ರಾಜಕೀಯ

ಉಪಚುನಾವಣೆ ಸಮರ: ಅನರ್ಹರಿಗೆ ಟಿಕೆಟ್, ಬಿಜೆಪಿಯಲ್ಲಿ ಒಳಜಗಳ ಆರಂಭ

Manjula VN

ಬೆಂಗಳೂರು: ಕಾಂಗ್ರೆಸ್-ಜೆಡಿಎಸ್ ಪಕ್ಷಗಳ 13 ಅನರ್ಹ ಶಾಸಕರಿಗೆ ಉಪಚುನಾವಣೆಗೆ ಬಿಜೆಪಿ ಟಿಕೆಟ್ ನೀಡಿದ್ದು, ಇದೀಗ ಬಿಜೆಪಿ ಪಾಳಯದಲ್ಲಿ ಹಗ್ಗಜಗ್ಗಾಟ ಆರಂಭಗೊಂಡಿದೆ. 

ಪಕ್ಷದ ನಾಯಕರಿಗೆ ಟಿಕೆಟ್ ನೀಡದೆ ಅನರ್ಹ ಶಾಸಕರಿಗೆ ಟಿಕೆಟ್ ನೀಡಿರುವುದು ಹಲವರಲ್ಲಿ ಮನಸ್ತಾಪಗಳನ್ನುಂಟು ಮಾಡಿದೆ. ಹೀಗಾಗಿ ಸ್ವತಃ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಹಿರಿಯ ನಾಯಕರು ಯತ್ನ ನಡೆಸಿದರೂ, ಬಿಜೆಪಿ ನಾಯಕರು ತಣ್ಣಗಾಗುತ್ತಿಲ್ಲ. 

ತಮ್ಮ ನಾಯಕನಿಗೆ ಟಿಕೆಟ್ ನೀಡದಿರುವುದಕ್ಕೆ ರಾಣೆಬೆನ್ನೂರಿನ ಶಾಸಕ ಆರ್.ಶಂಕರ್ ಅವರ ಬೆಂಬಲಿಗರು ನಿನ್ನೆಯಷ್ಟೇ ಮುಖ್ಯಮಂತ್ರಿಗಳ ನಿವಾಸದೆದುರು ಪ್ರತಿಭಟನೆ ನಡೆಸಿದರು. 

ಈ ವೇಳೆ ಪ್ರತಿಭಟನಾಕಾರರನ್ನು ಭೇಟಿ ಮಾಡಿ ಮಾತನಾಡಿದ ಯಡಿಯೂರಪ್ಪ ಅವರು, ಶಂಕರ್ ಅವರನ್ನು ಎಂಎಲ್'ಸಿ ಮಾಡುವುದಾಗಿ ಹಾಗೂ ಸಚಿವ ಸ್ಥಾನ ನೀಡುವ ಭರವಸೆ ನೀಡಿದರು. 

ಇದಕ್ಕೆ ಶಂಕರ್ ಅವರು ಒಪ್ಪಿಗೆ ನೀಡಿದ್ದಾರೆ. ಮುಖ್ಯಮಂತ್ರಿಗಳು ಭರವಸೆಯನ್ನು ನೀಡಿದ್ದಾರೆ. ಹೀಗಾಗಿ ಬಿಜೆಪಿ ಅಭ್ಯರ್ಥಿ ಅರುಣ್ ಕುಮಾರ್ ಗುತ್ತೂರ್ ಅಕಾ ಅವರ ಪರವಾಗಿ ರಾಣೆಬೆನ್ನೂರಿನಲ್ಲಿ ಪ್ರಚಾರ ನಡೆಸಲಾಗುತ್ತದೆ ಎಂದು ಶಂಕರ್ ಅವರು ತಿಳಿಸಿದ್ದಾರೆ. 

ಅಥಣಿ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ನೀಡದ್ದಕ್ಕೆ ಸ್ವತಃ ಉಪ ಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಕೂಡ ಬೇಸರಗೊಂಡಿದ್ದಾರೆಂದು ತಿಳಿದುಬಂದಿದೆ. 

ಪಕ್ಷದ ಹಿರಿಯ ನಾಯಕರೊಂದಿಗೆ ಬೇಸರವನ್ನು ಹೊರಹಾಕಿರುವ ಸವದಿಯವರು, ರಾಜೀನಾಮೆ ನೀಡುವ ಬಗ್ಗೆಯೂ ಚಿಂತನೆ ನಡೆಸಿದ್ದಾರೆಂದು ಮೂಲಗಳಿಂದ ತಿಳಿದುಬಂದಿದೆ. 

ಈ ನಡುವೆ ನಿನ್ನೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸವದಿಯವರೊಂದಿಗೆ ತಮ್ಮ ನಿವಾಸದಲ್ಲಿಯೇ ಶುಕ್ರವಾರ ಸಭೆ ನಡೆಸಿ, ಮಾತುಕತೆ ನಡೆಸಿದರು. ಈ ವೇಳೆ ಸವದಿಯವರನ್ನು ಎಂಎಲ್'ಸಿ ಮಾಡಿ, ಉಪ ಮುಖ್ಯಮಂತ್ರಿ ಸ್ಥಾನ ಮುಂದುವರೆಸುವ ಭರವಸೆ ನೀಡಿದ್ದಾರೆದು ವರದಿಗಳು ತಿಳಿಸಿವೆ. 

ಇದರಂತೆ ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್, ಗೃಹ ಸಚಿವ ಬಸವರಾಜ ಬೊಮ್ಮಾಯಿ ಹಾಗೂ ಬಿಜೆಪಿಯ ಹಿರಿಯ ನಾಯಕ ಸಿಎಂ ಉದಾಸಿ ಕೂಡ ಸವದಿಯವರೊಂದಿಗೆ ಮಾತುಕತೆ ನಡೆಸಿ, ಮನಃ ಪರಿವರ್ತನೆಗೆ ಯತ್ನಿಸಿದ್ದಾರೆ. 

ಈ ನಡುವೆ ಶಂಕರ್ ಹಾಗೂ ಸವದಿಯವರಿಗೆ ಸ್ಥಾನ ನೀಡುವ ಸಲುವಾಗಿ ಎಂಎಲ್'ಸಿ ಗಳಾದ ರುದ್ರೇಗೌಡ, ಅಯನೂರ್ ಮಂಜುನಾಥ್ ಹಾಗೂ ಎನ್.ರವಿಕುಮಾರ್ ಅವರಿಗೆ ರಾಜಿನಾಮೆ ನೀಡುವಂತೆ ಸೂಚಿಸಲಾಗಿದೆ ಎಂದು ತಿಳಿದುಬಂದಿದೆ. ಈ ಮೂವರೂ ಯಡಿಯೂರಪ್ಪ ಅವರಿಗೆ ಪ್ರಮಾಣಿಕ ಹಾಗೂ ಆಪ್ತರೆಂದು ಹೇಳಲಾಗುತ್ತಿದೆ. 

SCROLL FOR NEXT