ರಾಜಕೀಯ

ಸಿಲಿಕಾನ್ ಸಿಟಿಯ ಪ್ರತಿಷ್ಠಿತ ನಾಲ್ಕು ಕ್ಷೇತ್ರಗಳಿಗಾಗಿ ಹೋರಾಟ: ಹಾಲಿ-ಮಾಜಿ ಸಿಎಂಗಳ ಪ್ರಚಾರ

Shilpa D

ಬೆಂಗಳೂರು: ಪಕ್ಷಗಳನ್ನು ಹೊರತುಪಡಿಸಿ ಎಲ್ಲಾ  ಹಿರಿಯ ನಾಯಕರು ಹಾಗೂ ಮಾಜಿ ಸಿಎಂ ಮತ್ತು ಮಾಜಿ ಪ್ರದಾನಿಗಳು ಬೆಂಗಳೂರಿನ ನಾಲ್ಕು ವಿಧಾನಸಭೆ ಕ್ಷೇತ್ರಗಳನ್ನು ತಮ್ಮದಾಗಿಸಿಕೊಳ್ಳಲು ವಿಶೇಷ ಗಮನ ಹರಿಸುತ್ತಿವೆ. 

ರಾಜ್ಯದ 15 ವಿಧಾನಸಭೆ ಕ್ಷೇತ್ರಗಳಿಗೆ ಡಿಸೆಂಬರ್ 5 ರಂದು ಉಪ ಚುನಾವಣೆ ನಡೆಯುತ್ತಿದ್ದು,  ಬೆಂಗಳೂರಿನ ನಾಲ್ಕು ಕ್ಷೇತ್ರಗಳು ಪ್ರತಿಷ್ಠೆಯ ಕಣಗಳಾಗಿ ಮಾರ್ಪಟ್ಟಿವೆ, ನಾಲ್ಕು ಕ್ಷೇತ್ರಗಳು ಬಿಜೆಪಿ ಕೋಟೆಗಳಲ್ಲ, ಹಿಗಾಗಿ ಈ ನಾಲ್ಕು ಕ್ಷೇತ್ರಗಳನ್ನು ತಮ್ಮ ವಶವಾಗಿಸಲು ಹರಸಾಹಸ ನಡೆಯುತ್ತಿದೆ.

ಮುಂದಿನ 10 ದಿನಗಳಲ್ಲಿ ಕೊನೆ ಪಕ್ಷ 7 ಮಾಜಿ ಸಿಎಂ ಗಳು ಈ ಕ್ಷೇತ್ರಗಳಲ್ಲಿ ಪ್ರಚಾರ ನಡೆಸಲಿದ್ದಾರೆ,  ಮಾಜಿ ಪಿಎಂ ಹಾಗೂ ಸಿಎಂ ಎಚ್.ಡಿ ದೇವೇಗೌಡ, ಕುಮಾರಸ್ವಾಮಿ, ಸಿದ್ದರಾಮಯ್ಯ, ಎಸ್ ಎಂ ಕೃಷ್ಣ, ಡಿವಿ ಸದಾನಂದ ಗೌಡ. ವೀರಪ್ಪ ಮೊಯ್ಲಿ, ಜಗದೀಶ್ ಶೆಟ್ಟರ್ ಹಾಗೂ ಸಿಎಂ ಯಡಿಯೂರಪ್ಪ ಕೂಡ ಪ್ರಚಾರದಲ್ಲಿ ಪಾಲ್ಗೊಳ್ಳಲಿದ್ದಾರೆ.

ಗುರುವಾರ ನಾಮಪತ್ರ ಹಿಂಪಡೆಯುವ ಕಾರ್ಯ ಮುಗಿದಿದ್ದು, ಶುಕ್ರವಾರದಿಂದ ಪ್ರಚಾರದ ಭರಾಟೆ ಆರಂಭವಾಗಿದೆ, ಯಶವಂತಪುರ ಮತ್ತು ಮಹಾಲಕ್ಷ್ಮಿ ಲೇಔಟ್ ಗಳಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಮಾಜಿ ಸಿಎಂ ಸಿದ್ದರಾಮಯ್ಯ ಪ್ರಚಾರ ಕೈಗೊಂಡಿದ್ದರು.  ಕೇಂದ್ರ ಸಚಿವ ಸದಾನಂದ ಗೌಡ ಕೂಡ ಮಹಾಲಕ್ಷ್ಮಿ ಲೇಔಟ್ ನಲ್ಲಿ  ಪಾರ್ಕ್ ನಲ್ಲಿ ನಾಗರಿಕರನ್ನು ಭೇಟಿ ಮಾಡಿ ಅಭ್ಯರ್ಥಿಗಳ ಪರ ಪ್ರಚಾರ ಮಾಡಿದರು.

ಶನಿವಾರದಿಂದ ಪ್ರಚಾರ ಕಾರ್ಯ ಆರಂಭಿಸುವ ಸಿಎಂ ಯಡಿಯೂರಪ್ಪ  ಮುಂದಿನ 10 ದಿನಗಳು ಫುಲ್ ಬ್ಯುಸಿಯಾಗಿದ್ದಾರೆ, ನಾಲ್ಕು ದಿನ ಬೆಂಗಳೂರಿನಲ್ಲಿ ಪ್ರಚಾರಕ್ಕೆ ನಿಗದಿ ಪಡಿಸಿದ್ದಾರೆ, ಬೆಂಗಳೂರಿನ ನಾಲ್ಕು ಕ್ಷೇತ್ರ ಗೆಲ್ಲುವುದರಿಂದ ಅಪಾರ ಪ್ರಮಾಣದ ವ್ಯತ್ಯಾಸವಾಗಲಿದೆ, ಹೀಗಾಗಿ ಸಿಎಂ, ಸಚಿವರು, ಡಿಸಿಎಂ ಸೇರಿ ಕೇಂದ್ರ ಮಂತ್ರಿಗಳು ಎಲ್ಲರು ಸೇರಿ ಪ್ರಚಾರ ಕಾರ್ಯದಲ್ಲಿ ಭಾಗವಹಿಸಲಿದ್ದಾರೆ ಎಂದು ಬಿಜೆಪಿ ನಾಯಕರೊಬ್ಬರು ತಿಳಿಸಿದ್ದಾರೆ.

ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯ ಮತ್ತು ದಿನೇಶ್ ಗುಂಡೂರಾವ್ ಇಬ್ಬರೆ ಎಲ್ಲಾ ಕ್ಷೇತ್ರಗಳಲ್ಲೂ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ, ಮಾಜಿ ಕೇಂದ್ರ ಸಚಿವ ರೆಹಮಾನ್ ಖಾನ್, ಮಾಜಿ ಸ್ಪೀಕರ್ ರಮೇಶ್ ಕುಮಾರ್, ಪರಮೇಶ್ವರ್ ಸೇರಿದಂತೆ ಮುಂದಿನ ಕೆಲವು ದಿನಗಳಲ್ಲಿ ಪ್ರಚಾರ ಕಾರ್ಯದಲ್ಲಿ ಬಾಗವಹಿಸಲಿದ್ದಾರೆ.

SCROLL FOR NEXT