ಬೆಂಗಳೂರು: ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕೇಳಿದ್ದ ಸರ್ಕಾರಿ ಬಂಗಲೆಯನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕೊನೆಗೂ ಹಂಚಿಕೆ ಮಾಡಿದ್ದು, ಈವರೆಗೂ ವಾಸವಿದ್ದ ಕಾವೇರಿ ತೊರೆಯಲು ನಿರ್ಧರಿಸಿದ್ದಾರೆ.
ಕಾವೇರಿ ಬಂಗಲೆ ಖಾಲಿ ಮಾಡಲು ಸಜ್ಜಾದ ಸಿದ್ದರಾಮಯ್ಯ, ರೇಸ್ ವ್ಯೂ ಕಾಟೇಜ್ ಬದಲು ಬೇರೆ ಮನೆ ನೀಡುವಂತೆ ಮುಖ್ಯಮಂತ್ರಿಗೆ ಪತ್ರ ಬರೆದಿದ್ದರು. ಅದರಂತೆ ಹೆಚ್.ಡಿ.ರೇವಣ್ಣ ಇದ್ದ ಕುಮಾರಕೃಪ ಪೂರ್ವ ಸಂಖ್ಯೆ 1 ರ ನಿವಾಸವನ್ನು ಸರ್ಕಾರ ಸಿದ್ದರಾಮಯ್ಯರಿಗೆ ನೂತನವಾಗಿ ಹಂಚಿಕೆ ಮಾಡಿದೆ.
ಈ ನಿವಾಸವನ್ನು ರೇವಣ್ಣ ವಾಸ್ತು ಪ್ರಕಾರವಾಗಿ ಸಂಪೂರ್ಣ ನವೀಕಣ ಮಾಡಿದ್ದರು. 2013 ರಿಂದಲೂ ಸುಮಾರು ಆರು ವರ್ಷಗಳ ಕಾಲ ಸಿದ್ದರಾಮಯ್ಯ ಕಾವೇರಿ ಬಂಗಲೆಯಲ್ಲಿಯೇ ವಾಸವಾಗಿದ್ದರು. ಯಡಿಯೂರಪ್ಪಗೆ ಕಾವೇರಿ ನಿವಾಸ ಹಂಚಿಕೆಯಾದಾಗಲೂ ಸಿದ್ದರಾಮಯ್ಯ ತಮ್ಮ ನೆಚ್ಚಿನ ಮನೆಯನ್ನು ಬಿಟ್ಟುಕೊಡಲು ಮನಸು ಮಾಡಿರಲಿಲ್ಲ.