ರಾಜಕೀಯ

ಬಿಜೆಪಿಗೆ ಸೇರ್ಪಡೆಗೊಂಡರೆ ಅನರ್ಹ ಶಾಸಕರಿಗೆ ಉಪ ಚುನಾವಣೆ ಟಿಕೆಟ್: ಸಿಎಂ ಯಡಿಯೂರಪ್ಪ

Manjula VN

ಬೆಂಗಳೂರು: ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರೆ ಎಲ್ಲಾ ಅನರ್ಹ ಶಾಸಕರಿಗೆ ಉಪ ಚುನಾವಣೆಯಲ್ಲಿ ಟಿಕೆಟ್ ನೀಡಲಾಗುತ್ತದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸೋಮವಾರ ಹೇಳಿದ್ದಾರೆ. 

ಅನರ್ಹ ಶಾಸಕರಿಗೆ ಟಿಕೆಟ್ ನೀಡುವುದರ ಕುರಿತು ಬಿಜೆಪಿ ಪಕ್ಷದಲ್ಲಿ ಸಾಕಷ್ಟು ವಿರೋಧಗಳು ವ್ಯಕ್ತವಾಗಿದ್ದವು. ಇದರಿಂದ ಸಾಕಷ್ಟು ಗೊಂದಲಗಳೂ ಕೂಡ ಸೃಷ್ಟಿಯಾಗಿದ್ದವು. 

ಈ ಹಿನ್ನಲೆಯಲ್ಲಿ ಸ್ಪಷ್ಟನೆ ನೀಡಿರುವ ಯಡಿಯೂರಪ್ಪ ಅವರು, ಅನರ್ಹ ಶಾಸಕರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರೆ, ಉಪ ಚುನಾವಣೆಯಲ್ಲಿ ಟಿಕೆಟ್ ನೀಡಲಾಗುತ್ತದೆ. ಮಾಜಿ ಶಾಸಕರಿಗೆ ಟಿಕೆಟ್ ನೀಡುವುದು ನಮ್ಮ ಕರ್ತವ್ಯ ಎಂದು ಅಮಿತ್ ಶಾ ಈಗಾಗಲೇ ಹೇಳಿದ್ದಾರೆಂದು ಹೇಳಿದ್ದಾರೆ. 
 
2018ರ ವಿಧಾನಸಭಾ ಚುನಾವಣೆಯಲ್ಲಿ ಸೋಲು ಕಂಡ ಬಿಜೆಪಿ ಆಕಾಂಕ್ಷಿಗಳಿಗೆ ಸರ್ಕಾರ ನಡೆಸುತ್ತಿರುವ ನಿಗಮ ಮಂಡಳಿಯಲ್ಲಿ ಅವಕಾಶ ನೀಡಲಾಗುತ್ತದೆ. ಉಪ ಚುನಾವಣೆ ಹತ್ತಿರ ಬರುತ್ತಿದ್ದು, 15 ಕ್ಷೇತ್ರಗಳ ಉಪ ಚುನಾವಣೆಗೆ ದಿನಾಂಕ ಘೋಷಣೆಯಾಗಿದೆ. ಈಗಾಗಲೇ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿರುವ ಶಾಸಕರು ಬಿಜೆಪಿ ಪಕ್ಷದಿಂದ ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ಇಚ್ಛಿಸಿದ್ದಾರೆ. ಎಲ್ಲರಿಗೂ ಟಿಕೆಟ್ ನೀಡುವುದು ನಮ್ಮ ಜವಾಬ್ದಾರಿಯೆಂದು ಅಮಿತ್ ಶಾ ಹೇಳಿದ್ದಾರೆಂದು ತಿಳಿಸಿದ್ದಾರೆ. 

ಟಿಕೆಟ್ ನೀಡುವ ಕುರಿತು ಯಾವುದೇ ಗೊಂದಲಗಳಿಲ್ಲ. ನಮ್ಮ ಪಕ್ಷದಿಂದಲೇ ಚುನಾವಣೆಯಲ್ಲಿ ನಿಲ್ಲುವುದಾದರೆ, ಅವರಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗುತ್ತಿದೆ. ಅವರನ್ನು ಅಭ್ಯರ್ಥಿಯನ್ನಾಗಿ ನಿಲ್ಲಿಸಲಾಗುತ್ತದೆ. ಅವರ ಗೆಲುವಿಗಾಗಿ ಬಿಜೆಪಿ ನಾಯಕರು ಹಾಗೂ ಪಕ್ಷದ ಕಾರ್ಯಕರ್ತರು ಜವಾಬ್ದಾರಿ ಹೊತ್ತುಕೊಳ್ಳಲಿದ್ದಾರೆಂದಿದ್ದಾರೆ. 

ಯಡಿಯೂರಪ್ಪ ಅವರ ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಅನರ್ಹ ಶಾಸಕ ಬಿ.ಸಿ.ಪಾಟೀಲ್ ಅವರು, ಯಡಿಯೂರಪ್ಪ ಅವರ ಹೇಳಿಕೆ ಸಂತಸ ತಂದಿದೆ. ಈ ಬಗ್ಗೆ ಎಲ್ಲಾ ಅನರ್ಹ ಶಾಸಕರು ಕುಳಿತು ಚರ್ಚೆ ನಡೆಸಿ, ತೀರ್ಮಾನ ಕೈಗೊಳ್ಳುತ್ತೇವೆ. ಬಿಜೆಪಿ ಸೇರ್ಪಡೆ ಕುರಿತು ನಾವು ಯಾರೂ ಚರ್ಚೆ ನಡೆಸಿಯೇ ಇಲಲ್ಲ. ನಮ್ಮ ಅನರ್ಹತೆ ಕುರಿತು ನ್ಯಾಯಾಲಯ ತೀರ್ಮಾನ ಕೈಗೊಳ್ಳಲಿ. ನಂತರ ನಾವು ಚರ್ಚೆ ನಡೆಸಿ, ತೀರ್ಮಾನ ಕೈಗೊಳ್ಳುತ್ತೇವೆಂದು ಹೇಳಿದ್ದಾರೆ. 

SCROLL FOR NEXT