ರಾಜಕೀಯ

ಅಶೋಕ್ ತಮಗೆ ಅಣ್ಣನ ಸಮಾನ, ಅವರ ಜೊತೆ ಭಿನ್ನಾಭಿಪ್ರಾಯವಿಲ್ಲ: ಅಶ್ವಥ್ ನಾರಾಯಣ್

Shilpa D

ಬೆಂಗಳೂರು: ಕಂದಾಯ ಸಚಿವ ಆರ್.ಅಶೋಕ್ ಹಾಗೂ ತಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಭಿನ್ನಾಭಿಪ್ರಾಯಗಳೇನೇ ಇದ್ದರೂ ಕೂತು ಮಾತನಾಡಿ ಬಗೆಹರಿಸಿಕೊಳ್ಳುತ್ತೇವೆ ಎಂದು ಉಪ ಮುಖ್ಯಮಂತ್ರಿ ಡಾ. ಅಶ್ವಥ್ ನಾರಾಯಣ್ ಹೇಳಿದ್ದಾರೆ.

ರಾಜ್ಯ ಬಿಜೆಪಿ ಕಾರ್ಯಾಲಯ, ಜಗನ್ನಾಥ ಭವನದಲ್ಲಿ ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಹುಟ್ಟು ಹಬ್ಬದ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಅಶೋಕ್ ತಮಗೆ ಅಣ್ಣನ ಸಮಾನ. ಅಧಿಕಾರ ಶಾಶ್ವತವಲ್ಲ. ಯಾವುದೋ ಕಾರಣಕ್ಕೆ ಅಧಿಕಾರ ಸಿಕ್ಕಿದೆ. ಅದನ್ನು ಸಮಾಜದ ಒಳಿತಿಗಾಗಿ ಬಳಕೆ ಮಾಡಿಕೊಳ್ಳಬೇಕು. ಅದಷ್ಟೇ ಮುಖ್ಯ ಎಂದು ಅವರು ಹೇಳಿದರು.

ಅಧಿಕಾರ ಶಾಶ್ವತವಲ್ಲ. ಸಂಬಂಧಗಳು ಮಾತ್ರ ಶಾಶ್ವತ. ಸಂಬಂಧಗಳನ್ನು ನಾವು ಶಾಶ್ವತವಾಗಿ ಉಳಿಸಿಕೊಳ್ಳಬೇಕು. ಅಧಿಕಾರ ಯಾವಾಗಲೂ ಇರುವುದಿಲ್ಲ. ಅಶೋಕ್ ಮತ್ತು ತಮ್ಮನಡುವೆ ಯಾವುದೇ ಮನಸ್ತಾಪ ಇದ್ದರೂ ಅದನ್ನು ಸರಿಪಡಿಸಿಕೊಳ್ಳುವ ಕೆಲಸ ಮಾಡುತ್ತೇವೆ ಎಂದರು.

ನಾವೆಲ್ಲಾ ಜೊತೆಯಾಗಿ ಹೋಗಬೇಕು, ನಾವೆಲ್ಲರೂ ಸೇರಿರುವುದು ಸಮಾಜಕ್ಕಾಗಿ. ಕೆಲಸ ಮಾಡುವುದು ಕೂಡ ಸಮಾಜಕ್ಕಾಗಿ. ಈ ದಾರಿಯಲ್ಲಿ ನಾವು ಮುನ್ನಡೆಯಬೇಕು ಎಂದು ಪರೋಕ್ಷವಾಗಿ ಆರ್. ಅಶೋಕ್‍ಗೆ ಟಾಂಗ್ ನೀಡಿದರು.

ಬೆಂಗಳೂರು ಜಿಲ್ಲಾ ಉಸ್ತುವಾರಿ ಮುಖ್ಯಮಂತ್ರಿಗಳ ಬಳಿ ಇದೆ. ಇದರಿಂದ ನಗರಕ್ಕೆ ತುಂಬಾ ಅನುಕೂಲವಾಗಲಿದೆ. ಬೆಂಗಳೂರಿನಲ್ಲಿ ಸಾಕಷ್ಟು ಸಮಸ್ಯೆಗಳಿದ್ದು, ಅವುಗಳನ್ನು ಬಗೆಹರಿಸಲು ಇದು ನೆರವಾಗಲಿದೆ. ಒಟ್ಟಿನಲ್ಲಿ ಬೆಂಗಳೂರು ಅಭಿವೃದ್ಧಿಗೆ ನಾವೆಲ್ಲಾ ಮುಖ್ಯಮಂತ್ರಿಯವರ ಜೊತೆ ಕೈಜೋಡಿಸಿ ಕೆಲಸ ಮಾಡುತ್ತೇವೆ ಎಂದರು.

ಬೆಂಗಳೂರು ಇಡೀ ರಾಜ್ಯಕ್ಕೆ ಸಂಬಂಧಿಸಿದ ನಗರ. ಇಲ್ಲಿನ ಸುಗಮ ಸಂಚಾರಕ್ಕೆ ಒತ್ತು ನೀಡಲಾಗುವುದು. ರಸ್ತೆ ಗುಂಡಿ ಮುಚ್ಚುವ ಕೆಲಸವಾಗುತ್ತಿದೆ. ಮುಖ್ಯಮಂತ್ರಿಯವರೇ ನಗರದ ಉಸ್ತುವಾರಿಯಾಗಿರುವುದರಿಂದ ಪ್ರತಿ 15 ದಿನಗಳಿಗೊಮ್ಮೆ ನಗರ ಪ್ರದಕ್ಷಿಣೆ ನಡೆಸಿ ಸಮಸ್ಯೆ ಬಗೆಹರಿಸುವ ಕೆಲಸ ಮಾಡಲಿದ್ದಾರೆ ಎಂದರು.
 

SCROLL FOR NEXT