ರಾಜಕೀಯ

ಸಿದ್ದರಾಮಯ್ಯ ಮಾನಸಿಕ ಸಮತೋಲನ ಕಳೆದುಕೊಂಡಿದ್ದಾರೆ- ಕೇಂದ್ರ ಸಚಿವ ಸುರೇಶ್ ಅಂಗಡಿ

Nagaraja AB

ಬೆಳಗಾವಿ: ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾನಸಿಕ ಸಮತೋಲನ ಕಳೆದುಕೊಂಡಿದ್ದಾರೆ ಎಂದು ಕೇಂದ್ರ ಸಚಿವ ಸುರೇಶ್ ಅಂಗಡಿ  ಲೇವಡಿ ಮಾಡಿದ್ದಾರೆ.

ಬಿಜೆಪಿಯವರು ಕುದುರೆ ವ್ಯಾಪಾರದಂತಹ ನೀಚ ರಾಜಕೀಯ ಮಾಡುತ್ತಿದ್ದಾರೆ ಎಂಬ ಸಿದ್ದರಾಮಯ್ಯ ಹೇಳಿಕೆಯ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಸಚಿವರು, ಸಿದ್ದರಾಮಯ್ಯ ಅಧಿಕಾರ ಕಳೆದುಕೊಂಡ ಬಳಿಕ ಮಾನಸಿಕ ಸಮತೋಲನ ಕಳೆದುಕೊಂಡಿದ್ದಾರೆ. ಸಿದ್ದರಾಮಯ್ಯ ಮೂಲ ಕಾಂಗ್ರೆಸ್ಸಿಗರು ಅಲ್ಲ.ಅವರು ಬಳಸಿದ  ಪದ ಅತ್ಯಂತ ಖಂಡನೀಯವಾದುದ್ದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ಜಗತ್ತಿನ ಅತ್ಯಂತ ದೊಡ್ಡ ಪಕ್ಷವಾಗಿದೆ. ಬಿಜೆಪಿ ಯಾವುದೇ ಕುಟುಂಬಕ್ಕೆ ಸಂಬಂಧಿಸಿದ ಪಕ್ಷವಲ್ಲ.ಒಬ್ಬ ಸಾಮಾನ್ಯ ಚಹಾ ಮಾರುವವನು ದೇಶದ ಪ್ರಧಾನಿ ಆಗಿದ್ದಾರೆ. ಸಾಮಾನ್ಯ ಕಾರ್ಯಕರ್ತ ಅಮಿತ್ ಶಾ ಅವರು ರಾಷ್ಟ್ರೀಯ ಅಧ್ಯಕ್ಷ ಆಗಿದ್ದಾರೆ ಎಂದು ಸುರೇಶ್ ಅಂಗಡಿ ಸಮರ್ಥಿಸಿಕೊಂಡಿದ್ದಾರೆ.

ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ. ಅವರ ಪಕ್ಷದವರೇ ಸಿದ್ದರಾಮಯ್ಯ ಮೂಲ ಕಾಂಗ್ರೆಸ್ ನವರು ಅಲ್ಲ ಅಂತಿದ್ದಾರೆ. ಇವತ್ತಿನ ಕಾಂಗ್ರೆಸ್ ನಿಜವಾದ ಕಾಂಗ್ರೆಸ್ ಪಕ್ಷವೇ ಅಲ್ಲ. ವಲ್ಲಭಾಯ್ ಪಟೇಲ್ ಇದ್ದ ಕಾಂಗ್ರೆಸ್ ನಿಜವಾದ ಕಾಂಗ್ರೆಸ್. ಇವತ್ತಿನ ಕಾಂಗ್ರೆಸ್ ಈಸ್ಟ್ ಇಂಡಿಯಾ ಕಂಪನಿ ಇದ್ದಂತೆ. ರಾಜ್ಯಕ್ಕೆ ಬಿ.ಎಸ್. ಯಡಿಯೂರಪ್ಪ ಅವರು  ಮುಖ್ಯಮಂತ್ರಿ ಆಗಿದ್ದಾರೆ ಎಂದು ಅವರು ತಿಳಿಸಿದರು.

ಮಹಾರಾಷ್ಟ್ರದಲ್ಲಿನ ರಾಜಕೀಯ ಬೆಳವಣಿಗೆ ಕುರಿತಂತೆ ಮಾತನಾಡಿದ ಅವರು, ಬಿಜೆಪಿ ಅಧಿಕಾರಕ್ಕಾಗಿ ರಾಜಕಾರಣ ಮಾಡುತ್ತಿಲ್ಲ. ಶಿವಸೇನೆ ಸೇರಿ ಉಳಿದವರು ಅಧಿಕಾರಕ್ಕಾಗಿ ರಾಜಕೀಯ ಮಾಡುತ್ತಿದ್ದಾರೆ. ರಾಜಕಾರಣದಲ್ಲಿ ಬದ್ಧತೆ ಇರಬೇಕು. ನಾವೆಲ್ಲೂ ಕುದುರೆ ವ್ಯಾಪಾರ ಮಾಡಿಲ್ಲ ಎಂದು ಅವರು ಹೇಳಿದರು.

SCROLL FOR NEXT