ರಾಜಕೀಯ

ಕಾಂಗ್ರೆಸ್ ಇರುವುದೇ ಮುಸ್ಲಿಮರಿಗೆ ಸಹಾಯ, ಅವಕಾಶ ನೀಡಲು: ಈಶ್ವರಪ್ಪ ಹೇಳಿಕೆಗೆ ಮೇಲ್ಮನೆಯಲ್ಲಿ ತೀವ್ರ ಗದ್ದಲ

Manjula VN

ಬೆಂಗಳೂರು: ಮುಸ್ಲಿಮರಿಗೆ ಅವಕಾಶ ಕಲ್ಪಿಸಲು ಹಾಗೂ ಮುಸ್ಲಿಮರಿಗೆ ಸಹಾಯ ಮಾಡಲು ಕಾಂಗ್ರೆಸ್ ಪಕ್ಷವಿದೆ ಎಂಬ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಅವರು ನೀಡಿದ ಹೇಳಿಕೆ ಮೇಲ್ಮನೆಯಲ್ಲಿ ತೀವ್ರ ಗದ್ದಲವನ್ನು ಸೃಷ್ಟಿಸಿತ್ತು. 

ಅಂತರಾಷ್ಟ್ರೀಯ ಬಾಸ್ಕೆಟ್ ಬಾಲ್ ಫೆಡರೇಷನ್ (ಫಿಬಾ) ಸದಸ್ಯರಾಗಿ ಹಾಗೂ ರಾಷ್ಟ್ರೀಯ ಬಾಸ್ಕೆಟ್ ಬಾಲ್ ಫೆಡರೇಷನ್ ಅಧ್ಯಕ್ಷರಾಗಿ ಆಯ್ಕೆಯಾಗಿರುವ ವಿಧಾನ ಪರಿಷತ್ ಸದಸ್ಯ ಕೆ.ಗೋವಿಂದರಾಜ ಅವರಿಗೆ ವಿಧಾನಪರಿಷತ್ ನಲ್ಲಿ ಪಕ್ಷಭೇದ ಮರೆತು ಎಲ್ಲಾ ಸದಸ್ಯರು ಅಭಿನಂದನೆ ಸಲ್ಲಿಸಿದರು. 

ಈ ವೇಳೆ ಮಾತನಾಡಿದ ಜೆಡಿಎಸ್ ಹಿರಿಯ ಸದಸ್ಯ ಬಸವರಾಜ ಹೊರಟ್ಟಿಯವರು, ಇತ್ತೀಚೆಗೆ ಜನಪ್ರತಿನಿಧಿಗಳು ಸದಾ ಮಾತಿನ ಚಕಮಕಿ ನಡೆಸುವುದರಲ್ಲೇ ಮುಳುಗಿದ್ದಾರೆ. ಆದರೆ, ಹಿಂದಿನ ದಿನಗಳಲ್ಲಿ ಶಾಸಕರ ದಿನಾಚರಣೆ ಆಚರಿಸಿ, ಕಬಡ್ಡಿ, ಟೆನಿಸ್ ಸೇರಿದಂತೆ ವಿವಿಧ ಆಟಗಳನ್ನು ಆಡುತ್ತಿದ್ದೆವು. ಅದು ಪುನಃ ಆರಂಭವಾಗಬೇಕೆಂದು ಸಭಾಪತಿಗಳಲ್ಲಿ ಮನವಿ ಮಾಡಿದರು. 

ಈ ವೇಳೆ ಪ್ರತಿಕ್ರಿಯೆ ನೀಡಿದ ಕಾಂಗ್ರೆಸ್ ಸದಸ್ಯ ಸಿಎಂ ಇಬ್ರಾಹಿಂ ಅವರು, ಕಬಡ್ಡಿ ಬೇಡ. ಬಿಜೆಪಿಯವರು ಕಬಡ್ಡಿಯಲ್ಲಿ ಫೇಮಸ್ಸು. ಈಗಾಗಲೇ 17 ಜನರನ್ನು ಎಳೆದುಕೊಂಡು ಹೋಗಿದ್ದಾರೆಂದು ಹೇಳಿದರು. ಈ ವೇಳೆ ಸದನ ನಗೆಗಡಲಲ್ಲಿ ತೇಲಿತು. 

ಇದಕ್ಕೆ ಪ್ರತಿಕ್ರಿಯೆ ನೀಡಿದ ಆರ್.ಅಶೋಕ್ ಅವರು, ನಮ್ಮ ಕಬಡ್ಡಿ ಈಗ ಆರಂಭವಾಗಿದೆ. ನಮ್ಮದು ಪ್ರೊ ಕಬಡ್ಡಿ. ಭಾರೀ ಫಾಸ್ಟ್ ಎಂದು ಉತ್ತರಿಸಿದರು. ಇದಕ್ಕೆ ಸುಮ್ಮನಾಗದೇ ಮಧ್ಯ ಪ್ರವೇಶಿಸಿದ ಐವಾನ್ ಡಿಸೋಜಾ ಅವರು ಕಬಡ್ಡಿ ರಾಜಕಾರಣಿಗಳ ಪ್ರೀತಿಯ ಆಟ ಎಂದು ವ್ಯಂಗ್ಯವಾಡಿದರು. 

ಬಳಿಕ ಮಾತು ಮುಂದುವರೆಸಿದ ಈಶ್ವರಲ್ಲ ಅವರು, ಗೋವಿಂದ ರಾಜು ಅವರನ್ನು ಕ್ರೀಡಾ ಸಚಿವರನ್ನಾಗಿ ಮಾಡುವಂತೆ ಈ ಹಿಂದೆ ನಾನು ಸಲಹೆ ನೀಡಿದ್ದೆ. ಆದರೆ, ಅಂದಿನ ಮುಖ್ಯಮಂತ್ರಿಗಳಾಗಿದ್ದ ಸಿದ್ದರಾಮಯ್ಯ ಅವರು ಕ್ರೀಡಾ ಸಚಿವ ಸ್ಥಾನ ನೀಡದೆ ಗೋವಿಂದ ರಾಜು ಅವರಿಗೆ ರಾಜಕೀಯ ಕಾರ್ಯದರ್ಶಿ ಹುದ್ದೆ ನೀಡಿದ್ದರು. ಕೆಲಸ ಇಲ್ಲದಿರುವವರಿಗೆ ಮುಖ್ಯಮಂತ್ರಿಗಳ ಕಾರ್ಯದರ್ಶಿ ಹುದ್ದೆ ನೀಡಲಾಗುತ್ತದೆ ಎಂದು ಸಾಮಾನ್ಯವಾಗಿ ಜನ ಹೇಳುತ್ತಾರೆ. ಈ ವೇಳೆ ಎದ್ದು ನಿಂತ ಇಬ್ರಾಹಿಂ ಅವರನ್ನು ನೋಡಿದ ಈಶ್ವರಪ್ಪ ಅವರು, ಇಬ್ರಾಹಿಂ ಅವರು ಬಿಜೆಪಿಗೆ ಬರು ಸಿದ್ಧರಾಗಿದ್ದು, ಮುಸ್ಲಿಂ ಕೋಟಾದಲ್ಲಿ ಇಬ್ರಾಂ ಸಚಿವರಾಗಲಿ ಎಂದು ಹೇಳಿದರು. 

ಇದಕ್ಕೆ ಪ್ರತಿಕ್ರಿಯೆ ನೀಡಿದ ಕಾಂಗ್ರೆಸ್ ನಾಯಕ ರಿಜ್ವಾನ್ ಅವರು, ಈ ರೀತಿಯ ಕೋಟಾ ಇದೆಯೇ, ಇದ್ದಿದ್ದರೆ, ಬಿಜೆಪಿ ಮುಸ್ಲಿಮರಿಗೆ ಟಿಕೆಟ್ ನೀಡುತ್ತಿತ್ತೇ? ಎಂದು ಪ್ರಶ್ನಿಸಿದರು. 

ಇದಕ್ಕೆ ತೀವ್ರವಾಗಿ ಕೆಂಡಾಮಂಡಲಗೊಂಡ ಈಶ್ವರಪ್ಪ, ಕಾಂಗ್ರೆಸ್ ಇರುವುದೇ ಮುಸ್ಲಿಮರಿಗೆ ಅವಕಾಶ ಕಲ್ಪಿಸಲು, ಅವರಿಗೆ ಸಹಾಯ ಮಾಡಲು ಎಂದರು. 

ಬಳಿಕ ಮಾತನಾಡಿದ ರಿಜ್ವಾನ್ ಬಿಜೆಪಿಯವರಿಗೆ ಜಾತಿ, ಧರ್ಮ ವಿಚಾರದಲ್ಲಿ ರಾಜಕೀಯ ಮಾಡುವುದಷ್ಟೇ ಗೊತ್ತಿದೆ. ಹಿಂದೂ, ಮುಸ್ಲಿಂ ಎಂಬ ಒಡಕು ಆರಂಭವಾಗಿದ್ದೇ ಬಿಜೆಪಿಯಿಂದ. ನಮ್ಮ ಪಕ್ಷ ದೇಶಕ್ಕಾಗಿ ಇದೆ ಎಂದು ಹೇಳಿದರು. 

ಇದಕ್ಕೆ ಪ್ರತಿಕ್ರಿಯೆ ನೀಡಿದ ಬಿಜೆಪಿ ನಾಯಕ ತೇಜಸ್ವಿ ರಮೇಶ್ ಅವರು, ಜಿನ್ನಾಹ್ ಮುಸ್ಲಿಮರಿಗಾಗಿ ಪ್ರತ್ಯೇಕ ರಾಷ್ಟ್ರ ಬೇಕೆಂದು ಆಗ್ರಹಿಸಿತ್ತು. ಇದಕ್ಕೆ ಕಾಂಗ್ರೆಸ್ ಬೆಂಬಲ ನೀಡಿತ್ತು ಎಂದರು. ಬಳಿಕ ಈ ಸಂಬಂಧ ಕೆಲಕಾಲ ಮೇಲ್ಮನೆಯಲ್ಲಿ ತೀವ್ರ ಗದ್ದಲ ಸೃಷ್ಟಿಯಾಗಿತ್ತು. 

SCROLL FOR NEXT