ರಾಜಕೀಯ

ಡಿಸೆಂಬರ್ ಒಳಗಾಗಿ ಸಿಎಂ ಸ್ಥಾನ ತ್ಯಜಿಸುವಂತೆ ಬಿಎಸ್'ವೈಗೆ ಬಿಜೆಪಿ ಹೈ ಕಮಾಂಡ್ ಸೂಚನೆ!

Manjula VN

ಕಲಬುರಗಿ: ಡಿಸೆಂಬರ್ ಒಳಗಾಗಿ ಮುಖ್ಯಮಂತ್ರಿ ಸ್ಥಾನಕ್ಕೆ ಸ್ವಯಂ ಪ್ರೇರಿತರಾಗಿ ರಾಜೀನಾಮೆ ನೀಡುವಂತೆ ಬಿ.ಎಸ್.ಯಡಿಯೂರಪ್ಪ ಅವರಿಗೆ ಸೂಚಿಸಿದೆ ಎಂದು ಗುರ್ಮಿತ್ಕಲ್ ಕ್ಷೇತ್ರದ ಜೆಡಿಎಸ್ ಶಾಸಕ ನಾಗನಗೌಡ ಪಾಟೀಲ ಅವರು ಹೇಳಿದ್ದಾರೆ. 

ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ನನ್ನೊಂದಿಗೆ ನವದೆಹಲಿಯಲ್ಲಿರುವ ಬಿಜೆಪಿಯ ಕೆಲ ಹಿರಿಯ ನಾಯಕರು ಸಂಪರ್ಕದಲ್ಲಿದ್ದು, ಅವರು ನೀಡಿರುವ ಮಾಹಿತಿಗಳ ಪ್ರಕಾರ ಡಿಸೆಂಬರ್ ಒಳಗಾಗಿ ಸ್ವಯಂಪ್ರೇರಿತರಾಗಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಯಡಿಯೂರಪ್ಪ ಅವರಿಗೆ ಬಿಜೆಪಿ ಕಮಾಂಡ್ ಸೂಚಿಸಿದೆ ಎಂದು ತಿಳಿಸಿದ್ದಾರೆಂದು ಹೇಳಿದ್ದಾರೆ. 

ಎಲ್.ಕೆ.ಅಡ್ವಾಣಿ ಮತ್ತು ಮುರಳಿ ಮನೋಹರ್ ಲಾಲ್ ಜೋಷಿಯಂತಹ ಹಿರಿಯ ನಾಯಕರಿದ್ದು ಅವರನ್ನು ಹೊರತುಪಡಿಸಿ ನಿಮಗೆ ವಿನಾಯಿತಿ ನೀಡುವುದು ಕಷ್ಟಕರವಾಗಲಿದ್ದು, ಹೀಗಾಗಿ ಸಿಎಂ ಸ್ಥಾನವನ್ನು ಡಿಸೆಂಬರ್ ಒಳಗಾಗಿ ಸ್ವಯಂಪ್ರೇರಿತರಾಗಿ ತೊರೆಯುವಂತೆ ಸೂಚಿಸಿದೆ ಎಂದು ತಿಳಿಸಿದ್ದಾರೆ. 

ಯಡಿಯೂರಪ್ಪ ಅವರು ಸ್ವಯಂಪ್ರೇರಿತರಾಗಿ ಸಿಎಂ ಸ್ಥಾನವನ್ನು ತೊರೆದಿದ್ದೇ ಆದರೆ, ಅವರ ಪುತ್ರ ವಿಜಯೇಂದ್ರ ಅವರಿಗೆ ಕೇಂದ್ರದಲ್ಲಿ ಸಚಿವ ಸ್ಥಾನ ನೀಡುವುದಾಗಿಯೂ ಬಿಜೆಪಿ ಹೈಕಮಾಂಡ್ ಯಡಿಯೂರಪ್ಪ ಅವರಿಗೆ ಆಫರ್ ನೀಡಿದೆ ಎಂದಿದ್ದಾರೆ. 

ಒಂದು ವೇಳೆ ಯಡಿಯೂರಪ್ಪ ಅವರನ್ನು ಬಲವಂತದಿಂದ ಹೈಕಮಾಂಡ್ ಸಿಎಂ ಸ್ಥಾನದಿಂದ ತೆಗೆದಿದ್ದೇ ಆದರೆ, ಯಡಿಯೂರಪ್ಪ ಅವರು ನೂತನ ಪಕ್ಷ ರಚನೆ ಮಾಡುವ ಸಾಧ್ಯತೆಗಳಿದ್ದು, ಇದು ಬಿಜೆಪಿಗೆ ದೊಡ್ಡ ಹೊಡೆತವನ್ನು ನೀಡಲಿದೆ. ಲಿಂಗಾಯತ ಸಮುದಾಯವರು ಬಿಜೆಪಿಗೆ ಸವಾಲಾಗಿ ಪರಿಣಮಿಸಲಿದ್ದಾರೆ. ಹೀಗಾಗಿ ಯಡಿಯೂರಪ್ಪ ಅವರನ್ನೇ ತಣ್ಣಗೆ ಮಾಡಲು ಬಿಜೆಪಿ ಹೈಕಮಾಂಡ್ ಯತ್ನ ನಡೆಸುತ್ತಿದೆ ಎಂದು ಪಾಟೀಲ್ ಹೇಳಿದ್ದಾರೆ. 

SCROLL FOR NEXT