ರಾಜಕೀಯ

ಫೆಬ್ರವರಿ ಒಳಗಾಗಿ ಸರ್ಕಾರ ಉರುಳಲಿದೆ: ಮಾಜಿ ಸಿಎಂ ಸಿದ್ದರಾಮಯ್ಯ

Manjula VN

ಯಡಿಯೂರಪ್ಪ ಮೋದಿ ಮತ್ತು ಅಮಿತ್ ಶಾಗೆ ಬೇಡವಾದ ಮಗುವಾಗಿದ್ದಾರೆ: ವಿಪಕ್ಷ ನಾಯಕ
 

ಮಂಗಳೂರು: ನೆರೆ ಪೀಡಿತ ಜನರಿಗೆ ನೆರವಾಗುವಲ್ಲಿ ಬಿಜೆಪಿ ಸರ್ಕಾರ ವಿಫಲವಾಗಿದ್ದು, ಫೆಬ್ರವರಿ ಒಳಗಾಗಿ ಸರ್ಕಾರ ಉರುಳಿ ಬೀಳಲಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಹೇಳಿದ್ದಾರೆ. 

ಮಂಗಳೂರಿನಲ್ಲಿ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿರುವ ಅವರು, ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ತೀವ್ರವಾಗಿ ಕಿಡಿಕಾರಿದ್ದಾರೆ.  

ರಾಜ್ಯಕ್ಕೆ ಬಿಜೆಪಿ ವತಿಯಿಂದ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡುವುದು ಕೇಂದ್ರೀಯ ಬಿಜೆಪಿ ನಾಯಕತ್ವಕ್ಕೆ ಅನಿವಾರ್ಯವಾಗಿತ್ತು. ರಾಜ್ಯದ ಜನರ ಸಂಕಷ್ಟಕ್ಕೆ ನೆರವಾಗುವಲ್ಲ ಯಡಿಯೂರಪ್ಪ, ಮೋದಿ ವಿಫಲರಾಗಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬಂದು 3 ತಿಂಗಳಾಗಿವೆ. ಆದರೂ ನೆರೆ ಪೀಡಿತ ಜನರಿಗೆ ಸೂಕ್ತ ರೀತಿಯ ನೆರವು ನೀಡುತ್ತಿಲ್ಲ. ಪ್ರವಾಹ ಪೀಡಿತ ಜನರ ಸಂಕಷ್ಟ ಪರಿಹರಿಸುವುದರಲ್ಲಿ ಸರ್ಕಾರ ವಿಫಲವಾಗಿದೆ. ಪ್ರಸ್ತುತ ಆಡಳಿತ ನಡೆಸುತ್ತಿರುವ ಸರ್ಕಾರ ಹೆಚ್ಚು ಕಾಲ ಆಡಳಿತ ನಡೆಸಲು ಸಾಧ್ಯವಿಲ್ಲ. ಜನವರಿ ಅಥವಾ ಫೆಬ್ರವರಿ ತಿಂಗಳಿನಲ್ಲಿ ಸರ್ಕಾರ ಉರುಳಿ ಬೀಳಲಿದೆ. ಬಳಿಕ ರಾಜ್ಯದಲ್ಲಿ ಮತ್ತೆ ಚುನಾವಣೆ ಎದುರಾಗಲಿದೆ. ಯಡಿಯೂರಪ್ಪ ಪ್ರಧಾನಿ ಮೋದಿ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರಿಗೆ ಬೇಡವಾದ ಮಗುವಾಗಿದ್ದಾರೆ ಎಂದು ಹೇಳಿದ್ದಾರೆ. 

ನಮ್ಮ ಸರ್ಕಾರ ಜನ ಪರವಾಗಿ ಮಾಡಿದ್ದ ಕಾರ್ಯಕ್ರಮಗಳನ್ನು ಜನರು ನೆನೆಯುತ್ತಾರೆ. ಬಿಜೆಪಿ ಜನ ಪರ ಸರ್ಕಾರವಲ್ಲ ಎಂಬುದನ್ನು ಮನವರಿಕೆ ಮಾಡಿಕೊಳ್ಳುತ್ತಾರೆ ಎಂದು ತಿಳಿಸಿದ್ದಾರೆ. 

ಇದೇ ವೇಳೆ ಜಾಗತಿಕ ಹಸಿವು ಸೂಚ್ಯಂಕದಲ್ಲಿ ಭಾರತ 119 ರಾಷ್ಟ್ರಗಳ ಪೈಕಿ 102ನೇ ಸ್ಥಾನದಲ್ಲಿದೆ. ಈ ವರದಿ ಕುರಿತು ಮೋದಿ ವಿರುದ್ಧ ತೀವ್ರವಾಗಿ ಕಿಡಿಕಾರಿದ ಸಿದ್ದರಾಮಯ್ಯ ಅವರು, ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಘೋಷಣೆ ಏನೆಂಬುದು ಈ ವರದಿಯಿಂದಲೇ ತಿಳಿಯುತ್ತದೆ. ಪಾಕಿಸ್ತಾನ, ಬಾಂಗ್ಲಾದೇಶ, ನೇಪಾಳ ಹಾಗೂ ಇತರೆ ದೇಶಗಳಿಗಿಂತಲೂ ಭಾರತ ಕೆಳಗಿನ ಸ್ಥಾನ ಪಡೆದುಕೊಂಡಿದೆ. ಮೋದಿ ಪ್ರಧಾನಮಂತ್ರಿಯಾದ ಬಳಿಕ ದೇಶದಲ್ಲಿ ಹಸಿವಿನ ಸಂಖ್ಯೆ ಹೆಚ್ಚಾಗಿದೆ. ಇದು ಸಬ್ ಕಾ ಸಾಥ್ ಅಥವಾ ವಿಕಾಸ್ ಅಲ್ಲ. ಇದು ಸಬ್ ಕಾ ವಿನಾಶ್ ಎಂದಿದ್ದಾರೆ. 

SCROLL FOR NEXT