ರಾಜಕೀಯ

ಹುಣಸೂರು ಕ್ಷೇತ್ರದ ಉಪ ಚುನಾವಣೆಯಲ್ಲಿ ಪರ,ವಿರೋಧ ಪ್ರಚಾರ ಮಾಡಲ್ಲ, ತಟಸ್ಥರಾಗಿರುತ್ತೇನೆ : ಜಿ.ಟಿ.ದೇವೇಗೌಡ

Sumana Upadhyaya

ಮೈಸೂರು: ಹುಣಸೂರು ಕ್ಷೇತ್ರದ ಉಪ ಚುನಾವಣೆಯಲ್ಲಿ ನಾನು ಯಾರ ಪರವೂ ಇಲ್ಲ, ಯಾರ ವಿರುದ್ಧವೂ ಇಲ್ಲ, ಯಾರ ಪರವೂ ಪ್ರಚಾರಕ್ಕೆ ಹೋಗುವುದಿಲ್ಲ. ನನ್ನ ಮಗ ನಿಂತರೂ ಉಪಚುನಾವಣೆಯಲ್ಲಿ ಪ್ರಚಾರ ಮಾಡಲ್ಲ. ಅವನು ಚುನಾವಣೆಗೆ ನಿಲ್ಲಲು ಸ್ವತಂತ್ರನು ಎಂದು ಮಾಜಿ ಸಚಿವ ಜಿ.ಟಿ.ದೇವೇಗೌಡ ಹೇಳಿದ್ದಾರೆ.


ಮೈಸೂರಿನಲ್ಲಿ ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಬೆಂಬಲಿಗರು, ಕಾರ್ಯಕರ್ತರು ಬುದ್ದಿವಂತರಿದ್ದಾರೆ ಅವರಿಗೆ ಯಾರು ಬೇಕು ಅವರನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ನಾನು ನನ್ನ ಮಗನಿಗೆ ಬಿಜೆಪಿಯಿಂದ ಟಿಕೆಟ್​ ಕೇಳಿಲ್ಲ. ಹುಣಸೂರಿನ ಜನ ನನ್ನ ಮೇಲೆ ಅಭಿಮಾನ ಇಟ್ಟಿದ್ದಾರೆ. ನಿಮ್ಮ ಮಗ ಅಥವಾ ನಿಮ್ಮ ಪತ್ನಿಯನ್ನು ನಿಲ್ಲಿಸಿ ಎಂದು ಕೇಳಿದ್ದರು. ಆದರೆ ನನ್ನ ಮಗನನ್ನು ಚುನಾವಣೆಗೆ ನಿಲ್ಲಿಸುವ ಶಕ್ತಿ ನನ್ನಲ್ಲಿಲ್ಲ. ಚುನಾವಣೆ ಎದುರಿಸುವಷ್ಟು ಆರ್ಥಿಕ ವ್ಯವಸ್ಥೆ ನನ್ನಲ್ಲಿಲ್ಲ. ಹೀಗಾಗಿ ಹುಣಸೂರು ಉಪಚುನಾವಣೆಗೆ ನನ್ನ ಮಗನನ್ನು ನಿಲ್ಲಿಸಲ್ಲ.ಅದಕ್ಕಾಗಿ ಹುಣಸೂರಿನ ಕ್ಷೇತ್ರದ ಜನರಿಗೆ ಕ್ಷಮೆ ಕೇಳಿದ್ದೇನೆ ಎಂದು ಅವರು ಹೇಳಿದರು.


ನಾನು ಈ ಚುನಾವಣೆಯಲ್ಲಿ ಭಾಗಿಯಾಗಲ್ಲ.ಈ ವಿಚಾರವನ್ನು ದೇವೇಗೌಡರು ಹಾಗೂ ಕುಮಾರಸ್ವಾಮಿಯವರಿಗೂ ತಿಳಿಸಿದ್ದೇನೆ. ನನ್ನ ತಟಸ್ಥ ನಿಲುವಿಗೆ ಇಂದು ಕೂಡ ನಾನು ಬದ್ದನಾಗಿದ್ದೇನೆ. ಇಂದಿನ ಅಭ್ಯರ್ಥಿ ನಾಮಪತ್ರ ಸಲ್ಲಿಕೆಗೆ ಯಾರೂ ನಮ್ಮನ್ನು ಆಹ್ವಾನಿಸಿಲ್ಲ.ಅಭ್ಯರ್ಥಿ ತಮ್ಮನ್ನು ಭೇಟಿ ಮಾಡಿ ನಮಸ್ಕಾರ ಮಾಡಿಕೊಂಡು ಹೋದರು ಎಂದು ತಿಳಿಸಿದರು.

SCROLL FOR NEXT