ರಾಜಕೀಯ

ಉಪ ಚುನಾವಣೆ ಗೆಲ್ಲಲು ಸಾಮೂಹಿಕ ನಾಯಕತ್ವಕ್ಕೆ ಸಿದ್ದರಾಮಯ್ಯ ಆದ್ಯತೆ 

Nagaraja AB

ಬೆಂಗಳೂರು: ಉಪಚುನಾವಣೆಯ ಜವಾಬ್ದಾರಿಯ ನೊಗ ಹೊತ್ತಿರುವ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ  ಹಾಗೂ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಎಐಸಿಸಿ ಸೂಚನೆ ಮೇರೆಗೆ ಸಾಮೂಹಿಕ ನಾಯಕತ್ವದ ಮೊರೆ ಹೋಗಲಿದ್ದಾರೆ

ವಿಪಕ್ಷ ನಾಯಕನ ಜವಾಬ್ದಾರಿ ಹೊರಿಸುವ ಮುನ್ನ ಹೈಕಮಾಂಡ್ ಉಪಚುನಾವಣೆಯಲ್ಲಿ ಗೆಲುವು ಸಾಧಿಸಬೇಕು. ಪಕ್ಷದ ಎಲ್ಲರನ್ನು ಒಗ್ಗೂಡಿಸಿ ಪಕ್ಷ ಸಂಘಟಿಸಬೇಕು ಎಂದು ವರಿಷ್ಠರು ಈಗಾಗಲೇ ಸಿದ್ದರಾಮಯ್ಯ ಅವರಿಗೆ ಖಡಕ್ ಸೂಚನೆ ನೀಡಿದ್ದಾರೆ. ಹೀಗಾಗಿ  ಸಾಮೂಹಿಕ ನಾಯಕತ್ವದ ಪ್ರಚಾರ ತಂತ್ರಕ್ಕೆ ಸಿದ್ದರಾಮಯ್ಯ ಮುಂದಾಗಿದ್ದಾರೆ

ಹೈಕಮಾಂಡ್​ ಸಲಹೆಯಂತೆ ಸಿದ್ದರಾಮಯ್ಯ ಕೂಡ ಚುನಾವಣೆ ಗೆಲುವಿಗೆ ಸಜ್ಜಾಗುತ್ತಿದ್ದಾರೆ. ಈ ಬಾರಿಯ ಉಪಚುನಾವಣೆಯಲ್ಲಿ ಕನಿಷ್ಟ 10 ಸ್ಥಾನಗಳಲ್ಲಿ ಕಾಂಗ್ರೆಸ್​ ಗೆಲುವು ಸಾಧಿಸದಿದ್ದರೆ, ಸಿದ್ದರಾಮಯ್ಯ ನಾಯಕತ್ವದ ಬಗ್ಗೆ ಕೂಡ ಅಪಸ್ವರ ಏಳುವ ಸಾಧ್ಯತೆ ಇದೆ. ಹೀಗಾಗಿ  ಒಂದು ಹೆಜ್ಜೆ ಮುಂದಿಟ್ಟಿರುವ ಸಿದ್ದರಾಮಯ್ಯ ಪಕ್ಷದ ಹಿರಿಯ ನಾಯಕರನ್ನು ಒಗ್ಗೂಡಿಸಲು ಮುಂದಾಗಿದ್ದಾರೆ. 

15 ವಿಧಾನಸಭಾ ಕ್ಷೇತ್ರಗಳಲ್ಲಿ ಕನಿಷ್ಠ 10  ಸ್ಥಾನಗಳಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆಗೆ ಅವರು ಸಿಲುಕಿದ್ದಾರೆ. ಗುರಿ ಸಾಧಿಸಲು ಪಕ್ಷದಲ್ಲಿ ಎಲ್ಲರನ್ನು  ಒಟ್ಟಿಗೆ ಕೊಂಡೊಯ್ಯಲು ಮುಂದಾಗಿರುವ ಸಿದ್ದರಾಮಯ್ಯ  ಮಹಾರಾಷ್ಟ್ರ , ಕೇರಳ ಪ್ರವಾಸದ ನಂತರ ಪಕ್ಷದ ಮುಖಂಡರ ಜತೆ ಸರಣಿ ಸಭೆಗಳನ್ನು ನಡಸಲಿದ್ದಾರೆ.
 
ಸಿದ್ದರಾಮಯ್ಯ ಚುನಾವಣಾ ಪ್ರವಾಸದಿಂದ ವಾಪಸಾದ ಬಳಿಕ ಪಕ್ಷದ ಹಿರಿಯರು  ಹಾಗೂ ಅಸಮಾಧಾನಗೊಂಡಿರುವವರ ಮನೆಗಳಿಗೆ ಭೇಟಿ ನೀಡಲಿದ್ದಾರೆ. ಎಲ್ಲರ ಜೊತೆ ಚರ್ಚಿಸಿ ಪಕ್ಷ ಸಂಘಟನೆ, ಚುನಾವಣೆ ಎದುರಿಸಲು ಸಹಕಾರ ನೀಡುವಂತೆ ಮನವೊಲಿಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಅಕ್ಟೋಬರ್ 20 ರ ಬಳಿಕ ಮಲ್ಲಿಕಾರ್ಜುನ ಖರ್ಗೆ, ಕೆ.ಹೆಚ್.ಮುನಿಯಪ್ಪ, ಪರಮೇಶ್ವರ್,ಬಿ.ಕೆ.ಹರಿಪ್ರಸಾದ್,ಹೆಚ್.ಕೆ.ಪಾಟೀಲ್,
ವೀರಪ್ಪ ಮೊಯ್ಲಿ ಒಳಗೊಂಡಂತೆ ಎಲ್ಲರನ್ನು ಸಿದ್ದರಾಮಯ್ಯ ಭೇಟಿ ಮಾಡಲಿದ್ದಾರೆ.

ಪಕ್ಷದಲ್ಲಿ ಸಿದ್ದರಾಮಯ್ಯ ವಲಸಿಗ ಕಾಂಗ್ರೆಸ್ಸಿಗರು ಎಂಬ ಮನೋಭಾವವಿದೆ. ಹಿರಿಯ ಕಾಂಗ್ರೆಸ್​ ನಾಯಕರು ಸಿದ್ದರಾಮಯ್ಯ ವಿರುದ್ಧ ಅಸಮಾಧಾನಗೊಂಡಿರುವುದು ಬಹಿರಂಗವಾಗಿದೆ. ಈ ಮುನಿಸು ಹೀಗೆ ಮುಂದುವರೆದರೆ, ಅವರ ನಾಯಕತ್ವ ಹಾಗೂ ಪಕ್ಷ ಎರಡಕ್ಕೂ ತೊಂದರೆಯಾಗಲಿದ್ದು, ಇದು ಉಪಚುನಾವಣೆ ಮೇಲೆ ಪರಿಣಾಮ ಬೀರುವುದು ಸುಳ್ಳಲ್ಲ. 

ಇತ್ತೀಚೆಗೆ ಸಿದ್ದರಾಮಯ್ಯ ಕಾಂಗ್ರೆಸ್​ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿದ  ವೇಳೆ ಕೂಡ ಈ ವಿಷಯ ಪ್ರಸ್ತಾಪವಾಗಿದ್ದು, ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸುವಂತೆ ಸೋನಿಯಾಗಾಂಧಿ ಸಲಹೆ ನೀಡಿದ್ದರು

SCROLL FOR NEXT