ರಾಜಕೀಯ

ಮುಖ್ಯಮಂತ್ರಿಯಾಗುವ ದುರಾಸೆಯಿಂದ ಕೆಲವರು ಸರ್ಕಾರ ಬೀಳಿಸಲು ಪ್ರಯತ್ನ- ಎಚ್ ಡಿ ಕುಮಾರಸ್ವಾಮಿ 

Nagaraja AB

ಬೆಂಗಳೂರು: ಕೆಲವರು ತಾವು ಮುಖ್ಯಮಂತ್ರಿ ಆಗಲೇಬೇಕು ಎಂಬ ಸ್ವಾರ್ಥದ ದುರಾಸೆಯಿಂದ ಜನರ ಹಣ ಪೋಲಾದರೂ ಪರವಾಗಿಲ್ಲ ಎಂದು ಸರ್ಕಾರ ಬೀಳಿಸಲು ತುದಿಗಾಲಲ್ಲಿ ನಿಂತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಜೆಡಿಎಸ್ ಪಕ್ಷದ ಶಾಸಕರನ್ನು ಬಿಜೆಪಿಗೆ ಸೇರ್ಪಡೆಯಾಗುತ್ತಾರೆ ಎಂಬ ಭಯದಿಂದ ಕುಮಾರಸ್ವಾಮಿ ಬಿಜೆಪಿಗೆ ಬೆಂಬಲ ನೀಡುತ್ತಿದ್ದಾರೆ ಎಂಬ ಸಿದ್ದರಾಮಯ್ಯ ಹೇಳಿಕೆ ಬೆನ್ನಲ್ಲೇ , ಎಚ್ ಡಿ ಕುಮಾರಸ್ವಾಮಿ ಈ ರೀತಿಯ ಟ್ವೀಟ್ ಮಾಡುವ ಮೂಲಕ ಸಿದ್ದರಾಮಯ್ಯ ಅವರನ್ನು ಕುಟುಕಿದ್ದಾರೆ.

ಪಕ್ಷ ಬಿಟ್ಟು ಹೋದ ಶಾಸಕರಲ್ಲಿ ಬಹುತೇಕರು ನಿಮ್ಮ ಪಕ್ಷದವರೇ ಎಂಬುದನ್ನು ಮರೆಯಬಾರದು. ಪಕ್ಕದ ಮನೆಯ ಒಲೆ ಆರಿಸಲು ಬರುವ ಮುನ್ನ ಹೊತ್ತಿ ಉರಿಯುತ್ತಿರುವ ತಮ್ಮ ಮನೆಯ ಬೆಂಕಿ ನಂದಿಸಿಕೊಳ್ಳಿ ಎಂದು ಅವರು ಸಲಹೆ ನೀಡಿದ್ದಾರೆ. 

ಪ್ರತಿ ದಿನ ನೂರಾರು ರೈತರು ತಮ್ಮ ಬೆಳೆಸಾಲಮನ್ನಾ ವಿಚಾರವಾಗಿ ಮಾಹಿತಿ ಪಡೆಯಲು ನನ್ನ ಮನೆಗೆ ಬರುತ್ತಿದ್ದಾರೆ. ದೂರದೂರಿನಿಂದ ಬರುವ ರೈತರಿಗೆ ಕಷ್ಟವಾಗಬಾರದೆಂದು ನಾನು ರೈತರ 'ಬೆಳೆಸಾಲಮನ್ನಾ ಸಹಾಯವಾಣಿ' ಆರಂಭಿಸಿದ್ದೇನೆ. ರೈತರು ತಮ್ಮ ಮನೆಯಿಂದಲೇ 9164305868 ನಂಬರ್ ಗೆ ಬೆಳಗ್ಗೆ 10 ರಿಂದ 5 ರವರೆಗೆ ಕರೆ ಮಾಡಿ ಸಾಲಮನ್ನಾದ ವಿವರ ಪಡೆಯಬಹುದು ಎಂದು ಕುಮಾರಸ್ವಾಮಿ ಇದೇ ವೇಳೆ ತಿಳಿಸಿದ್ದಾರೆ.

SCROLL FOR NEXT