ರಾಜಕೀಯ

ಯಾರನ್ನು ಎಲ್ಲಿ ಇಡಬೇಕೋ ಅಲ್ಲಿಡ್ತಿವಿ: ಸಚಿವ ಕೆಎಸ್ ಈಶ್ವರಪ್ಪ

Vishwanath S

ಬಾಗಲಕೋಟೆ: ಪ್ರಧಾನಿ ಮೋದಿ ಮತ್ತು ಬಿಜೆಪಿ ಗಾಳಿಗೆ ಕಾಂಗ್ರೆಸ್, ಜೆಡಿಎಸ್‌ನಿಂದ ಮುಖಂಡರು ಓಡೋಡಿ ಬರುತ್ತಿದ್ದು, ಬರುವವರಲ್ಲಿ ಯಾರನ್ನು ಎಲ್ಲಿ ಇಡಬೇಕೋ ಅಲ್ಲಿ ಇಡುತ್ತೇವೆ. ಯಾರು ಬೇಕೋ ಅವರನ್ನು ಬಳಸಿಕೊಳ್ಳುತ್ತೇವೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಶಕ್ತಿವಂತರು, ಪ್ರಭಾವಿಗಳು, ಕಾಂಗ್ರೆಸ್ ಮತ್ತು ಜೆಡಿಎಸ್‌ನಲ್ಲಿದ್ದಾರೆ ಅವರನ್ನು ತೆಗೆದುಕೊಳ್ಳುತ್ತೇವೆ. ಪ್ರಾಮಾಣಿಕರಿಗೆ ಬಿಜೆಪಿ ಅನ್ಯಾಯ ಮಾಡೋಲ. ಅವರಿಗೆ ಏನು ನ್ಯಾಯ ಕೊಡಬೇಕೋ ಕೋಡುತ್ತೇವೆ ಎಂದು ಭರವಸೆ ನೀಡಿದರು.

ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ತರಬೇಕು ಎನ್ನುವುದ ಜನತೆಯ ಅಪೇಕ್ಷೆ ಆಗಿತ್ತು. ಹಾಗಾಗಿ ೧೦೩ ಶಾಸಕರನ್ನು ಜನ ಆಯ್ಕೆ ಮಾಡಿದರು. ಆದರೆ ಜನರ ಅಪೇಕ್ಷೆ ಈಡೇರಲಿಲ್ಲ. ಬಿಜೆಪಿಗೆ ಪೂರ್ಣ ಬಹುಮತ ಬರಲಿಲ್ಲ. ಕಾಂಗ್ರೆಸ್ ಪಕ್ಷದ ಶಾಸಕರ ಸಂಖ್ಯೆಯನ್ನು ೭೮ ಸ್ಥಾನಕ್ಕೆ ಇಳಿಸಿ ಧೂಳಿಪಟ ಮಾಡಿದರು. ಇನ್ನು ಜೆಡಿಎಸ್ ಎಲ್ಲಿದೆ ಅಂತ ಹುಡುಕುವ ಸ್ಥಿತಿಗೆ ತಂದಿಟ್ಟರು. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ೧, ಜೆಡಿಎಸ್ ೧ಸ್ಥಾನ ಪಡೆದರೂ ಅವರಿಗೆ ಇನ್ನೂ ಬುದ್ದಿಬಂದಿಲ್ಲ. ಕಾಂಗ್ರೆಸ್, ಜೆಡಿಎಸ್ ಶಾಸಕರು ಮೈತ್ರಿ ಸರ್ಕಾರ ಕೆಲಸ ಮಾಡಲಿಲ್ಲ ಎಂದು ರಾಜಿನಾಮೆ ಕೊಟ್ಟು ಬಿಜೆಪಿ ಸೇರಿದ್ದಾರೆ. ಅನರ್ಹ ಶಾಸಕರನ್ನು ಗೆಲ್ಲಿಸೋ ಜವಾಬ್ದಾರಿ ನಮ್ಮದಿದೆ. ಬಿಜೆಪಿಗೆ ಪೂರ್ಣ ಬಹುಮತ ಬರಲು ಬೈ ಎಲೆಕ್ಷನ್ ಸಹಕಾರಿಯಾಗಲಿದೆ. ಬೈ ಇಲೆಕ್ಷನ್‌ನಲ್ಲಿ ಬಿಜೆಪಿ ಪೂರ್ಣ ಬಹುಮತ ಬರಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. 

ಬೈ ಎಲೆಕ್ಷನ್ ಬಳಿಕ ಬಿಜೆಪಿ ಸರ್ಕಾರ ಬೀಳುತ್ತದೆ ಎನ್ನುವ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಐದಾರು ಸೀಟು ಬರೋದಿಲ್ಲ ಎಂದಿದ್ದರು. ಬಿಜೆಪಿ ೨೫ ಸೀಟು, ಕಾಂಗ್ರೆಸ್ ೧ ಮಾತ್ರ ಸಿಕ್ಕಿತು. ಬಿಎಸ್ವೈ ಸಿಎಂ ಆಗೋಲ್ಲ ಎಂದಿದ್ದರು ಬಿಎಸ್ವೈ ಸಿಎಂ ಆದರು. ಮೋದಿ ಪ್ರಧಾನಿ ಆಗೋಲ್ಲ ಎಂದಿದ್ದರು ಮೋದಿ ಪ್ರಧಾನಿಯಾದರು. ಕುಮಾರಸ್ವಾಮಿ ಸಿಎಂ ಆಗೋಲ್ಲ ಅಂದ್ದರು, ಸಿಎಂ ಆದರು. ಏನೇನು ಆಗೋಲ್ಲ ಅಂತಾರೆ ಅದು ಸುಳ್ಳಾಗುತ್ತಿದೆ. ಇದು ಸಿದ್ದರಾಮಯ್ಯ ಭವಿಷ್ಯ ಎಂದು ಲೇವಡಿ ಮಾಡಿದರು.

ಈಗಲೂ ಬಿಎಸ್ವೈ ಮನೆಗೆ ಹೋಗ್ತಾರೆ ಅಂದಿದ್ದಾರೆ. ಬಿಎಸ್‌ವೈ ಮತ್ತೆ ಗದ್ದುಗೆಯಲ್ಲಿ ಮೂರುವರೆ ವರ್ಷ ಪೂರ್ಣಾವಧಿ ಸಿಎಂ ಆಗುತ್ತಾರೆ. ಇದು ಅವರಿಗೂ ಗೊತ್ತು. ಆದರೂ ಅವರು ತಮ್ಮ ಪಕ್ಷದಲ್ಲಿ ನಾನೇ ನಾಯಕ ಎಂದು ಬಿಂಬಿಸಿಕೊಳ್ಳಲು ಏನೆಲ್ಲಾ ಹೇಳಿಕೆ ಕೊಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಈಗಾಗಲೇ ಕಾಂಗ್ರೆಸ್ ಒಡದಾಗಿದೆ, ರಾಜ್ಯದಲ್ಲಿ ಎರಡು ಗುಂಪಾಗಿದೆ. ಡಿಕೆ ಶಿವಕುಮಾರ ಮೈಸೂರಿನ ಮೆರವಣಿಗೆ ವೇಳೆ ಸಿದ್ದರಾಮಯ್ಯ ಎಲ್ಲಿದ್ರು, ನನಗೆ ಗೊತ್ತಿಲ್ಲ. ಸಿದ್ದರಾಮಯ್ಯ ಲಿಂಗಾಯತ-ವೀರಶೈವ ಧರ್ಮ ಒಡೆದರು. ಒಡೆಯೋದ್ರಲ್ಲಿ ಸಿದ್ದರಾಮಯ್ಯ ನಿಸ್ಸೀಮ. ಕಾಂಗ್ರೆಸ್ ಪಕ್ಷ ಪೂರ್ಣ ಮುಗಿಸೋ ತನಕ ಸಿದ್ದರಾಮಯ್ಯ ಬಿಡೋಲ್ಲ. ಹಾಗಾಗಿ ಅವರಿಗೆ ಬಿಜೆಪಿ ಬಗ್ಗೆ ಮಾತನಾಡೋಕೆ ಏನೇನು ಅಧಿಕಾರ ಇಲ್ಲ ಎಂದರು.

SCROLL FOR NEXT