ರಾಜಕೀಯ

ಡಿಕೆಶಿ ಬಂಧನ ವಿರೋಧಿಸಿ 'ಕೈ' ಪ್ರತಿಭಟನೆ, ಬಹುತೇಕ ಪ್ರತಿಭಟನೆಗಳಿಂದ ಸಿದ್ದು ದೂರ?

Manjula VN

ಬೆಂಗಳೂರು: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಹಿರಿಯ ನಾಯಕ ಡಿ.ಕೆ.ಶಿವಕುಮಾರ್ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧನಕ್ಕೊಳಪಡಿಸಿರುವ ಹಿನ್ನೆಲೆಯಲ್ಲಿ ರಾಜ್ಯ ಕಾಂಗ್ರೆಸ್ ತೀವ್ರ ಪ್ರತಿಭಟನೆ ನಡೆಸುತ್ತಿದ್ದು, ಈ ನಡುವೆ ಡಿಕೆಶಿಗೆ ಬೆಂಬಲ ನೀಡಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಹುತೇಕ ಪ್ರತಿಭಟನೆಗಳಿಂದ ದೂರ ಉಳಿದಿರುವುದಾಗಿ ತಿಳಿದುಬಂದಿದೆ. 

ಪ್ರತಿಭಟನೆಯಲ್ಲಿ ಭಾಗಿಯಾಗಬಾರದು ಎಂದು ನಿರ್ಧರಿಸಿದ್ದ ಸಿದ್ದರಾಮಯ್ಯ ಅವರು ಇದ್ದಕ್ಕಿದ್ದಂತೆ ಹೆಚ್ಎಎಲ್ ನಿಂದ ಮೈಸೂರಿಗೆ ತೆರಳಲು ವಿಮಾನ ಹತ್ತಿದ್ದರು. ನಂತರ ಅಲ್ಲಿಂದ ಕೊಡಗು ಜಿಲ್ಲೆಗೆ ಪ್ರಯಾಣ ಬೆಳೆಸಿದರು. 9 ದಿನಗಳ ಹಿಂದ ಇಹಲೋಕ ತ್ಯಜಿಸಿದ್ದ ಎಕೆ ಸುಬ್ಬಯ್ಯ ಅವರ ನಿವಾಸಕ್ಕೆ ಭೇಟಿ ನೀಡುವ ಸಲುವಾಗಿ ಸಿದ್ದರಾಮಯ್ಯ ಅವರು ಕೊಡಗು ಜಿಲ್ಲೆಗೆ ತೆರಳಿದ್ದರು. ನಂತರ ಸಂಜೆ 4 ಗಂಟೆಗೆ ಮೈಸೂರಿಗೆ ಬಂದಿಳಿದು ಕೆಲವೇ ಗಂಟೆಗಳ ಕಾಲ ಮಾತ್ರ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. 

ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರ ನಡುವೆ ಹೇಳಿಕೊಳ್ಳುವಷ್ಟು ಆಪ್ತತೆ ಇರಲಿಲ್ಲ ಎಂದು ಕೆಲ ವಿಮರ್ಶಕರು ಹೇಳುತ್ತಿದ್ದಾರೆ. 2013ರಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ತಮ್ಮ ಸಚಿವ ಸಂಪುಟದಿಂದ ಡಿಕೆ.ಶಿವಕುಮಾರ್ ಅವರನ್ನು ಸಿದ್ದರಾಮಯ್ಯ ದೂರವಿಟ್ಟಿದ್ದರು. 

ದಿವಂಗತ ಸುಬ್ಬಯ್ಯ ಹಾಗೂ ಅವರ ಪುತ್ರ ಎ.ಎಸ್ ಪೊನ್ನಣ್ಣ ಅವರು ಸಿದ್ದರಾಮಯ್ಯ ಅವರಿಗೆ ಆಪ್ತರಾಗಿದ್ದು, ಈ ಮೊದಲೇ ಅವರ ನಿವಾಸಕ್ಕೆ ಭೇಟಿ ನೀಡಲು ನಿರ್ಧರಿಸಲಾಗಿತ್ತು. ಹೀಗಾಗಿಯೇ ಸಿದ್ದರಾಮಯ್ಯ ಅವರು ಕೊಡಗು ಜಿಲ್ಲೆಗೆ ತೆರಳಿದ್ದರು. ಇದರ ಹಿಂದೆ ಯಾವುದೇ ರೀತಿಯ ಉದ್ದೇಶಗಳಿರಲಿಲ್ಲ ಎಂದು ಸಿದ್ದರಾಮಯ್ಯ ಆಪ್ತ ಮೂಲಗಳು ಮಾಹಿತಿ ನೀಡಿವೆ. 

SCROLL FOR NEXT