ರಾಜಕೀಯ

ಬಿ ಎಸ್ ವೈ ಇಲ್ಲದ ಬಿಜೆಪಿಯನ್ನೂ ಯಾರೂ ಮೂಸುವುದಿಲ್ಲ: ಕೆಜೆಪಿ ರಾಜ್ಯಾಧ್ಯಕ್ಷ ಪದ್ಮನಾಭ ಪ್ರಸನ್ನ ಎಚ್ಚರಿಕೆ

Sumana Upadhyaya

ಹಾವೇರಿ: ಬಿಜೆಪಿ ದೆಹಲಿ ವರಿಷ್ಠ  ನಾಯಕರು ವಿಧಾನಸಭೆಯಲ್ಲಿ  ಕುಳಿತು “ಅಶ್ಲೀಲ ಚಿತ್ರ”  ವೀಕ್ಷಿಸಿದ್ದ  ವ್ಯಕ್ತಿಯೊಬ್ಬರನ್ನು ಉಪಮುಖ್ಯಮಂತ್ರಿಯನ್ನಾಗಿಸುವ ಮೂಲಕ ರಾಜ್ಯದ  ಜನತೆಗೆ  ಅಪಮಾನ ಎಸೆಗಿದ್ದಾರೆ ಎಂದು  ಕೆಜೆಪಿ ರಾಜ್ಯಾಧ್ಯಕ್ಷ ಪದ್ಮನಾಭ ಪ್ರಸನ್ನ  ಮಂಗಳವಾರ  ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಇಲ್ಲಿ ಸುದ್ದಿಗಾರರೊಂದಿಗೆ  ಮಾತನಾಡಿದ  ಅವರು,  ಚುನಾವಣೆಯಲ್ಲಿ ಪರಾಭವಗೊಂಡಿರುವ  ಮುಖಂಡನನ್ನು  ಉಪ ಮುಖ್ಯಮಂತ್ರಿಯನ್ನಾಗಿ ನೇಮಿಸುವ ಮೂಲಕ   ರಾಜ್ಯ ರಾಜಕಾರಣದಲ್ಲಿ ಬಿಜೆಪಿ ಹೈಕಮಾಂಡ್   ಹೊಸ ಚರಿತ್ರೆ ಸೃಷ್ಟಿಸಿದೆ ಎಂದು ವ್ಯಂಗ್ಯವಾಡಿದರು.


ಯಡಿಯೂರಪ್ಪ ಅವರನ್ನು  ಕಡೆಗಣಿಸಲು, ಅವರಿಗೆ ರಾಜ್ಯದಲ್ಲಿ ಪರ್ಯಾಯ ನಾಯಕನನ್ನು ರೂಪಿಸಲು  ಲಕ್ಷ್ಮಣ ಸವದಿ ಅವರನ್ನು   ಉಪಮುಖ್ಯಮಂತ್ರಿಯನ್ನಾಗಿಸಲಾಗಿದೆ.  ಯಡಿಯೂರಪ್ಪ  ಅವರಿಂದಾಗಿಯೇ  ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ ಎಂಬುದನ್ನು ಬಿಜೆಪಿ ಯಾವುದೇ ಕಾರಣಕ್ಕೂ ಮರೆಯಬಾರದು ಎಂದು ಎಚ್ಚರಿಕೆ ನೀಡಿದರು.


ಲಕ್ಷ್ಮಣ ಸವದಿ   ಏನು ಸಾಧನೆ ಮಾಡಿದ್ದಾರೆ ಎಂದು   ಬಿಜೆಪಿ  ವರಿಷ್ಠರು   ಅವರಿಗೆ  ಡಿಸಿಎಂ ಪಟ್ಟ ನೀಡಿದ್ದಾರೆ  ಎಂದು  ಪದ್ಮನಾಭ ಪ್ರಸನ್ನ  ಪ್ರಶ್ನಿಸಿದ್ದಾರೆ.


ಯಡಿಯೂರಪ್ಪ  ಅವರ ಶ್ರಮ,  ವರ್ಚಸ್ಸು, ಅವರ ಬೆನ್ನಿಗೆ ನಿಂತ ಸಮಾಜದಿಂದಾಗಿ  ಬಿಜೆಪಿಗೆ  ಕರ್ನಾಟಕದಲ್ಲಿ  ಅಧಿಕಾರ ಸಿಕ್ಕಿದೆ. ಯಡಿಯೂರಪ್ಪ ಅವರನ್ನು  ಕಡೆಗಣಿಸಿದರೆ  ಭವಿಷ್ಯದಲ್ಲಿ  ಬಿಜೆಪಿ ಭಾರಿ ಬೆಲೆ ತೆರಬೇಕಾಗುತ್ತದೆ.   ಯಡಿಯೂರಪ್ಪ  ಇಲ್ಲದ  ಬಿಜೆಪಿಯನ್ನು ನಾಯಿಯೂ  ಮೂಸುವುದಿಲ್ಲ  ಎಂದರು.  


ಯಡಿಯೂರಪ್ಪ ಅವರನ್ನು ನಿರ್ಲಕ್ಷಿಸುವ ಕೆಲಸ  ಈಗೆಯೇ  ಮುಂದುವರಿದರೆ   ರಾಜ್ಯಾದ್ಯಂತ ಹೋರಾಟದ ನೇತೃತ್ವ ವಹಿಸುವುದಾಗಿ  ಪ್ರಸನ್ನ ಎಚ್ಚರಿಕೆ ನೀಡಿದ್ದಾರೆ.

ರಾಜ್ಯದಲ್ಲಿ ಭೀಕರ ಪ್ರವಾಹದಿಂದಾಗಿ ಜನರ ಬದುಕು ಸರ್ವನಾಶವಾಗಿದೆ. ಪ್ರಧಾನಿ ನರೇಂದ್ರ ಮೋದಿ ಒಮ್ಮೆಯೂ  ರಾಜ್ಯಕ್ಕೆ ಬರಲಿಲ್ಲ” ಎಂದು ಪ್ರಸನ್ನ ಕುಮಾರ್ ಟೀಕಿಸಿದರು.


ರಾಜ್ಯ ವಿಧಾನಸಭೆಗೆ   ಮಧ್ಯಂತರ ಚುನಾವಣೆ  ಎದುರಾಗುವ ಸಾಧ್ಯತೆ ಇದೆ. ಕೆಜೆಪಿ ಪಕ್ಷ ಮಧ್ಯಂತರ ಚುನಾವಣೆಗೂ ಸಿದ್ಧವಾಗಿದೆ. ಪಕ್ಷ ಚುನಾವಣೆಗೆ ಸ್ಪರ್ಧಿಸಲಿದೆ ಎಂದು ಪದ್ಮನಾಭ ಪ್ರಸನ್ನ ಹೇಳಿದರು.

SCROLL FOR NEXT