ರಾಜಕೀಯ

ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾದ ರಾಜು ಕಾಗೆ!

Nagaraja AB

ಬೆಂಗಳೂರು: ಅನರ್ಹ ಶಾಸಕರು ಬಿಜೆಪಿ ಸೇರ್ಪಡೆಯಾಗುತ್ತಿದ್ದಂತೆ ಬಿಜೆಪಿಯ ಟಿಕೆಟ್ ಆಕಾಂಕ್ಷಿಗಳಲ್ಲಿ ಭಿನ್ನಮತ ಸ್ಪೋಟಿಸಿದೆ. ಅನರ್ಹರಿಗೆ ಟಿಕೆಟ್ ಘೋಷಿಸುತ್ತಿದ್ದಂತೆ  ಬೆಳಗಾವಿ ಜಿಲ್ಲೆ ಕಾಗವಾಡದ ಮಾಜಿ ಶಾಸಕ ರಾಜು ಕಾಗೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.  

ಕೆಪಿಸಿಸಿ ಕಚೇರಿಯಲ್ಲಿಂದು ನಡೆದ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ , ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಇಂದು ಕಾಂಗ್ರೆಸ್ ಕೈ ಹಿಡಿದರು. ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಮಾಜಿ ಸಚಿವ ಎಂ. ಬಿ. ಪಾಟೀಲ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಸಿದ್ದರಾಮಯ್ಯ,  ರಾಜು ಕಾಗೆ ಸಭ್ಯ ರಾಜಕಾರಣಿಯಾಗಿದ್ದು,  ಯಾವುದೇ ಷರತ್ತಿಲ್ಲದೆ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.  ಇದರಿಂದಾಗಿ ಬೆಳಗಾವಿ ಜಿಲ್ಲೆಯಲ್ಲಿ ನಮ್ಮ ಪಕ್ಷಕ್ಕೆ ಶಕ್ತಿ ಬರಲಿದೆ. ಬೆಳಗಾವಿ ಜಿಲ್ಲೆಯಲ್ಲಿ 18 ವಿಧಾನಸಭಾ ಕ್ಷೇತ್ರಗಳಿದ್ದು, ಹೆಚ್ಚಿನ ಸ್ಥಾನಗಳಲ್ಲಿ ಗೆಲ್ಲಲು ಅವರ ಸೇರ್ಪಡೆ ಸಹಕಾರಿಯಾಗಲಿದೆ ಎಂದರು. 

9 ಜಿಲ್ಲೆಯ 14 ಸ್ಥಳೀಯ ಸಂಸ್ಥೆಗಳ  418 ಸ್ಥಾನಗಳಿಗೆ  ನಡೆದ ಚುನಾವಣೆಯಲ್ಲಿ  ಕಾಂಗ್ರೆಸ್ 151 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ತಿ ಹೆಚ್ಚು ಸ್ಥಾನ ಗೆದ್ದ ಪಕ್ಷವಾಗಿ ಹೊರಹೊಮ್ಮಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಹಿಂದೆ ಕೂಡ ಕಾಂಗ್ರೆಸ್ ಪಕ್ಷ ನಂ.1 ಆಗಿತ್ತು, ಈಗಲೂ ನಂ.1 ಆಗಿದ್ದು, ಮತದಾರರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಅವರು ತಿಳಿಸಿದರು. 

ರಾಜು ಕಾಗೆ ಅವರನ್ನು ಕಾಗವಾಡ ಉಪ ಚುನಾವಣೆಯ ಕೈ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲಾಗುವುದು, ಅವರ ಸ್ಪರ್ಧೆಯಿಂದಾಗಿ ಬೆಳಗಾವಿಯಲ್ಲಿ ಪಕ್ಷ ಇನ್ನಷ್ಟು ಬಲವಾಗಲಿದೆ ಎಂದು ದಿನೇಶ್ ಗುಂಡೂರಾವ್ ತಿಳಿಸಿದರು. 
 

SCROLL FOR NEXT