ರಾಜಕೀಯ

ನಾನು ಉಪ ಮುಖ್ಯಮಂತ್ರಿಯಾಗಲಿಲ್ಲ ಎಂಬ ನೋವು ಜನರಲ್ಲಿದೆ: ಸಚಿವ ಶ್ರೀರಾಮುಲು

Lingaraj Badiger

ಮೈಸೂರು: ನಾನು ಉಪ ಮುಖ್ಯಮಂತ್ರಿಯಾಗಲಿಲ್ಲ ಎಂಬ ನೋವು ಜನರಲ್ಲಿ ಇದೆ ಎಂದು ಹೇಳುವ ಮೂಲಕ ಆರೋಗ್ಯ ಸಚಿವ ಬಿ ಶ್ರೀರಾಮುಲು ಅವರು ಡಿಸಿಎಂ ಸ್ಥಾನದ ಮೇಲೆ ತಮಗಿರುವ ಆಪೇಕ್ಷೆಯನ್ನು ಭಾನುವಾರ ನೇರವಾಗಿಯೇ ಹೇಳಿಕೊಂಡಿದ್ದಾರೆ.

ಇಂದು ಹುಣಸೂರು ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಎಚ್.​ವಿಶ್ವನಾಥ್​ ಪರ ಪ್ರಚಾರ ಮಾಡಿದ ಶ್ರೀರಾಮುಲು, “ನಿಮ್ಮೆಲ್ಲರ ಆಶೀರ್ವಾದದಿಂದ ರಾಮುಲುಗೆ ಉಪಮುಖ್ಯಮಂತ್ರಿ ಸ್ಥಾನ ಸಿಗಬೇಕಿತ್ತು. ಆದರೆ, ಅದು ಆಗಲಿಲ್ಲವಲ್ಲ ಎಂಬ ನೋವು ಅನೇಕ ಕಡೆ ಇದೆ. ರಾಮುಲು ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ಕೊಡಲಿಲ್ಲ ಅಂತ ಒಬ್ಬ ವೃದ್ಧರು ಹೇಳುತ್ತಿದ್ದರು” ಎಂದು ತಿಳಿಸಿದ್ದಾರೆ. ಅಲ್ಲದೆ ಮುಂದೆ ತಾವು ಉಪ ಮುಖ್ಯಮಂತ್ರಿಯಾಗುವುದಾಗಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಹುಣಸೂರಿನಲ್ಲಿ ವಿಶ್ವನಾಥ್ ಅವರು ಅಭ್ಯರ್ಥಿ ಅಲ್ಲ. ನಾನೇ ಅಭ್ಯರ್ಥಿ ಎಂದು ಮತ ಹಾಕಿ ಗೆಲ್ಲಿಸಿ ಎಂದು ಶ್ರೀರಾಮುಲು ಮತದಾರರಲ್ಲಿ ಮನವಿ ಮಾಡಿದರು.

ಹುಣಸೂರು ವಿಧಾನ ಸಭಾ ಕ್ಷೇತ್ರದ ಬನ್ನಿಕುಪ್ಪೆಯಲ್ಲಿ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಎಚ್.ವಿಶ್ವನಾಥ್ ಚುನಾವಣೆಯಲ್ಲಿ ಗೆದ್ದ 24 ಗಂಟೆಯಲ್ಲೆ ಮಂತ್ರಿಯಾಗುತ್ತಾರೆ. ನಿಮಗೆ ಶಾಸಕರು ಬೇಕೋ, ಮಂತ್ರಿ ಬೇಕೋ ನೀವೇ ತೀರ್ಮಾನ ಮಾಡಿ ಎಂದು ಕ್ಷೇತ್ರದ ಜನರಲ್ಲಿ ಅವರು ಮನವಿ ಮಾಡಿದರು.

ಪ್ರಚಾರ ಭಾಷಣದ ಮಾತಿನ ಮಧ್ಯೆ ಶ್ರೀರಾಮುಲು ಎಡವಟ್ಟು ಮಾಡಿ ಕೊಂಡು, ಸುಪ್ರೀಂಕೋರ್ಟ್ 17 ಶಾಸಕರನ್ನು ಅನರ್ಹಗೊಳಿಸಿಲ್ಲ, ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನೇ ತಪ್ಪಾಗಿ ವ್ಯಾಖ್ಯಾನಿಸಿದರು .17 ಜನ ಶಾಸಕರು ಸ್ಥಿರ ಸರ್ಕಾರಕ್ಕಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ‌ ನೀಡಿದ್ದಾರೆ. ಕೋರ್ಟ್ ಅವರನ್ನು ಅನರ್ಹರು ಅಂತ ಹೇಳಿಲ್ಲ.ಈ ಚುನಾವಣೆಯಲ್ಲಿ ಯಾರು ಅರ್ಹರು ಯಾರು,ಅನರ್ಹರು ಎಂಬುದ ನ್ನು ಜನ ತೀರ್ಮಾನ ಮಾಡುತ್ತಾರೆ ಎಂದರು.

SCROLL FOR NEXT