ರಾಜಕೀಯ

ಆಪರೇಷನ್ ಕಮಲಕ್ಕೆ ಬ್ರೇಕ್ ಹಾಕುವಂತೆ ವರಿಷ್ಠರಿಂದ ಸೂಚನೆ: ಯಡಿಯೂರಪ್ಪ

Lingaraj Badiger
ಬೆಂಗಳೂರು: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವನ್ನು ಅಸ್ಥಿರಗೊಳಿಸುವ ಆಪರೇಷನ್‍ ಕಮಲಕ್ಕೆ ಬಿಜೆಪಿ ವರಿಷ್ಠರು ಸದ್ಯಕ್ಕೆ ಬ್ರೇಕ್ ಹಾಕುವಂತೆ ಸೂಚಿಸಿದ್ದಾರೆ.
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಕಾಂಗ್ರೆಸ್‍ನ ಒಂದಿಬ್ಬರು ಶಾಸಕರನ್ನು ಮುಂದೆಬಿಟ್ಟು ಸರ್ಕಾರದಲ್ಲಿ ಅತೃಪ್ತಿಯ ನಾಟಕವಾಡಿಸುತ್ತಿರುವುದು ಬಿಜೆಪಿ ಹೈಕಮಾಂಡ್‍ಗೆ ಗಮನಕ್ಕೆ ಬಂದಿದೆ. ಹೀಗಾಗಿ ರಾಜ್ಯ ಸರ್ಕಾರ ಅಸ್ಥಿರಗೊಳಿಸುವ ಪ್ರಯತ್ನ ಮಾಡದಂತೆ ಪಕ್ಷದ ವರಿಷ್ಠರು ನಿರ್ದೇಶನ ಕೊಟ್ಟಿರುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಹೇಳಿದ್ದಾರೆ.
ಮೈತ್ರಿ ಸರ್ಕಾರದಲ್ಲಿ ಸಿದ್ದರಾಮಯ್ಯ ಸೇರಿದಂತೆ ಕೆಲವರು ನಾಟಕವಾಡುತ್ತಿದ್ದಾರೆ. ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮುಂದಾಗಿರುವ ಸಿದ್ದರಾಮಯ್ಯ, ಬಿಜೆಪಿಗೆ ನಾಲ್ವರನ್ನು ಕಳುಹಿಸುವ ಮೂಲಕ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಪ್ರಯತ್ನಿಸುತ್ತಿರುವುದು ಸ್ಪಷ್ಟವಾಗಿದೆ. ಹೀಗಾಗಿ ಆಪರೇಷನ್ ಕಮಲಕ್ಕೆ ತಡೆ ಹಾಕುವಂತೆ ವರಿಷ್ಠರು ಸ್ಪಷ್ಟ ನಿರ್ದೇಶನ ನೀಡಿದ್ದಾರೆ ಎಂದು ಅವರು ಹೇಳಿದರು.
ನಗರದ ಡಾಲರ್ಸ್ ಕಾಲೋನಿ ನಿವಾಸಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ, ಕಾಂಗ್ರೆಸ್-ಜೆಡಿಎಸ್ ಪಕ್ಷದ ನಾಯಕರು ಒಟ್ಟಾಗಿ ರಾಜ್ಯದ ಅಭಿವೃದ್ಧಿಯತ್ತ ಗಮನ ಕೊಡಲಿ. ನಾವು ಸರ್ಕಾರವನ್ನು ಪತನಗೊಳಿಸುವ ಪ್ರಯತ್ನ ಮಾಡದೇ ಅದು ತಾನಾಗಿಯೇ ಅಸ್ಥಿರಗೊಳ್ಳುವವರೆಗೂ ಕಾಯುತ್ತೇವೆ ಎಂದರು. 
ಈ ಬಾರಿ ಕೇಂದ್ರ ಸಚಿವ ಸಂಪುಟದಲ್ಲಿ ರಾಜ್ಯಕ್ಕೆ 4ಸ್ಥಾನ ನೀಡಿ ಉತ್ತಮ ಖಾತೆಗಳನ್ನೂ ನೀಡಿರುವುದು ತೃಪ್ತಿಯಾಗಿದೆ. ಆದರೂ ಮುಂದಿನ ಸಚಿವ ಸಂಪುಟ ವಿಸ್ತರಣೆ ವೇಳೆ ಇನ್ನೂ ಒಂದಿಬ್ಬರಿಗೆ ಸಚಿವ ಸ್ಥಾನ ನೀಡುವ ಭರವಸೆ ಇದೆ ಎಂದರು. 
ಜೂನ್ 5ರಂದು ಬೆಂಗಳೂರಿನಲ್ಲಿ ನೂತನ ಸಂಸದರಿಗೆ ಅಭಿನಂದನಾ ಸಭೆ ಏರ್ಪಡಿಸಲಾಗಿದ್ದು, ಸಭೆಯಲ್ಲಿ ಶಾಸಕರು, ಸಂಸದರು ಹಾಗೂ ಪಕ್ಷದ ಪ್ರಮುಖರೊಂದಿಗೆ ಚರ್ಚಿಸಿ ರಾಜ್ಯ ಸರ್ಕಾರದ ಭ್ರಷ್ಟಾಚಾರ ಪ್ರಕರಣಗಳು ಮತ್ತು ವೈಫಲ್ಯಗಳ ವಿರುದ್ಧದ ಹೋರಾಟಕ್ಕೆ ರೂಪುರೇಷೆ ಸಿದ್ಧಗೊಳಿಸಲಾಗುವುದು ಎಂದು ಹೇಳಿದರು.
ಸ್ಥಳೀಯ ಸಂಸ್ಥೆಗಳ ಫಲಿತಾಂಶ ನಿರೀಕ್ಷಿತ. ಸಹಜವಾಗಿಯೇ ಮೈತ್ರಿ ನಾಯಕರು ಆಡಳಿತ ಯಂತ್ರದ ದುರುಪಯೋಗ ಮಾಡಿಕೊಂಡು ಒಂದಿಷ್ಟು ಹೆಚ್ಚು ಸ್ಥಾನಗಳನ್ನು ಪಡೆದಿದ್ದಾರೆ ಎಂದು ಆರೋಪಿಸಿದರು.
ಜಿಂದಾಲ್ ಸಂಸ್ಥೆಗೆ 3000 ಎಕರೆ ಭೂಮಿಯನ್ನು ಕ್ರಯಕ್ಕೆ ಕೊಡುವ ರಾಜ್ಯ ಸರ್ಕಾರದ ನಿರ್ಣಯಕ್ಕೆ ವಿರೋಧವಿದೆ. ಈ ಭೂಮಿಯ ಗುತ್ತಿಗೆ ಅವಧಿ ವಿಸ್ತರಣೆ ಮಾಡಿದ್ದರೆ ವಿರೋಧಿಸುತ್ತಿರಲಿಲ್ಲ. ಆದರೆ ಕಡಿಮೆ ಬೆಲೆಗೆ ಮಾರಾಟ ಮಾಡಿರುವ ಕ್ರಮವನ್ನು ಒಪ್ಪಲು ಸಾಧ್ಯವಿಲ್ಲ ಎಂದು ಯಡಿಯೂರಪ್ಪ ತಿಳಿಸಿದರು.
SCROLL FOR NEXT