ರಾಜಕೀಯ

ಸಾ.ರಾ.ಮಹೇಶ್ ರಾಜೀನಾಮೆ ಹಿಂಪಡೆಯಲಿದ್ದಾರೆ: ಹೆಚ್‌.ಡಿ.ದೇವೇಗೌಡ

Lingaraj Badiger

ಬೆಂಗಳೂರು: ಅನರ್ಹ ಶಾಸಕ ಹೆಚ್.ವಿಶ್ವನಾಥ್ ಅವರ ಆರೋಪಗಳಿಂದ ಬೇಸತ್ತು ಜೆಡಿಎಸ್ ಮುಖಂಡ, ಮಾಜಿ ಸಚಿವ ಸಾ.ರಾ. ಮಹೇಶ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವುದು ನಿಜ. ಆದರೆ ಗುರುವಾರ ಸಾ.ರಾ.ಮಹೇಶ್ ತಮ್ಮ ರಾಜೀನಾಮೆ ಹಿಂಪಡೆಯಲಿದ್ದಾರೆ ಎಂದು ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್.ಡಿ‌.ದೇವೇಗೌಡ ಅವರು ಬುಧವಾರ ಸ್ಪಷ್ಟಪಡಿಸಿದ್ದಾರೆ.

ಇಂದು ಜೆ.ಪಿ.ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾ.ರಾ.ಮಹೇಶ್ ರಾಜೀನಾಮೆ ಸಲ್ಲಿಸುವಾಗ ಸ್ಪೀಕರ್ ಬೆಂಗಳೂರಿನಲ್ಲಿ ಇರಲಿಲ್ಲ. ರಾಜೀನಾಮೆಯನ್ನು ವಾಪಸ್ ಪಡೆಯುವಂತೆ ಸ್ವತಃ ಸ್ಪೀಕರ್ ಅವರು ಸಲಹೆ ಮಾಡಿದ್ದಾರೆ. ಹೀಗಾಗಿ ಸಾ.ರಾ.ಮಹೇಶ್ ತಮ್ಮ ತ್ಯಾಗಪತ್ರವನ್ನು ಹಿಂಪಡೆಯಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪದವಿಧರ ಕ್ಷೇತ್ರಕ್ಕೆ ಚುನಾವಣೆ ಘೋಷಣೆ ಆಗಿದ್ದು, ಪಕ್ಷದ ಸದಸ್ಯತ್ವ ನೋಂದಣಿ ಕಾರ್ಯ ನಡೆಯುತ್ತಿದೆ. ಅ. 22 ರಂದು ಸುಪ್ರೀಂಕೋರ್ಟ್ ನಲ್ಲಿ 17 ಅನರ್ಹ ಶಾಸಕರ ಪ್ರಕರಣದ ತೀರ್ಪು ಹೊರಬೀಳಲಿದೆ. ಸ್ಪೀಕರ್ ತೀರ್ಪನ್ನು ನ್ಯಾಯಾಲಯ ಎತ್ತಿ ಹಿಡಿದರೆ ಉಪಚುನಾವಣೆ ನಡೆಯಲಿದೆ. ಹೀಗಾಗಿ ಎಲ್ಲಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಕುಮಾರಸ್ವಾಮಿ ತೀರ್ಮಾನಿಸಿದ್ದು, ಅವರ ನಿರ್ಧಾರಕ್ಕೆ ಎಲ್ಲರ ಸಹಮಹತ ಇದೆ ಎಂದರು.

ಚುನಾವಣೆ ಸಂಬಂಧ ಪಕ್ಷದ ಮುಖಂಡರ ಜೊತೆ ಚರ್ಚೆ ನಡೆಸಲಾಗುವುದು. ಅನೇಕ ಕಡೆ ಯುವ ಮುಖಂಡರು ಸ್ಪರ್ಧೆ ಮಾಡಲು ತಯಾರಾಗಿದ್ದಾರೆ. ಸೊಲು, ಗೆಲುವಿಗಿಂತ ಮಿಗಿಲಾಗಿ ಎಲ್ಲಾ ಕಡೆಗಳಲ್ಲಿ ಸ್ಪರ್ಧೆ ಮಾಡುವುದು ಅಗತ್ಯವಾಗಿದೆ.

ಜೆಡಿಎಸ್ ಕೇವಲ ಹಳೇ ಮೈಸೂರು ಭಾಗದಲ್ಲಿ ಮಾತ್ರ ಸ್ಪರ್ಧಿಸುತ್ತದೆ ಎಂಬ ಭಾವನೆ ಬೇಡ. ಈ 15 ಕ್ಷೇತ್ರದಲ್ಲಿ ಚುನಾವಣೆ ನಡೆದರೆ ಎಲ್ಲಾ ಕಡೆ ನಮ್ಮವರು ಸ್ಪರ್ಧಿಸುತ್ತಾರೆ ಎಂದರು.

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು. ಪದವಿಧರ ಕ್ಷೇತ್ರದ ಚುನಾವಣೆ ಸಂಬಂಧ ಶುಕ್ರವಾರ ಸಭೆ ನಡೆಸಲಾಗುವುದು. ಇನ್ನು ಹತ್ತು ತಿಂಗಳಲ್ಲಿ ಬಿಬಿಎಂಪಿ ಚುನಾವಣೆಯೂ ಎದುರಾಗಲಿದೆ. ಇದಕ್ಕಾಗಿ ಈಗಿನಿಂದಲೇ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದರು.

ಯಶವಂತಪುರ ಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿ ಜವರಾಯಿಗೌಡರು ಸ್ಪರ್ಧಿಸುತ್ತಾರೆ. ಆದರೆ ಕೆಲವು ಪಟ್ಟಭದ್ರಹಿತಾಸಕ್ತಿಗಳು ಅವರ ವ್ಯಕ್ತಿತ್ವಕ್ಕೆ ಕುಂದು ತರುವ ಕೆಲಸ ಮಾಡುತ್ತಿದ್ದು, ಅವರು ಬೇರೆ ಪಕ್ಷಕ್ಕೆ ಹೋಗಲಿದ್ದಾರೆ ಎಂಬ ಸುದ್ದಿ ಹರಿಬಿಡುತ್ತಿದ್ದಾರೆ. ಸುಪ್ರೀಂಕೋರ್ಟ್ ನಿಂದ ಯಾವ ತೀರ್ಪು ಬರುತ್ತದೆಯೋ ಗೊತ್ತಿಲ್ಲ. ಆದರೆ ಚುನಾವಣೆ ನಡೆದರೆ ಅವರೇ ಅಭ್ಯರ್ಥಿ ಎಂದರು.

ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ರಾಜ್ಯದ ಜನರಿಗಿಂತ ಪಕ್ಷವೇ ಮುಖ್ಯವಾಗಿದೆ. ಅವರ ಪಕ್ಷದ ವರಿಷ್ಠರ ಆದೇಶದ ಮೇರೆಗೆ ಅವರು
ಮಹಾರಾಷ್ಟ್ರದ ಚುನಾವಣಾ ಪ್ರಚಾರಕ್ಕೆ ಹೋಗಿದ್ದಾರೆ. ಅವರ ಉಸ್ತುವಾರಿ ಸಚಿವರಿಗೆ ಜವಾಬ್ದಾರಿ ಕೊಟ್ಟು ಹೋಗಿರಬಹುದು ಎಂದರು.

ತಮ್ಮ ವಿರುದ್ಧ ಐಟಿ ದಾಳಿ ನಡೆದರೆ ಅದಕ್ಕೆ ದೇವೇಗೌಡರೇ ಕಾರಣ ಎಂಬ ಕೆ.ಎನ್. ರಾಜಣ್ಣ ಅವರ ಆರೋಪ ಮಾಡಿರುವ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಮಾಜಿ ಪ್ರಧಾನಿಯಾಗಿ ಅವರ ವಿರುದ್ಧ ಅರ್ಜಿ ಬರೆದುಕೊಂಡು ಕೂರಲು ಸಾಧ್ಯವಿಲ್ಲ‌. ಆದರೆ
ನಾನು ಯಾರ ಬಗ್ಗೆಯೂ ಮಾತನಾಡುವುದಿಲ್ಲ ಎಂದರು.

ದೇಶದ ಆರ್ಥಿಕತೆ ಸುಧಾರಣೆ ಮಾಡಲು ಮಾಜಿ ಪ್ರಧಾನಿ ದಿವಂಗ ತ ನರಸಿಂಹ ರಾವ್, ಡಾ. ಮನಮೋಹನ್ ಸಿಂಗ್ ಕಾಲದಲ್ಲಿ ಏನೇನು ಮಾಡಿದ್ದಾರೆ ಎಂಬದು ತಮಗೆ ಗೊತ್ತಿದೆ. ಪ್ರಧಾನಿ ಮೋದಿ ಅವರಿಗೆ ಗೊತ್ತಿಲ್ಲ ಎಂದು ನಾನು ಹೇಳುವುದಿಲ್ಲ ಎಂದರು.

ಜಮ್ಮು - ಕಾಶ್ಮೀರಕ್ಕೆ ನೀಡಿದ್ದ ವಿಶೇಷಾಧಿಕಾರವನ್ನು ಮೋದಿ ಸರ್ಕಾರ ಹೇಗೆ ರದ್ದು ಮಾಡಿದೆ ಎನ್ನುವ ಬಗ್ಗೆ ಈಗ ಚರ್ಚೆ ಬೇಡ. ಮಾಜಿ ಪ್ರಧಾನಿ ವಾಜಪೇಯಿ ಅವರ ಕಾಲದಲ್ಲಿ ಸಮಿತಿಯೊಂದನ್ನು ರಚಿಸಲಾಗಿತ್ತು. ಜಮ್ಮು ಮತ್ತು ಕಾಶ್ಮೀರ ಸಂಬಂಧಿಸಿದಂತೆ ಎಷ್ಟು ಅಧಿಕಾರ ಬಿಟ್ಟುಕೊಡಬಹುದು ಎಂಬ ಕುರಿತು ತಮ್ಮ ಕಾಲದಲ್ಲೂ ಚರ್ಚೆಯಾಗಿತ್ತು ಎಂದರು.

ಕಾಂಗ್ರೆಸ್ ಕೆಲ ಅನರ್ಹ ಶಾಸಕರು ಮಾತೃಪಕ್ಷಕ್ಕೆ ವಾಪಸ್ ಆಗುವ ಕುರಿತು ಮಾತನಾಡಿದ ದೇವೇಗೌಡ, ಸಿದ್ದರಾಮಯ್ಯ ಅವರು ಅನರ್ಹರನ್ನು ವಾಪಸ್ ಕರೆದುಕೊಳ್ಳುವುದಿಲ್ಲ ಎಂದು ಹೇಳಿದ್ದು ನಿಜ, ಆ ಮೇಲೆ ಅವರ ಹೈಕಮಾಂಡ್ ಏನು ಹೇಳಿದೆಯೋ ಗೊತ್ತಿಲ್ಲ. ಆದರೆ ನಮ್ಮಲ್ಲಿ ನಾವೇ ಹೈಕಮಾಂಡ್. ಜೆಡಿಎಸ್ ನ ಮೂವರು ಅನರ್ಹ ಶಾಸಕರನ್ನು ಮತ್ತೆ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ದೇವೇಗೌಡರು ಸ್ಪಷ್ಟಪಡಿಸಿದರು.

SCROLL FOR NEXT