ರಾಜಕೀಯ

ಡಿಕೆಶಿ ಬಂಧನಕ್ಕೆ ರಾಹುಲ್ ಗಾಂಧಿ ಖಂಡನೆ, ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ

Lingaraj Badiger

ನವದೆಹಲಿ: ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಕ್ಷದ ಹಿರಿಯ ಮುಖಂಡ ಡಿ.ಕೆ.ಶಿವಕುಮಾರ್ ಅವರ ಬಂಧನವನ್ನು ಖಂಡಿಸಿರುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರು, ಈ ಸಂಬಂಧ ನರೇಂದ್ರ ಮೋದಿ ಸರ್ಕಾರ ವಿರುದ್ಧ ಬುಧವಾರ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಶಿವಕುಮಾರ್ ಅವರ ಬಂಧನವು ಕೇಂದ್ರ ಸರ್ಕಾರವು ಸೇಡಿನ ರಾಜಕೀಯಕ್ಕೆ ಮತ್ತೊಂದು ಉದಾಹರಣೆಯಾಗಿದೆ ಎಂದು ರಾಹುಲ್ ಗಾಂಧಿ ಟೀಕಿಸಿದ್ದಾರೆ.

ಕೇಂದ್ರ ಸರ್ಕಾರ ಕೆಲ ವ್ಯಕ್ತಿಗಳನ್ನು ಗುರಿಯಾಗಿಸಲು ಇಡಿ / ಸಿಬಿಐನಂತಹ ಏಜೆನ್ಸಿಗಳನ್ನು ಉದ್ದೇಶಪೂರ್ವಕವಾಗಿ ಬಳಸುತ್ತಿದೆ ಎಂದು ಅವರು ರಾಹುಲ್ ಟ್ವೀಟ್ ಮಾಡಿದ್ದಾರೆ.

ಕರ್ನಾಟಕ ಸರ್ಕಾರದ ಮಾಜಿ ಸಚಿವರಾಗಿದ್ದ ಶಿವಕುಮಾರ್ ಅವರನ್ನು ನಾಲ್ಕು ದಿನಗಳ ಕಾಲ ವಿಚಾರಣೆ ನಡೆಸಿದ ನಂತರ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಮಂಗಳವಾರ ರಾತ್ರಿ ಬಂಧಿಸಿತ್ತು.

ಕರ್ನಾಟಕದ ಮಾಜಿ ಸಚಿವ ಡಿ ಕೆ ಶಿವಕುಮಾರ್ ಸೇರದಂತೆ ಪಕ್ಷದ ನಾಯಕರನ್ನು ಬಂಧಿಸುತ್ತಿರುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಪ್ರತಿಪಕ್ಷ ಕಾಂಗ್ರೆಸ್, ಕೆಲ ಸಮಯದ ಹಿಂದೆ ಇಂತಹ ರಾಜಕೀಯ ಹಗೆತನದ ಕ್ರಮಗಳು, ಕಿರುಕುಳಗಳಿಗೆ ಪಕ್ಷ ಹಾಗೂ ನಾಯಕರು ಹೆದರುವ ಪ್ರಶ್ನೆಯೇ ಇಲ್ಲ. ಮುಂದಿನ ದಿನಗಳಲ್ಲಿ ಸರ್ಕಾರವನ್ನು ಮತ್ತಷ್ಟು ತೀವ್ರವಾಗಿ ಪ್ರಶ್ನಿಸಲಿದೆ ಎಂದು ಎಚ್ಚರಿಕೆ ನೀಡಿತ್ತು.

ಪಕ್ಷದ ವಕ್ತಾರ ಮನೀಷ್ ತಿವಾರಿ ಏಐಸಿಸಿ ಕೇಂದ್ರ ಕಚೇರಿಯಲ್ಲಿ ನಡೆಸಿದ ಸುದ್ದಿಗೋಷ್ಟಿಯಲ್ಲಿ, ಇಂತಹ ಬೆದರಿಕೆಗಳಿಗೆ ಕಾಂಗ್ರೆಸ್ ಹೆದರುವ ಪಕ್ಷವಲ್ಲ, ದೇಶದ ಪ್ರಧಾನ ರಾಜಕೀಯ ಪಕ್ಷವಾಗಿ , ಸರ್ಕಾರವನ್ನು ಟೀಕಿಸುವ ಹಾಗೂ ಕಠಿಣ ಪ್ರಶ್ನೆಗಳನ್ನು ಮುಂದಿರಿಸಿ ಪ್ರತಿಭಟನೆಗಳ ಮೂಲಕ ದೇಶದ ಪ್ರಜಾಪ್ರಭುತ್ವವನ್ನು ಜೀವಂತವಾಗಿರಲಿಸಿದೆ ಎಂದಿದ್ದರು.

SCROLL FOR NEXT