ರಾಜಕೀಯ

ಕುಮಾರಸ್ವಾಮಿ ಬೆನ್ನಿಗೆ ಮತ್ತಷ್ಟು ಮಂದಿ ಚೂರಿ ಹಾಕಲಿದ್ದಾರೆ: ಸಾ.ರಾ.ಮಹೇಶ್

Shilpa D

ಮೈಸೂರು: ಜೆಡಿಎಸ್ ನಿಂದ ಕೆಲವು ಶಾಸಕರು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ವಿರುದ್ಧ ತಿರುಗಿ ಬಿದ್ದಿದ್ದು, ಇನ್ನಷ್ಟು ಶಾಸಕರು ಬಂಡಾಯದ ಹಾದಿ ತುಳಿಯುವ ಸಾಧ್ಯತೆಯಿದೆ ಎಂದು  ಮಾಜಿ ಸಚಿವ ಸಾ ರಾ ಮಹೇಶ್ ಹೇಳಿದ್ದಾರೆ. 

ಅವರ ಈ ಹೇಳಿಕೆ ಇನ್ನಷ್ಟು ಶಾಸಕರು ಪಕ್ಷ ತೊರೆಯುವ ಮುನ್ಸೂಚನೆಗೆ ಪುಷ್ಠಿ ದೊರೆತಂತಾಗಿದೆ. ಸುದ್ದಿಗಾರರ ಜತೆ ಮಾತನಾಡಿದ ಅವರು, ಮುಖ್ಯಮಂತ್ರಿಯಾಗಿದ್ದಾಗ ಸಾಕಷ್ಟು ನೋವುಂಡ ಕುಮಾರ ಸ್ವಾಮಿ ಅವರಿಗೆ ಇದೀಗ ನಮ್ಮ ಶಾಸಕರು ಮತ್ತಷ್ಟು ನೋವುಂಟು ಮಾಡುವ ಕೆಲಸ ಮಾಡುತ್ತಿದ್ದಾರೆ. ಕುಮಾರ ಸ್ವಾಮಿ ವಿರುದ್ದ ಇನ್ನಷ್ಟು ಚೂರಿಗಳು [ಬೆನ್ನಿಗೆ ಚೂರಿ ಹಾಕುವವರು ] ಹೊರ ಬರುವುದು ಬಾಕಿ ಇದೆ ಎಂದರು. 

ಪಕ್ಷದ ಅಲ್ಲಲ್ಲಿ ಚೂರಿಗಳ ಮಾತುಗಳು ಕೇಳಿ ಬರುತ್ತಿವೆ, ಅವೆಲ್ಲವು  ಶೀಘ್ರದಲ್ಲೇ ಹೊರ ಬರಲಿದೆ ನಮ್ಮ ಪಕ್ಷದಲ್ಲೇ ಚೂರಿಗಳ ಸದ್ದು ಕೇಳಿಸುತ್ತಿದೆ ಎಂದು ಎಂದು ಹೇಳುವ ಮೂಲಕ ಜೆಡಿಎಸ್ ನಲ್ಲಿ ಬಂಡಾಯ ಉಲ್ಬಣಗೊಳ್ಳುವ ಸಾಧ್ಯತೆ ಬಗ್ಗೆ ಸಾ ರಾ  ಮಹೇಶ್ ಸುಳಿವು ನೀಡಿದ್ದಾರೆ. 

ಬಿಜೆಪಿ ನೇತೃತ್ವದ ಸರ್ಕಾರಕ್ಕೆ ಜೆಡಿಎಸ್ ನ ಜಿ.ಟಿ. ದೇವೇಗೌಡರ ನೇತೃತ್ವದ 12 ಕ್ಕೂ ಹೆಚ್ಚು ಶಾಸಕರು ಬಾಹ್ಯ ಬೆಂಬಲ ನೀಡಲಿದ್ದಾರೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧು ಸ್ವಾಮಿ ಹೇಳಿದ್ದರು. ಇದರ ಬೆನ್ನಲ್ಲೇ, ಜಿ.ಟಿ. ದೇವೇಗೌಡ, ಗುಬ್ಬಿ ಶ್ರೀನಿವಾಸ್ ಅವರು ಬಹಿರಂಗವಾಗಿ ಕುಮಾರ ಸ್ವಾಮಿ ವಿರುದ್ಧ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದರು. 

ಇದೀಗ ಸಾ.ರಾ. ಮಹೇಶ್ ಹೇಳಿಕೆ ಜೆಡಿಎಸ್ ನ ಆಂತರಿಕ ಗೊಂದಲವನ್ನು ಅನಾವರಣಗೊಳಿಸಿದೆ. ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂತಹ  ಚೂರಿಗಳನ್ನು  ಅರಗಿಸಿಕೊಳ್ಳುವ ಶಕ್ತಿ ಕುಮಾರಸ್ವಾಮಿ ಅವರಿಗಿದೆ. 14 ತಿಂಗಳು ಮುಖ್ಯಮಂತ್ರಿ ಆದ ಬಳಿಕ ಕುಮಾರಸ್ವಾಮಿ ಅವರು ಉಂಡ ನೋವನ್ನು ಬೇರೆ ಯಾರು ನೋಡಿಲ್ಲ. ಬೆಳಿಗ್ಗೆ ಒಂದು ಗಂಟೆ ಅಧಿಕಾರಿಗಳ ಸಭೆ  ಮಾಡಿದರೆ ಮುಗಿತು. ಬಳಿಕ ಅಸಮಾಧಾನಗೊಂಡ ಶಾಸಕರನ್ನು ಸಮಾಧಾನ ಮಾಡುವುದರಲ್ಲೇ ಅವರು ಸಮಯ  ಕಳೆಯಬೇಕಿತ್ತು. ಕುಮಾರಸ್ವಾಮಿ ಅವರ ಬಳಿಯಲ್ಲೇ ನಾನು ಸದಾ ಇರುತ್ತಿದ್ದ ಕಾರಣ ಅವರು ಅನುಭಿಸಿದ ಎಲ್ಲ  ನೋವುಗಳು ನನಗೆ ತಿಳಿದಿದೆ. ಅಧಿಕಾರ ಹೋದ ಬಳಿಕ ಮತ್ತೆ ಮತ್ತೆ ಅದೇ ನೋವು ಅನುಭವಿಸುತ್ತಿದ್ದಾರೆ ಎಂದರು. 
 
ತಮ್ಮ ಕೊನೆಯ ಉಸಿರು ಇರುವರೆಗೋ ಕೆ.ಆರ್.ನಗರದಲ್ಲೆ ಚುನಾವಣೆ ನಿಲ್ಲುತ್ತೇನೆ. ಯಾವುದೇ ಕಾರಣಕ್ಕೂ ಕ್ಷೇತ್ರ ಬದಲಾವಣೆ ಮಾಡುವ ಪ್ರಶ್ನೆಯೇ ಇಲ್ಲ. ನಾನು ಕೈ ಮುಗಿಯುವ ನಾಯಕ ಕುಮಾರಣ್ಣ ಮಾತ್ರ ಎಂದು ಹೇಳುವ ಮೂಲಕ ಜಿ ಟಿ ದೇವೇಗೌಡರಿಗೆ ತಿರುಗೇಟು ನೀಡಿದರು.
 
ಜಿ.ಟಿ ದೇವೇಗೌಡರು ನಮ್ಮ  ಪಕ್ಷದಲ್ಲೆ ಇರುತ್ತಾರೆ. ಅವರು ನನಗೆ ಬೈಯುವುದು ಹೊಸದೆನಲ್ಲ. ಎಲ್ಲ ನೋವನ್ನು ಸರಿಪಡಿಸಿ ಅವರನ್ನು ವಾಪಸ್ ಕರೆದುಕೊಂಡು ಬರುತ್ತೇವೆ. ಜಿಟಿ ದೇವೇಗೌಡರ ಬಳಿ  ಮಹಾನಗರ ಪಾಲಿಕೆ ಸದಸ್ಯರು  ತೆರಳಿದ್ದರು. ಆಗ ಕೆಲ ದಿನ ಜೆಡಿಎಸ್​​ನಿಂದ ತಟಸ್ಥವಾಗಿ ಇರುತ್ತೇನೆ ಎಂದಿದ್ದಾರೆ. ಆ  ಕಾರಣಕ್ಕೆ ಅವರನ್ನು ನಿನ್ನೆಯ ಸಭೆಗೆ ಆಹ್ವಾನಿಸಿರಲಿಲ್ಲ, ಜಿಟಿ ದೇವೇಗೌಡರು ನಮ್ಮ ಪಕ್ಷದ ಪಕ್ಷಾತೀತ  ನಾಯಕರು. ಅವರಿಗೆ 14 ತಿಂಗಳ ಆಡಳಿತದಲ್ಲಿ ನೋವಾಗಿರಬಹುದು. ನಮಗೂ ಸಾಕಷ್ಟು ನೋವುಗಳು ಆಗಿದೆ.  ಅದನ್ನು ಸಹಿಸಿಕೊಂಡು ನಾವು ನೆಮ್ಮದಿಯಾಗಿ ಇಲ್ಲವೇ.? ಅದೇ ರೀತಿ ಅವರಿಗೆ ಆದ  ನೋವುಗಳನ್ನು ಮರೆಯಬೇಕು ಹಾಗೂ ಸರಿಪಡಿಸಿಕೊಂಡು ಹೋಗಬೇಕು ಎಂದು ಅವರು ತಿಳಿಸಿದರು.
 
ಅಕ್ಟೋಬರ್ 21 ರಂದು ಜೆಡಿಎಸ್ ಗ್ರಾಮೀಣ ಮುಖಂಡರ ಸಭೆ ಕರೆದಿದ್ದು  ಆ ಸಭೆಗೆ  ಜಿಟಿಡಿಯವರನ್ನು ನಾನೇ ಖುದ್ದು ಹೋಗಿ ಆಹ್ವಾನ ನೀಡುತ್ತೇನೆ. ಅಂದು ಅವರಿಗೆ ಅನ್ಯ ಕೆಲಸಗಳು  ಇದ್ದರೆ ಮತ್ತೊಂದು ದಿನಾಂಕ ನಿಗದಿ ಮಾಡುತ್ತೇವೆ. ಜಿಟಿಡಿಯವರು ಎಲ್ಲೂ ಹೋಗುವುದಿಲ್ಲ ನಮ್ಮ  ಜೊತೆಯೇ ಇರುತ್ತಾರೆ ಎಂದು ಸಾ.ರಾ ಮಹೇಶ್ ಮಾರ್ಮಿಕವಾಗಿ ಹೇಳಿದರು.

SCROLL FOR NEXT