ರಾಜಕೀಯ

ಮಂಡ್ಯ ಚುನಾವಣೆ ಸೋಲಿನ ಬಳಿಕ ಅಭಿವೃದ್ಧಿ ಮಂತ್ರ ಜಪಿಸಿದ ನಿಖಿಲ್ ಕುಮಾರಸ್ವಾಮಿ

Srinivas Rao BV
ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಸೋಲು ಅನುಭವಿಸಿದ ಬಳಿಕ ನಿಖಿಲ್ ಕುಮಾರಸ್ವಾಮಿ ಮಂಡ್ಯ ಜಿಲ್ಲೆ ಅಭಿವೃದ್ಧಿ ಮಂತ್ರ ಜಪಿಸಿದ್ದಾರೆ.
ಮಂಡ್ಯ ಜಿಲ್ಲೆಯ ರೈತರ ಸಮಸ್ಯೆಗಳು ಹಾಗೂ ರಾಜ್ಯಕ್ಕೆ ಕೇಂದ್ರದಿಂದ ಅಗತ್ಯ ನೆರವು ಕೊಡಿಸಿ ಎಂದು ಪರೋಕ್ಷವಾಗಿ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರಿಗೆ ನಿಖಿಲ್ ಕುಮಾರಸ್ವಾಮಿ ಸಾಮಾಜಿಕ ಜಾಲತಾಣದ ಮೂಲಕ ಕೆಣಕಿದ್ದಾರೆ.
ತಮ್ಮ ಫೇಸ್ ಬುಕ್ ನಲ್ಲಿ ಸುಮಲತಾ ಅಂಬರೀಶ್ ಗೆ ಅಭಿನಂದನೆ ಸಲ್ಲಿಸಿರುವ ನಿಖಿಲ್ ಕುಮಾರಸ್ವಾಮಿ, ಕೇಂದ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿರುವ ಸಂಸದರಿಗೆ ಅಭಿನಂದನೆ ಹೇಳಿದ್ದಾರೆ. ರಾಜ್ಯದ ಹಿತವನ್ನು ಕಾಪಾಡುವ ಜೊತೆಗೆ, ವಿಶೇಷವಾಗಿ ನಮ್ಮ ರೈತರ ಹಾಗು ಬಡವರ ಪರವಾಗಿ, ಅವರ ಏಳಿಗೆಗಾಗಿ, ನಿಮ್ಮ ಪ್ರಯತ್ನಗಳು ಇರಲಿವೆ ಎಂದು ಎಲ್ಲ ಕನ್ನಡಿಗರಂತೆ, ನಾನೂ ಕೂಡ ನಿರೀಕ್ಷಿಸುತ್ತಿದ್ದೇನೆ ಎಂದು ಕೇಂದ್ರ ಸಚಿವರಿಗೆ ಮನವಿ ಮಾಡಿದ್ದಾರೆ.
ಮಂಡ್ಯದಿಂದ ಆಯ್ಕೆಯಾಗಿರುವ ಸಂಸತ್ ಸದಸ್ಯರಾದ ಸುಮಲತಾ ಅಂಬರೀಷ್ ಅವರಿಗೆ ನನ್ನ ಅಭಿನಂದನೆಗಳು. ಕೇಂದ್ರ ಸರ್ಕಾರದಿಂದ ಅಗತ್ಯ ಬೆಂಬಲ, ನೆರವು ಸಿಗದೆ ನಮ್ಮ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ವಿಶೇಷ ನೆರವಿಗಾಗಿ ಬೇಡಿಕೆ ಹೊತ್ತು ರಾಜ್ಯ ಸರ್ಕಾರ ಕೇಂದ್ರಕ್ಕೆ ನಿಯೋಗಗಳನ್ನು ಕರೆದೊಯ್ದು, ಬರಿಗೈಯಲ್ಲಿ ಮರಳುತ್ತಿರುವುದನ್ನು ಕೂಡ ರಾಜ್ಯದ ಜನ ನೋಡುತ್ತಲೇ ಬಂದಿದ್ದಾರೆ.
ಈಗ ಕೇಂದ್ರದಲ್ಲಿ ಆಳುವ ಪಕ್ಷದ ಬೆಂಬಲದೊಂದಿಗೆ ಇಲ್ಲಿ ನೀವು ಮಂಡ್ಯದಲ್ಲಿ ಗೆದ್ದಿರುವುದರಿಂದ, ನಮ್ಮ ರೈತರಿಗೆ ಅರ್ಹ ನೆರವು, ಯೋಜನೆಗಳನ್ನು ತರುವಲ್ಲಿ ತಾವು ಯಶಸ್ವಿಯಾಗುವಿರಿ ಎನ್ನುವುದು ಮಂಡ್ಯದ ಜನರ ಹಾಗು ರೈತರ ನಿರೀಕ್ಷೆಯಾಗಿದೆ ಎಂದು ಪರೋಕ್ಷವಾಗಿ ಕಾಲೆಳೆದಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಮಂಡ್ಯದಲ್ಲಿ ಗೆಲುವು ಸಾಧಿಸದೆ ಇರುವುದಕ್ಕೆ, ಪಕ್ಷದ ಅಭ್ಯರ್ಥಿಯಾಗಿ ನಾನೇ ಹೊಣೆ. ಇದಕ್ಕಾಗಿ ಯಾರನ್ನೂ ದೂಷಿಸುವುದಿಲ್ಲ. ಹಿನ್ನಡೆಗೆ ಕಾರಣಗಳನ್ನು ನೀಡುವ ಬದಲು ಅದರ ಸಂಪೂರ್ಣ ಜವಾಬ್ದಾರಿಯನ್ನು ನಾನೇ ಹೊರುತ್ತೇನೆ. ನಾನು ಮಂಡ್ಯ ಬಿಟ್ಟು ಎಲ್ಲೂ ಹೋಗುವುದಿಲ್ಲ, ಇಲ್ಲೇ ಇರುತ್ತೇನೆ, ಈ ಚುನಾವಣೆಯಲ್ಲಿ ನನ್ನನ್ನು ಬೆಂಬಲಿಸಿದ 5.77 ಲಕ್ಷ ಜನರ ನಿರೀಕ್ಷೆಗಳಿಗೆ ನಾನು ಉತ್ತರದಾಯಿಯಾಗಿದ್ದೇನೆ. ಇನ್ನೂ ಹೆಚ್ಚಿನ ರೀತಿಯಲ್ಲಿ ಜನರ ಆಶೀರ್ವಾದ ಪಡೆಯುವ ನಿಟ್ಟಿನಲ್ಲಿ ನನ್ನ ಪ್ರಯತ್ನ ಮುಂದುವರಿಯಲಿದೆ ಎನ್ನುವ ಮೂಲಕ ಮತ್ತೊಮ್ಮೆ ಚುನಾವಣೆಗೆ ಮಂಡ್ಯದಿಂದ ಸ್ಪರ್ಧಿಸುವ ಆಶಯ ವ್ಯಕ್ತಪಡಿಸಿದ್ದಾರೆ.
ಪಕ್ಷದ ಯಶಸ್ಸಿಗಾಗಿ ಶ್ರಮಿಸಿದ ಪ್ರತಿಯೊಬ್ಬ ಕಾರ್ಯಕರ್ತರ ಪರಿಶ್ರಮ, ನಮ್ಮನ್ನು ಬೆಂಬಲಿಸಿದ ಜನರ ಪ್ರೀತಿ-ಅಭಿಮಾನಗಳ ದೊಡ್ಡ ಜವಾಬ್ದಾರಿ ನನ್ನ ಮೇಲಿದೆ. ನಮ್ಮ ಜೆಡಿಎಸ್ ಪಕ್ಷದ ಸಾವಿರಾರು ನಿಷ್ಠಾವಂತ ಕಾರ್ಯಕರ್ತರ ಜೊತೆಗೆ ಪಕ್ಷ ಸಂಘಟನೆಯ ಕಾರ್ಯದಲ್ಲಿ ನಾನು ತೊಡಗಿಕೊಳ್ಳುತ್ತೇನೆ. ಜೆಡಿಎಸ್ ಪಕ್ಷದ ಬಲವರ್ಧನೆಗಾಗಿ ನನ್ನ ಪ್ರಯತ್ನ ಮುಂದುವರಿಯಲಿದೆ. ನನ್ನನ್ನು ಬೆಂಬಲಿಸಿ, ಆಶೀರ್ವದಿಸಿದ ಎಲ್ಲ ನನ್ನ ಮಂಡ್ಯದ ಬಂಧುಗಳಿಗೆ, ಹಿರಿಯರಿಗೆ, ತಾಯಂದಿರಿಗೆ ಮತ್ತೊಮ್ಮೆ ನನ್ನ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತಿದ್ದೇನೆ ಎಂದು ಸಾಮಾಜಿಕ ಜಾಲ ತಾಣದ ಮೂಲಕ ಸಂದೇಶ ರವಾನಿಸಿದ್ದಾರೆ.
SCROLL FOR NEXT