ರಾಜಕೀಯ

ಕುಟುಂಬದವರನ್ನು ಗುರಿಯಾಗಿಸುವುದು ಬ್ಲಾಕ್‌ಮೇಲ್ ರಾಜಕಾರಣ: ಕಾಂಗ್ರೆಸ್ ವಿರುದ್ಧ ಅಶ್ವಥನಾರಾಯಣ ಕಿಡಿ

Shilpa D

ಬೆಂಗಳೂರು: ಸರ್ಕಾರದ ಆಡಳಿತದಲ್ಲಿ ಏನಾದರೂ ತಪ್ಪುಗಳಾದರೆ ಅದನ್ನು ನೇರವಾಗಿ ಮುಖ್ಯಮಂತ್ರಿಗಳ ಗಮನಕ್ಕೆ ತರಬೇಕು. ಅದು ಬಿಟ್ಟು ಅವರ ಕುಟುಂಬ ವರ್ಗದವರನ್ನು ಗುರಿ ಮಾಡುವುದು ಬ್ಲಾಕ್ ಮೇಲ್ ರಾಜಕಾರಣ ಎನಿಸುತ್ತದೆ ಎಂದು ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವಥ್ ನಾರಾಯಣ್ ತಿರುಗೇಟು ನೀಡಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಅವರ ಬಂಧನ ಖಂಡಿಸಿ ನಿನ್ನೆ ನಡೆದ ಪ್ರತಿಭಟನೆ ಒಕ್ಕಲಿಗರ ಪ್ರತಿಭಟನೆಯಲ್ಲ. ಅದು ಡಿ.ಕೆ.ಶಿವಕುಮಾರ್ ಬೆಂಬಲಿಗರ, ಹಿತೈಶಿಗಳ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ. ಸದ್ಯ ಪ್ರತಿಭಟನೆ ಶಾಂತಿಯುತವಾಗಿತ್ತು. ಅದು ಸಮಾಧಾನ ತಂದಿದೆ. ಆದರೆ ಭ್ರಷ್ಟಾಚಾರ ಸಂಬಂಧಿ ಪ್ರಕರಣಗಳಿಗೆ ಜಾತಿ ಲೇಪನ‌ಮಾಡಿ ಸಮಾಜವನ್ನು ಒಡೆಯುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ಇದು ಸರಿಯಲ್ಲ. ಇನ್ನಾದರೂ ಜಾತಿ ರಾಜಕೀಯ ಬಿಟ್ಟು ಅಭಿವೃದ್ಧಿಗೆ ಪೂರಕವಾದ ರಾಜಕೀಯ ಮಾಡಬೇಕು ಎಂದು ಸಲಹೆ ನೀಡಿದರು.

ಒಂದು ಸಮುದಾಯದ ನಾಯಕರು ಇದ್ದ ಮಾತ್ರಕ್ಕೆ ಅದು ಸಮುದಾಯದ  ಕಾರ್ಯಕ್ರಮವಾಗುವುದಿಲ್ಲ. ಪ್ರತಿಭಟನೆ ಮಾಡಿ ಅವರ ಭಾವನೆ ವ್ಯಕ್ತಪಡಿಸಿದ್ದಾರೆ.  ಕಾನೂನು ತನ್ನ ಕ್ರಮ ಕೈಗೊಳ್ಳುತ್ತದೆ, ಇದರ ಬಗ್ಗೆ ಹೆಚ್ಚಿನ ವಿಶ್ಲೇಷಣೆಗಳು ಬೇಡ ಎಂದು ಹೇಳಿದರು.

ಬಿಜೆಪಿ ಒಕ್ಕಲಿಗ ನಾಯಕರ ಟಾರ್ಗೆಟ್ ಮಾಡಲಾಗುತ್ತಿದೆ ಎಂಬ ಕಾಂಗ್ರೆಸ್ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಮೊದಲಿಂದಲೂ ಕಾಂಗ್ರೆಸ್ ನಾಯಕರು ಇಂತಹ ಹೇಳಿಕೆಗಳನ್ನು ಕೊಟ್ಟು ಮತ್ತೆ ಬದಲಾಯಿಸುತ್ತಲೇ ಇರುತ್ತಾರೆ. ತಮ್ಮ ಅನುಕೂಲಕ್ಕೆ ರಾಜಕಾರಣ ಮಾಡುವುದು ಬೇಡ, ಜನರಿಗಾಗಿ ರಾಜಕಾರಣ ಮಾಡಲಿ, ಜಾತಿ ಹೆಸರಲ್ಲಿ ಕಾಂಗ್ರೆಸ್ ನಾಯಕರು ಜನರ ದಾರಿ ತಪ್ಪಿಸುವುದು ಬೇಡ, ಜಾತಿಗೆ ಕಳಂಕ ತರುವ ಕೆಲಸ ಮಾಡಬಾರದು ಎಂದರು.

ರಾಮಕೃಷ್ಣನಗರದಲ್ಲಿ ಇರುವುದು ಸಿ ಎ ಸೈಟುಗಳು. ಅವನ್ನು ಅಲ್ಲಿಯ ನಾಗರಿಕರು ಆಟದ ಮೈದಾನವಾಗಿ ಬಳಸುತ್ತಿದ್ದರು‌. ಈಗ ಸಿಎ ಸೈಟ್ ಗಳನ್ನು ಸಂಘಸಂಸ್ಥೆಗಳಿಗೆ ವಿತರಿಸಲಾಗಿದೆ. ಅದಕ್ಕೆ ನಾಗರಿಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈ ವಿಷಯವನ್ನೇ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್ ದೊರೆಸ್ವಾಮಿಯವರು ತಮ್ಮ ಗಮನಕ್ಕೆ ತಂದು ಆಟದ ಮೈದಾನವಾಗಿ ಅದನ್ನು ಪರಿವರ್ತಿಸಿಕೊಡುವಂತೆ ಮನವಿ ಮಾಡಿದ್ದಾರೆ. ಈ ವಿಷಯವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರುತ್ತೇನೆ ಎಂದು ತಿಳಿಸಿದರು.

SCROLL FOR NEXT