ರಾಜಕೀಯ

ನೀತಿ ಸಂಹಿತೆ ಉಲ್ಲಂಘನೆ: ರಾಜ್ಯ ಸರ್ಕಾರದ ವಿರುದ್ಧ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ದೂರು

Lingaraj Badiger

ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರ ನೀತಿ ಸಂಹಿತೆ ಉಲ್ಲಂಘಿಸಿದೆ ಎಂದು ಆರೋಪಿಸಿ ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ ಮಂಗಳವಾರ ದೂರು ನೀಡಿದೆ.

ಉಪ ಚುನಾವಣೆಗೆ ದಿನಾಂಕ ನಿಗದಿಯಾಗಿದ್ದರೂ ಸರ್ಕಾರ ಕಾಮಗಾರಿಗಳಿಗೆ ಅನುಮತಿ ನೀಡಿದ್ದನ್ನು ವಿರೋಧಿಸಿ ಮಾಜಿ ಸಂಸದ ವಿ.ಎಸ್.ಉಗ್ರಪ್ಪ ನೇತೃತ್ವದಲ್ಲಿ ಪರಿಷತ್ ಸದಸ್ಯರಾದ ಹೆಚ್.ಎಂ.ರೇವಣ್ಣ, ಪ್ರಕಾಶ್ ರಾಥೋಡ್, ವೇಣುಗೋಪಾಲ್ ಚುನಾವಣಾಧಿಕಾರಿಗೆ ದೂರು ಸಲ್ಲಿಸಿದರು.

ದೂರು ಸಲ್ಲಿಕೆ ಬಳಿಕ ವಿ.ಎಸ್.ಉಗ್ರಪ್ಪ ಮಾತನಾಡಿ, ಡಿಸೆಂಬರ್ 5ರಂದು 15 ಕ್ಷೇತ್ರಗಳ ಉಪಚುನಾವಣೆ ನಿಗದಿಯಾಗಿದೆ. ಕಳೆದ‌ ತಿಂಗಳ 27 ರಂದು ಚುನಾವಣಾ ಆಯೋಗ ನೀತಿ ಸಂಹಿತಿ ಆದೇಶ ವಾಪಸ್ ಪಡೆದಿದೆ. ಆ ಮೂಲಕ  ಮತದಾರರ ಓಲೈಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ.

ಹೀಗಾಗಿ ರಾಜ್ಯ ಚುನಾವಣಾಧಿಕಾರಿ ಮೂಲಕ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದು, ಮತದಾರರ ಓಲೈಸಲು ಉಪಚುನಾವಣೆ ನಡೆಯುವ ಕ್ಷೇತ್ರಗಳ ಪ್ರಮುಖ ನಾಯಕರನ್ನು ಬೋರ್ಡ್ ನಿಗಮ ಮಂಡಳಿಗಳಿಗೆ ನೇಮಕ ಮಾಡುವುದು, ಅನರ್ಹ ಶಾಸಕರ ಕ್ಷೇತ್ರಗಳಿಗೆ ಹೆಚ್ಚಿನ ವಿಶೇಷ ಅನುದಾನ ನೀಡಲಾತ್ತಿದೆ. ಅನರ್ಹ ಶಾಸಕರಿಗೆ 4 ಜಿ ಎಕ್ಸೆಂಪ್ಷನ್ ನೀಡಿದೆ ಎಂದು ಆರೋಪಿಸಿದರು.

ಟೆಂಡರ್ ಕರೆಯದೇ ಶಾಸಕರು ಹೇಳಿದವರಿಗೆ ಕಾಮಗಾರಿಗಳನ್ನು ನೀಡಲಾಗುತ್ತಿದೆ. ಇದು ಬಿಜೆಪಿಯ ಅಭ್ಯರ್ಥಿಗಳಿಗೆ ಉಪಯೋಗವಾಗುತ್ತಿದೆ.  ಮತದಾರರನ್ನು ಓಲೈಸಲು ರಾಜ್ಯ ಸರ್ಕಾರ ಈ ರೀತಿ ಮಾಡುತ್ತಿದೆ.ಇದು ಜನತಾ ಪ್ರಾತಿನಿಧ್ಯ ಕಾಯ್ದೆ 1951 ಸೆಕ್ಷನ್ 123 ಹಾಗೂ ಪೀನಲ್ ಕೋಡ್ 171 ಪ್ರಕಾರ ಅಪರಾಧ. ಹೀಗಾಗಿ ಚುನಾವಣಾ ಆಯೋಗ ಸರ್ಕಾರದ ವಿರುದ್ಧ ಕ್ರಮ ಜರುಗಿಸಬೇಕು ಹಾಗೂ ನೀತಿ ಸಂಹಿತೆ ತಕ್ಷಣ ಜಾರಿಗೆ ತರಬೇಕು ಎಂದು ಉಗ್ರಪ್ಪ ಒತ್ತಾಯಿಸಿದರು.

ಬೋರ್ಡ್ ಕಾರ್ಪೊರೇಷನ್ ಅಧ್ಯಕ್ಷರ ನೇಮಕಾತಿ ರದ್ದುಪಡಿಸಬೇಕು, ಜಾರಿಯಾಗಿರುವ  ಕಾಮಗಾರಿಗಳನ್ನು ತಡೆಯಬೇಕು. ಇದರಲ್ಲಿ ಭಾಗಿಯಾಗಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಚುನಾವಣಾ ಆಯೋಗಕ್ಕೆ ಮನವಿ ಮಾಡಲಾಗಿದೆ. ಚುನಾವಣಾಧಿಕಾರಿಗಳು ಕ್ರಮ ಜರುಗಿಸುವ ಭರವಸೆಯನ್ನು ನೀಡಿದ್ದಾರೆ. ಬಿಜೆಪಿ ಕಾರ್ಯಕ್ರಮಗಳ ಮೂಲಕ, ತನ್ನ ಸಿದ್ಧಾಂತಗಳ ಮೂಲಕ  ಚುನಾವಣೆ ಗೆಲ್ಲಲು ಹೊರಟಿಲ್ಲ. ಮತದಾರರ ಓಲೈಸಿ ಚುನಾವಣೆ ಗೆಲ್ಲಲು ಹೊರಟಿದೆ ಎಂದು  ಉಗ್ರಪ್ಪ ಕಿಡಿಕಾರಿದರು.

SCROLL FOR NEXT