ರಾಜಕೀಯ

ಸಿದ್ದರಾಮಯ್ಯ ಹೆಗಲೇರಿದ ಉಪ ಚುನಾವಣೆ ಹೊಣೆ: ವೀಕ್ಷಕರ ಸಭೆಗೆ ಹಿರಿಯ ನಾಯಕರ ಗೈರು 

Nagaraja AB

ಬೆಂಗಳೂರು: ಹದಿನೈದು ಕ್ಷೇತ್ರಗಳ ಉಪ ಚುನಾವಣೆಗೆ ಪಕ್ಷ ಸಂಘಟನೆ, ಅಭ್ಯರ್ಥಿಗಳ ಆಯ್ಕೆ ಕುರಿತು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಕರೆದಿದ್ದ ವೀಕ್ಷಕರ ಹಾಗೂ ನಾಯಕರ ಸಭೆಗೆ ಗೈರಾಗುವ ಮೂಲಕ ಕಾಂಗ್ರೆಸ್ ಹಿರಿಯ ನಾಯಕರು ತಮ್ಮ ಅಸಮಾಧಾನವನ್ನು ಮತ್ತೊಮ್ಮೆ ಹೊರ ಹಾಕಿದ್ದಾರೆ.

ರಾಜ್ಯದಲ್ಲಿ ನಡೆಯುವ 15 ಕ್ಷೇತ್ರಗಳ ಉಪ ಚುನಾವಣೆಗೆ ಸಿದ್ಧತೆ ಹಾಗೂ ಪಕ್ಷ ಸಂಘಟನೆ ಕುರಿತು ಚರ್ಚಿಸಲು ಮಂಗಳವಾರ ವೇಣುಗೋಪಾಲ್ ಹಿರಿಯ ನಾಯಕರ ಸಭೆ ಕರೆದಿದ್ದರು. ಆದರೆ, ಹಿರಿಯ ನಾಯಕರಾದ ಕೆ.ಎಚ್.ಮುನಿಯಪ್ಪ, ಎಂ. ವೀರಪ್ಪ ಮೊಯಿಲಿ, ಬಿ.ಕೆ. ಹರಿಪ್ರಸಾದ್, ಮಾಜಿ ಸಚಿವ ಎಚ್.ಕೆ.ಪಾಟೀಲ್, ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಸಭೆಯಿಂದ ದೂರ ಉಳಿದರು.

ಪ್ರತಿಪಕ್ಷದ ನಾಯಕನ ಆಯ್ಕೆ ವಿಷಯದಲ್ಲಿ ಪಕ್ಷದ ಹಿರಿಯ ನಾಯಕರು ಸಿದ್ದರಾಮಯ್ಯ ನೇಮಕಕ್ಕೆ ಸಾಕಷ್ಟು ವಿರೋಧ ವ್ಯಕ್ತಪಡಿಸಿದ್ದರೂ, ಹೈ ಕಮಾಂಡ್ ಅವರನ್ನೇ ನೇಮಕ ಮಾಡಿದ್ದು ಹಿರಿಯ ನಾಯಕರ ಅಸಮಾಧಾನಕ್ಕೆ ಕಾರಣವೆನ್ನಲಾಗಿದೆ. 

ಸಿದ್ದರಾಮಯ್ಯ ಪಕ್ಷದಲ್ಲಿ ಏಕಾಂಗಿಯಾಗಿ ಎಲ್ಲ ನಿರ್ಧಾರಗಳನ್ನು ತೆಗೆದುಕೊಂಡು ಹಿರಿಯ ನಾಯಕರನ್ನು ಕಡೆಗಣಿಸುತ್ತಿದ್ದಾರೆ ಎಂದು ಆರೋಪಿಸಿದ್ದ ಹಿರಿಯ ನಾಯಕರು, ಕೆ.ಸಿ.ವೇಣುಗೋಪಾಲ್ ಕೂಡ ಸಿದ್ದರಾಮಯ್ಯ ಪರವಾಗಿದ್ದಾರೆ ಎಂದು ಅವರಿಂದ ಅಂತರ ಕಾಯ್ದುಕೊಂಡಿದ್ದರು.

SCROLL FOR NEXT