ರಾಜಕೀಯ

ಸ್ವಾತಂತ್ರ್ಯಕ್ಕಾಗಿ ಸಿದ್ದರಾಮಯ್ಯ ಅವರ ಕುಟುಂಬದವರು ಯಾರೂ ಸತ್ತಿಲ್ಲ: ಸಾವರ್ಕರ್ ವಿವಾದ ಕುರಿತು ವಿಶ್ವನಾಥ್ ತಿರುಗೇಟು

Srinivasamurthy VN

ವಿಜಯಪುರ: ಪ್ರಗತಿಪರರಾದ ತಾವು ದೇವರಿಗೆ ಕೈ ಮುಗಿಯ ಬಾರದೇ(?) ದೇವರಿಗೆ ಕೈ ಮುಗಿಯುವುದು, ಹೋಮ-ಹವನ ಮಾಡುವುದು ಬೇಡ ಎಂದು ಹೇಳಿದೆ. ಶ್ರದ್ಧಾ ಭಕ್ತಿಯಿಂದ ದೇವರಿಗೆ ನಡೆದುಕೊಳ್ಳುವುದು ನಮ್ಮಲ್ಲಿ ಪರಂಪರೆಗಳಿಂದ ನಡೆದು ಬಂದಿರುವ ಪದ್ಧತಿ ಎಂದು ಅನರ್ಹ ಶಾಸಕ ಎಚ್.ವಿಶ್ವನಾಥ್ ತಿಳಿಸಿದ್ದಾರೆ.
  
ತಿಕೋಟಾದಲ್ಲಿ ಸ್ನೇಹಿತರ ಆಹ್ವಾನದ ಮೇರೆಗೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ಬಳಿಕ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಿಕೋಟಾದಿಂದ ಬೆಳಗಾವಿಗೆ ತೆರಳಿ ಅಲ್ಲಿಂದ ದೆಹಲಿಗೆ ತೆರಳುತ್ತಿದ್ದೇನೆ. ನಾಳೆ ಸುಪ್ರೀಂ ಕೋರ್ಟಿನಲ್ಲಿ ನಮ್ಮ ಪರ ತೀರ್ಪು ಬರುವ ನಂಬಿಕೆ ,ವಿಶ್ವಾಸವಿದೆ. ಏಕೆಂದರೆ ಅಂದಿನ ಸ್ಪೀಕರ್ ರಮೇಶ್ ಕುಮಾರ್​ ಅವರು ಕಾನೂನು ಬಾಹಿರ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟಿಗೆ ಮೊರೆ ಹೋಗಿದ್ದೇವೆ. ಕೋರ್ಟ್​ ನಮ್ಮ ವಾದವನ್ನು ಎತ್ತಿ ಹಿಡಿಯುವ ವಿಶ್ವಾಸವಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
  
ವೀರ ಸಾವರ್ಕರ್ ಕುರಿತು ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಟೀಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು,ಸಾವರ್ಕರ್​ಗೆ ಭಾರತ ರತ್ನ ನೀಡುವ ಬಗ್ಗೆ ವಿವಾದ ಎದ್ದಿರುವುದು ವಿಷಾದಕರ. ಸಾವರ್ಕರ್​ ಮತ್ತು ಅವರ ಕುಟುಂಬದವರು ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಬಲಿದಾನ ಮಾಡಿದವರ ಪಟ್ಟಿಯಲ್ಲಿದ್ದಾರೆ. ನಾನು,ನನ್ನ ಕುಟುಂಬ, ಸಿದ್ಧರಾಮಯ್ಯ ಮತ್ತು ಅವರ ಕುಟುಂಬದವರಾರೂ ಸ್ವಾತಂತ್ರ್ಯಕ್ಕಾಗಿ ಸತ್ತಿಲ್ಲ. ನಮ್ಮ ಆಸ್ತಿಯೂ ಹೋಗಿಲ್ಲ, ವೀರ ಸಾವರ್ಕರ್ ಅವರಂಥ ನಾಯಕರು ಹೋರಾಟ ನಡೆಸಿದ್ದರಿಂದ ಅದರ ಫಲವನ್ನು ನಾವು ಉಣ್ಣುತ್ತಿದ್ದೇವೆ ಎಂದು ಅವರು ತಿರುಗೇಟು ನೀಡಿದರು.
  
ಮೈಸೂರಿನಲ್ಲಿ ಸಿದ್ದರಾಮಯ್ಯ ತಮ್ಮ ಬಗ್ಗೆ ನೀಡಿರುವ ಹೇಳಿಕೆ ಬಗ್ಗೆ ಉತ್ತರಿಸಿದ ಅವರು, ಸಿದ್ಧರಾಮಯ್ಯ ಮಾಜಿ ಮುಖ್ಯಮಂತ್ರಿಗಳು,ದೊಡ್ಡವರು, ಸತ್ಯವಂತರು, ರಾಷ್ಟ್ರ ನಾಯಕರು, ಸ್ವಾತಂತ್ರ್ಯ ಪ್ರೇಮಿಗಳು ಅವರ ಬಗ್ಗೆ ಮೈಸೂರಿನಲ್ಲಿ ಉತ್ತರ ಕೊಡುತ್ತೇನೆ ಎಂದರು.

SCROLL FOR NEXT