ರಾಜಕೀಯ

ಕಾಂಗ್ರೆಸ್ ಸಿದ್ಧರಾಮಯ್ಯರಿಗೆ ಕೈಕೊಟ್ಟರೂ,ಬಿಜೆಪಿ ಕೈ ಬಿಡುವುದಿಲ್ಲ : ಸಚಿವ ಸಿ.ಟಿ.ರವಿ

Nagaraja AB

ಮೈಸೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್ ಕೈ  ಕೊಟ್ಟರೂ ನಾವು ಕೈ ಬಿಡುವುದಿಲ್ಲ, ಅವರನ್ನು ಸೇರಿಸಿಕೊಂಡೇ ದಸರ ಆಚರಣೆ ಮಾಡಲಿದ್ದೇವೆ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಪ್ರವಾಸೋದ್ಯಮ ಸಚಿವ ಸಿ ಟಿ ರವಿ ಹೇಳಿದ್ದಾರೆ. 

ಅರಮನೆ ಆವರಣದಲ್ಲಿ ಆನೆಗಳ ಮಾವುತರು ಮತ್ತು ಕಾವಾಡಿ ಕುಟುಂಬಗಳಿಗೆ ಜಿಲ್ಲಾಡಳಿತದಿಂದ ಆಯೋಜಿಸಿದ್ದ ಉಪಹಾರ ಕೂಟದಲ್ಲಿ ಭಾಗವಹಿಸಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರನ್ನು ಸೇರಿಸಿಕೊಂಡೇ ದಸರಾ  ಆಚರಣೆ ಮಾಡುತ್ತೇವೆ.ಸಿದ್ದರಾಮಯ್ಯ ದಿನನಿತ್ಯ ತಮ್ಮ ಸಂಪರ್ಕದಲ್ಲಿದ್ದಾರೆ. ದಸರಾ ಆಹ್ವಾನ ಪತ್ರಿಕೆ ಇನ್ನೂ ಮುದ್ರಣವಾಗಿಲ್ಲ, ಬಳಿಕ ಸಿದ್ದರಾಮಯ್ಯ ಅವರನ್ನು ವಿಧ್ಯುಕ್ತವಾಗಿ ಆಹ್ವಾನಿಸಿಯೇ ದಸರಾ ಆಚರಣೆ ಮಾಡುತ್ತೇವೆ. ಅಧಿಕೃತ ಆಮಂತ್ರಣ ನೀಡುವ ವೇಳೆ ನೀವು ನಮ್ಮ ಜೊತೆ ಬನ್ನಿ ಎಂದು ಮಾಧ್ಯಮ ಪ್ರತಿನಿಧಿಗಳಿಗೆ ಸಿ ಟಿ ರವಿ  ಮನವಿ ಮಾಡಿದರು.

ಇದೇ ವೇಳೆ ಸುದ್ದಿಗಾರರ ಪ್ರಶ್ನಗೆ ಉತ್ತರಿಸಿದ ಅವರು, ಭ್ರಷ್ಟಾಚಾರ ನಡೆಸದಿದ್ದರೆ ಕಾಂಗ್ರೆಸ್ ನಾಯಕರು ಏಕೆ ಭಯ ಬೀಳಬೇಕು, ಯಾರು ಭ್ರಷ್ಟಾಚಾರ ಮಾಡಿರುತ್ತಾರೆಯೋ ಅವರಿಗೆ ಭಯ ಇರುತ್ತದೆ. ಹಾಗಿದ್ದರೆ ಭ್ರಷ್ಟಾಚಾರ ಮಾಡಿದವರ ಬಗ್ಗೆ  ತನಿಖೆ ನಡೆಸುವುದು ತಪ್ಪೆ ಎಂದು ಪ್ರಶ‍್ನಿಸಿದ ಅವರು, ತನಿಖೆ ನಡೆಸುವುದು ಎಂದರೆ ಅದೇನು ಇಲಿ ಹಿಡಿದಂತೆಯೇ ಎಂದು ವ್ಯಂಗ್ಯವಾಡಿದರು. 

ಡಿ.ಕೆ. ಶಿವಕುಮಾರ್ ಬೆಂಬಲಿಸಿ, ಇಡಿ ಬಂಧನ ಖಂಡಿಸಿ ಒಕ್ಕಲಿಗರು ನಾಳೆ ನಡೆಸುತ್ತಿರುವ ಪ್ರತಿಭಟನೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕಾನೂನಿಗಿಂತಾ ದೊಡ್ಡವರಾರು ಇಲ್ಲ, ಭಾವನಾತ್ಮಕವಾಗಿ ಯಾರೂ ಯೋಚನೆ ಮಾಡಬಾರದು., ವಾಸ್ತವವಾಗಿ ಯೋಚಿಸಿ, ಶಿವಕುಮಾರ್ ಬಂಧನಕ್ಕೆ ಜಾತಿ ಬಣ್ಣ ಕಟ್ಟಿರುವುದು ಸರಿಯಲ್ಲ. ಕೇಂದ್ರ ಸರ್ಕಾರ ಒಕ್ಕಲಿಗ ಸಮುದಾಯದ ವಿರುದ್ಧವಿದೆ ಎಂದು  ಬಿಂಬಿಸುತ್ತಿರುವುದು ಏಕೆ ಎಂದು ಪ್ರಶ್ನಿಸಿದರು.

ನಮ್ಮ ಮನೆಯಲ್ಲಿ 10 ಕೋಟಿ ರೂ ಹಣ ಸಿಕ್ಕರೇ ನಾನು ಪ್ರಾಮಾಣಿಕ ಎಂದು  ಹೇಗೆ ಹೇಳಿಕೊಳ್ಳು ವುದಕ್ಕೆ ಸಾಧ್ಯವೆ?. ಎಂದು ಪ್ರಶ‍್ನಿಸಿದ ಅವರು, ನನ್ನ ಆಸ್ತಿ 18 ಎಕರೆ ಇದೆ ಅದು ಏಕಾಏಕಿ 180 ಎಕರೆ ಆದರೆ ಅದಕ್ಕೆ ನಾನು ಉತ್ತರ ನೀಡಬೇಕು. ಅದು 1,800 ಎಕರೆ ಆದರೂ ಜನರಿಗೆ ಉತ್ತರದಾಯಿತ್ವ ಹೊಂದಿರಲೇಬೇಕು. ಸಾರ್ವಜನಿಕವಾಗಿ ಉತ್ತರ ನೀಡಿದ್ದರೆ ಹೇಗೆ ಎಂದು ಅವರು ಪ್ರಶ‍್ನಿಸಿದರು.

ಆನೆಗಳ ಕಾವಾಡಿಗಳು ಹಾಗೂ ಮಾವುತರ 26 ಕುಟುಂಬಗಳಿಗೆ ಜಿಲ್ಲಾಡಳಿತದಿಂದ ಉಪಹಾರ ವ್ಯವಸ್ಥೆ ಮಾಡಲಾಗಿತ್ತು. ಇಡ್ಲಿ ಸಾಂಬಾರ್, ಪೊಂಗಲ್, ಮಸಾಲ ವಡೆ ಹಾಗೂ ಉಪ್ಪಿಟ್ಟನ್ನು ಸಚಿವ ಸಿಟಿ ರವಿ, ಸಚಿವ ವಿ.ಸೋಮಣ್ಣ, ಶಾಸಕ ರಾಮದಾಸ್ ಮುತುವರ್ಜಿ ವಹಿಸಿ ಬಡಿಸಿದರು. 

ಸಚಿವ ವಿ.ಸೋಮಣ್ಣ ಪ್ರತಿಷ್ಠಾನದಿಂದ ಮಾವುತರ ಕುಟುಂಬಗಳಿಗೆ ತಲಾ 5 ಸಾವಿರ ರೂ ನಂತೆ  20 ಮಾವುತರಿಗೆ 2 ಲಕ್ಷ ರೂ ಉಡುಗೊರೆ ನೀಡಲಾಯಿತು. ಜೊತೆಗೆ ಜಿಲ್ಲಾಡಳಿತದಿಂದಲೂ ಖಾಕಿ ಸಮವಸ್ತ್ರ, ಕೊಡೆ, ಜರ್ಕಿನ್ ಟೋಪಿ ,ನೀರಿನ ಬಾಟೆಲ್, ಟಾರ್ಚ್ ಲೈಟ್, ಹಾಗೂ ಉತ್ತಮ ದರ್ಜೆ ಶೂ ಗಳ ಕಿಟ್ಟನ್ನು ಸಚಿವರು ವಿತರಿಸಿದರು.

SCROLL FOR NEXT