ರಾಜಕೀಯ

ಸಾವರ್ಕರ್ ಕುರಿತು ಹೇಳಿಕೆ: ಸಿದ್ದರಾಮಯ್ಯ ವಿರುದ್ಧ ಕೆಂಡ ಕಾರುತ್ತಿರುವ ಬಿಜೆಪಿ ನಾಯಕರು

Manjula VN

ಮೈಸೂರು: ವಿನಾಯಕ ದಾಮೋದರ ಸಾವರ್ಕರ್ ಕುರಿತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿದ್ದ ಹೇಳಿಕೆಗೆ ಬಿಜೆಪಿ ನಾಯಕರು ತೀವ್ರವಾಗಿ ಕಿಡಿಕಾರಿದ್ದಾರೆ. 
 
ಸಿದ್ದರಾಮಯ್ಯ ಅವರ ಹೇಳಿಕೆ ಕುರಿತಂತೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಂಸದೆ ಶೋಭಾ ಕರಂದ್ಲಾಜೆ, ಆರೋಗ್ಯ ಸಚಿವ ಶ್ರೀರಾಮುಲು ಅವರು ಕಿಡಿಕಾರಿದ್ದಾರೆ. 
 
ಯಡಿಯೂರಪ್ಪ ಅವರನ್ನು ಜನಪರ ನಾಯಕ ಎಂದು ಶ್ಲಾಘಿಸಿರುವ ಕಟೀಲ್ ಅವರು, ಈ ಮೂಲಕ ಭಿನ್ನಾಭಿಪ್ರಾಯಗಳ ಕುರಿತ ವದಂತಿಗಳನ್ನು ದೂರ ಸರಿಸುವ ಪ್ರಯತ್ನ ಮಾಡಿದ್ದಾರೆ. ಸಿದ್ದರಾಮಯ್ಯ ಅವರಿಗಿಂತಲೂ ಯಡಿಯೂರಪ್ಪ ಶ್ರೇಷ್ಠ ನಾಯಕರೆಂದು ಹೇಳಿದ್ದಾರೆ. 
 
ಉಡುಪಿಯಲ್ಲಿ ಮಾತನಾಡಿರುವ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆಯವರು, ಸಾವರ್ಕರ್ ಕುರಿತ ಅತಿರೇಕದ ಹೇಳಿಕೆಗೆ ಸಿದ್ದರಾಮಯ್ಯ ಅವರು ಕೂಡಲೇ ದೇಶದ ಮುಂದೆ ಕ್ಷಮೆಯಾಚಿಸಬೇಕು. ಸಿದ್ದರಾಮಯ್ಯ ಅವರ ಕೀಳುಮಟ್ಟದ ರಾಜಕೀಯ ಸಲ್ಲದು. ಪ್ರತೀ ಹಂತದಲ್ಲಿಯೂ ಮತಬ್ಯಾಂಕ್ ನೋಡುತ್ತಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರನಿಗೆ ಅವಮಾನ ಮಾಡಿದ್ದಾರೆ. ಕೂಡಲೇ ಕ್ಷಣೆಯಾಚಿಸಬೇಕೆಂದು ಆಗ್ರಹಿಸಿದ್ದಾರೆ. 

ಮೈತ್ರಿ ಸರ್ಕಾರ ಮುರಿದುಬಿದ್ದ ಬಳಿಕ ಸಿದ್ದರಾಮಯ್ಯ ಅವರು ಪ್ರತೀ ಬಾರಿ ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅಧಿಕಾರ ಕಳೆದುಕೊಂಡರೂ ಸಿದ್ದರಾಮಯ್ಯ ಅವರು ಪಾಠ ಕಲಿತಿಲ್ಲ ಎಂದು ಸಚಿವ ಬಿ.ಶ್ರೀರಾಮುಲು ಅವರು ಹೇಳಿದ್ದಾರೆ. 

ಕೆಲ ದಿನಗಳ ಹಿಂದಷ್ಟೇ ಹೇಳಿಕೆ ನೀಡಿದ್ದ ಸಿದ್ದರಾಮಯ್ಯ ಅವರು, ಸಾವರ್ಕರ್ ಗಾಂಧೀಜಿ ಹತ್ಯೆಗೆ ಸಂಚು ರೂಪಿಸಿದ್ದವರಲ್ಲಿ ಒಬ್ಬರಾಗಿದ್ದಾರೆ. ಗೋಡ್ಸೆಯ ಹಿಂದೆ ನಿಂತು ಹತ್ಯೆಗೆ ಸಂಚು ರೂಪಿಸಿದ ಆರೋಪಿವಿದೆ. ಆದರೆ, ಸೂಕ್ತ ಸಾಕ್ಷ್ಯಾಧಾರಗಳಿಲ್ಲದೆ ಆರೋಪಿಯಾಗಿ ಗುರುತಿಸಲಾಗಲಿಲ್ಲ. ಇಂತಹ ವ್ಯಕ್ತಿಗೆ ಭಾರತ ರತ್ನ ಕೊಡಲು ಬಿಜೆಪಿ ಸರ್ಕಾರ ಮುಂದಾಗಿದೆ ಎಂದು ವಾಗ್ದಾಳಿ ನಡೆಸಿದ್ದರು. 

SCROLL FOR NEXT