ರಾಜಕೀಯ

ಉಪ ಚುನಾವಣೆ: ಗೋಕಾಕ್, ಅಥಣಿ ಕ್ಷೇತ್ರಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಹಣಬಲ, ತೋಳ್ಬಲ 

Sumana Upadhyaya

ಬೆಳಗಾವಿ: ಡಿಸೆಂಬರ್ 5ರಂದು ರಾಜ್ಯದ 15 ಕ್ಷೇತ್ರಗಳಿಗೆ ನಡೆಯಲಿರುವ ಉಪ ಚುನಾವಣೆಯಲ್ಲಿ ಬೆಳಗಾವಿ ಜಿಲ್ಲೆಯ ಗೋಕಾಕ್ ಮತ್ತು ಅಥಣಿ ಕ್ಷೇತ್ರಗಳು ರಾಜಕೀಯವಾಗಿ ಮಹತ್ವವಾದದ್ದು. ಇಲ್ಲಿ ಹಣ ಮತ್ತು ತೋಳ್ಬಲ ಹೆಚ್ಚು ಸದ್ದು ಮಾಡುತ್ತಿದೆ. 

ಅಥಣಿಯಲ್ಲಿ ಬಿಜೆಪಿ ಅಭ್ಯರ್ಥಿ ಮಹೇಶ್ ಕುಮಟಳ್ಳಿ ಪರವಾಗಿ ಡಿಸಿಎಂ ಗೋವಿಂದ ಕಾರಜೋಳ ಮತದಾರರಿಗೆ ಹಣ ಹಂಚಿಕೆ ಮಾಡಲು ಕಾರ್ಯಕರ್ತರಿಗೆ ಹಣ ನೀಡುತ್ತಿರುವ ವಿಡಿಯೊ ವ್ಯಾಪಕವಾಗಿ ವೈರಲ್ ಆಗಿ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ದೂರು ಸಲ್ಲಿಸಿದೆ.


ಬಿಜೆಪಿ ಗೋಕಾಕ್ ನಲ್ಲಿ ಪ್ರತಿ ಬೂತ್ ಗೆ 35 ಸಾವಿರ ರೂಪಾಯಿಗಳಂತೆ ವಿತರಣೆ ಮಾಡಿದೆ ಎಂದು ಕಾಂಗ್ರೆಸ್ ನಾಯಕ ಸತೀಶ್ ಜಾರಕಿಹೊಳಿ ಆರೋಪಿಸಿದ್ದಾರೆ. ಕ್ಷೇತ್ರದಲ್ಲಿನ 283 ಬೂತ್ ಗಳಿಗೆ ಹಂಚಿಕೆ ಮಾಡಲು ಡಿಸಿಎಂ ಕಾರಜೋಳ ಸಮಾರು 1 ಕೋಟಿ ರೂಪಾಯಿ ನೀಡಿದ್ದಾರೆ ಎಂದು ಅಂದಾಜಿಸಲಾಗಿದೆ. ಬೂತ್ ನ ಉಸ್ತುವಾರಿ ಹೊಂದಿರುವವರಿಗೆ ನೀಡಲೆಂದು ಗೋಕಾಕ್ ಪಟ್ಟಣದಲ್ಲಿರುವ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಕಚೇರಿಯಲ್ಲಿ ಹಣ ನೀಡಲಾಗಿದೆ. ಬಿಜೆಪಿ ಅಭ್ಯರ್ಥಿ ರಮೇಶ್ ಜಾರಕಿಹೊಳಿಯವರ ಚುನಾವಣಾ ಕಚೇರಿಯನ್ನು ಗೋಕಾಕ್ ನ ಎನ್ ಎಸ್ಎಫ್ ಅತಿಥಿಗೃಹಕ್ಕೆ ವರ್ಗಾಯಿಸಲಾಗಿದೆ,ಯಾಕೆಂದರೆ ಅಲ್ಲಿ ಬಾಲಚಂದ್ರ ಅವರ ಕಚೇರಿಯಿದೆ ಎಂದು ಸತೀಶ್ ಜಾರಕಿಹೊಳಿ ಆರೋಪಿಸಿದ್ದಾರೆ.


ಮತದಾರರಿಗೆ ಹಂಚಿಕೆ ಮಾಡಲೆಂದು ಬಿಜೆಪಿ ಗೋಕಾಕ್ ಗೆ 40 ಕೋಟಿ ರೂಪಾಯಿ ತಂದಿದೆ. ಮೊದಲ ಕಂತಿನಲ್ಲಿ ಪ್ರತಿ ಬೂತ್ ಗೆ ಕೊಡಲು ತಲಾ 35 ಸಾವಿರ ರೂಪಾಯಿ ಹಂಚಿಕೆ ಮಾಡಲಾಗುತ್ತಿದ್ದು ಮುಂದಿನ ದಿನಗಳಲ್ಲಿ ಇನ್ನಷ್ಟು ಹಣವನ್ನು ಮತದಾರರಿಗೆ ನೀಡಿ ಆಮಿಷವೊಡ್ಡಬಹುದು ಎಂದಿದ್ದಾರೆ.


ಬಿಜೆಪಿಯ ರಮೇಶ್ ಜಾರಕಿಹೊಳಿ ಮತ್ತು ಕಾಂಗ್ರೆಸ್ ನ ಲಖನ್ ಜಾರಕಿಹೊಳಿ ಸೋದರರ ಮಧ್ಯೆ ಕಲಹಗಳಿರುವುದರಿಂದ ಇಲ್ಲಿ ಹಣ ಮತ್ತು ತೋಳ್ಬಲ ಪ್ರಮುಖ ಪಾತ್ರ ವಹಿಸುತ್ತದೆ. ಗೋಕಾಕ್ ನ ಬಿಜೆಪಿ ನಾಯಕರ ವಿರುದ್ಧ ಸತೀಶ್ ಜಾರಕಿಹೊಳಿ ಮಾಡಿರುವ ದೂರಿನ ಬಗ್ಗೆ ಚುನಾವಣಾ ಆಯೋಗ ಏನು ಕ್ರಮ ಕೈಗೊಂಡಿದೆ ಎಂದು ಇನ್ನೂ ಸ್ಪಷ್ಟವಾಗಿಲ್ಲ.


ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬೆಳಗಾವಿ ಗ್ರಾಮಾಂತರ ಭಾಗದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಪರವಾಗಿ ಮತದಾರರಿಗೆ ಸಾವಿರಾರು ಕುಕ್ಕರ್ ವಿತರಿಸಲಾಗಿತ್ತು ಎಂಬ ಆರೋಪ ವ್ಯಾಪಕ ಸದ್ದು ಮಾಡಿತ್ತು. 


ಹುಣುಸೂರಿನಲ್ಲಿ 2 ಕೋಟಿ ರೂ ವಶ: ಚುನಾವಣಾ ಪ್ರಚಾರದ ವೇಳೆ ಕರ್ತವ್ಯದಲ್ಲಿದ್ದ ಪೊಲೀಸರು ನಿನ್ನೆ ಹುಣುಸೂರು ತಾಲ್ಲೂಕಿನ ಮಂಗನಹಳ್ಳಿ ಚೆಕ್ ಪೋಸ್ಟ್ ಬಳಿ ಪೆರಿಯಪಟ್ನಕ್ಕೆ ಜೀಪಿನಲ್ಲಿ ಸಾಗಿಸುತ್ತಿದ್ದ 2 ಕೋಟಿ ರೂಪಾಯಿಗಳನ್ನು ವಶಪಡಿಸಿಕೊಂಡಿದ್ದಾರೆ. 
ತಾವು ಬ್ಯಾಂಕು ಉದ್ಯೋಗಿಗಳಾಗಿದ್ದು ಪೆರಿಯಪಟ್ನಕ್ಕೆ ಹಣ ವರ್ಗಾಯಿಸುತ್ತಿದ್ದೇವೆ ಎಂದು ಜೀಪಿನಲ್ಲಿದ್ದ ಇಬ್ಬರು ಹೇಳಿದರೂ ಕೂಡ ಪೊಲೀಸರು ಅವರ ಮಾತಿನಲ್ಲಿ ನಂಬಿಕೆ ಬಾರದೆ ಮತ್ತು ಯಾವುದೇ ದಾಖಲೆಗಳಿಲ್ಲದ ಕಾರಣ ಹಣವನ್ನು ಜಪ್ತಿ ಮಾಡಿದರು.

SCROLL FOR NEXT