಿ ಅಜಾದ್ ಹಾಗೂ ಪಕ್ಷದ ಕರ್ನಾಟಕ ಉಸ್ತುವಾರಿ ಕೆ.ಸಿ, ವೇಣುಗೋಪಾಲ್ ಅವರನ್ನು ನಿಯೋಜಿಸಲಾಗಿದ್ದು, ಇಂದು ಸಂಜೆಯಿಂದ ತಮ್ಮ ಕಾರ್ಯ ಆರಂಭಿಸಲಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಅದ್ಭುತ ಗೆಲುವು ಪಡೆದು ಹೊಸ ಹುಮ್ಮಸ್ಸಿನಲ್ಲಿರುವ ಬಿಜೆಪಿ ನಾಯಕರು, ಏನಾದರೂ ಮಾಡಿ ಸರ್ಕಾರ ರಚಿಸಬೇಕು ಎಂಬ ಹಠಕ್ಕೆ ಬಿದ್ದಂತೆ ಕಂಡುಬರುತ್ತಿದ್ದು, ಅತೃಪ್ತ ಕಾಂಗ್ರೆಸ್, ಜೆಡಿಎಸ್ ಶಾಸಕರನ್ನು ಸೆಳೆದು ಮೈತ್ರಿ ಸರ್ಕಾರ ಉರುಳಿಸಲು ಶತ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. 
ಮೈತ್ರಿ ಸರ್ಕಾರ ಉಳಿಸಲು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರಣಿ ಸಭೆಗಳನ್ನು ನಡೆಸುತ್ತಿದ್ದು, ಭಿನ್ನಮತೀಯ ಶಾಸಕರೊಂದಿಗೆ ನಿರಂತರ ಸಂಪರ್ಕ ಸಾಧಿಸಿ, ಯಾವುದೇ ಕಾರಣಕ್ಕೂ ಪಕ್ಷ ತೊರೆಯದಂತೆ, ಸರ್ಕಾರ ಉಳಿಸುವಂತೆ ಮನವೊಲಿಸುತ್ತಿದ್ದಾರೆ.
ಕೆಲವು ಬಂಡಾಯ ಶಾಸಕರಿಗೆ ರಾಜ್ಯ ಸಂಪುಟದಲ್ಲಿ ಸಚಿವ ಸ್ಥಾನಗಳನ್ನು ಕಲ್ಪಿಸುವ ಭರವಸೆ ನೀಡಲಾಗಿದ್ದು, ಸಂಪುಟದಲ್ಲಿ ಖಾಲಿ ಉಳಿದಿರುವ ಮೂರು ಸಚಿವ ಸ್ಥಾನ ತುಂಬುವ ಆಶ್ವಾಸನೆ ನೀಡಲಾಗಿದೆ ಎಂದು ವರದಿಯಾಗಿದೆ, ಸಂಪುಟ ಪುನರ್ ರಚನೆಯಲ್ಲೂ ಮತ್ತಷ್ಟು ಶಾಸಕರಿಗೆ ಸಚಿವ ಸ್ಥಾನ ನೀಡುವ ಭರವಸೆ ನೀಡಿ ಕಾಂಗ್ರೆಸ್ ತೊರೆಯದಂತೆ ಮನವೊಲಿಸಲಾಗುತ್ತಿದೆ.
ಹೆಚ್ಚಿನ ಸಂಖ್ಯೆಯ ಅತೃಪ್ತ ಶಾಸಕರಿಗೆ ಸಂಪುಟದಲ್ಲಿ ಅವಕಾಶ ಕಲ್ಪಿಸಲು ಸಾಧ್ಯವಾಗುವಂತೆ ಖಾಲಿ ಉಳಿದಿರುವ ಸಚಿವ ಸ್ಥಾನಗಳ ಭರ್ತಿ, ಜತೆಗೆ ಸಂಪುಟ ಪುನಾರಚನೆಯ ಸಾಧ್ಯತೆಗಳನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ದೃಢಪಡಿಸಿದ್ದಾರೆ.
224 ಸದಸ್ಯ ಬಲದ ರಾಜ್ಯ ವಿಧಾನಸಭೆಯಲ್ಲಿ ಪ್ರತಿಪಕ್ಷ ಬಿಜೆಪಿ 105 ಶಾಸಕರನ್ನು ಹೊಂದಿದ್ದು, ಬಹುಮತದಷ್ಟು ಶಾಸಕರನ್ನು ಹೊಂದಿಸಲು ಎಲ್ಲ ಪ್ರಯತ್ನ ನಡೆಸುತ್ತಿದೆ. ತನ್ನ ನಿರೀಕ್ಷೆ ಸಂಖ್ಯೆಯ ಶಾಸಕರು ಲಭ್ಯವಾದ ತಕ್ಷಣ, ಬಿಜೆಪಿ ಸರ್ಕಾರ ರಚಿಸುವ ಹಕ್ಕು ಮಂಡಿಸುವ ನಿರೀಕ್ಷೆಯಿದೆ ಎಂದು ಹೇಳಲಾಗುತ್ತಿದೆ.
SCROLL FOR NEXT