ರಾಜಕೀಯ

ಕಾಂಗ್ರೆಸ್ ಅಥವಾ ಬಿಜೆಪಿ: ಉಪ ಚುನಾವಣೆಯಲ್ಲಿ ಪಕ್ಷೇತರ ಸಂಸದೆ ಸುಮಲತಾ ಬೆಂಬಲ ಯಾರಿಗೆ?

Shilpa D

ಮೈಸೂರು: ಮಂಡ್ಯದ ಕೆ.ಆರ್ ಪೇಟೆ ಕ್ಷೇತ್ರಕ್ಕೆ ಉಪ ಚುನಾವಣೆ ಘೋಷಣೆಯಾಗಿದೆ. ನಾರಾಯಣ ಗೌಡ ಅನರ್ಹತೆಯಿಂದಾಗಿ ಇದೇ ಅಕ್ಟೋಬರ್ 22 ರಂದು ಚುನಾವಣೆ ನಡೆಯಲಿದ್ದು, ಎಲ್ಲರ ಕಣ್ಣು ಈಗ ಸುಮಲತಾ ಅವರ ಮೇಲೆ ನೆಟ್ಟಿದೆ.

ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ಪಕ್ಷೇತರವಾಗಿ ನಿಂತು ಕರ್ನಾಟಕ ರಾಜಕೀಯದಲ್ಲಿ ಇತಿಹಾಸ ಸೃಷ್ಟಿಸಿದ ಸಂಸದೆ ಸುಮಲತಾ ಬೆಂಬಲದ ನಿರೀಕ್ಷೆಯಲ್ಲಿ ಕಾಂಗ್ರೆಸ್ ಮುಖಂಡರಿದ್ದಾರೆ. 

ಆದರೆ ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ನೀಡುತ್ತಾರೋ, ಬಿಜೆಪಿ ಅಭ್ಯರ್ಥಿಗೆ ಬೆಂಬಲ ನೀಡುತ್ತಾರೋ, ಸಂಸದೆ ಸುಮಲತಾ ಬೆಂಬಲ ಯಾರಿಗೆ ಎನ್ನುವ ಕುತೂಹಲ ಇದೀಗ ಗರಿಗೆದರಿದೆ. 

ಕಳೆದ  ಲೋಕಸಭಾ ಚುನಾವಣೆ ವೇಳೆ ಪಕ್ಷೇತರ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ಸುಮಲತಾಗೆ ಬಿಜೆಪಿ ಮುಖಂಡರು ಬೆಂಬಲ ನೀಡಿದ್ದು, ಕೆಲ ಕಾಂಗ್ರೆಸಿಗರೂ ಕೂಡ ಬೆಂಬಲಿಸಿದ್ದರು.

ಆದರೆ ಚುನಾವಣೆ ಮುಕ್ತಾಯದ ಬಳಿಕ ಸುಮಲತಾ ಯಾರಿಗೆ ಬೆಂಬಲ ನೀಡುತ್ತಾರೆ ಎನ್ನುವ ಕುತೂಹಲ ಇತ್ತು. ಆದರೆ ಅವರು ಪಕ್ಷೇತರರಾಗಿಗೆ ಉಳಿದಿದ್ದರು. 

ಕೆ.ಆರ್ ಪೇಟೆ ಮತ್ತು ಹುಣಸೂರು ಕ್ಷೇತ್ರಗಳಲ್ಲಿ ಒಕ್ಕಲಿಗ ಸಮುದಾಯದ ಪ್ರಾಬಲ್ಯವಿದ್ದು,  ಒಂದು ವೇಳೆ ಸುಮಲತಾ ಯಾವುದಾದರೂ ಒಂದು ಪಕ್ಷಕ್ಕೆ ಬೆಂಬಲ ಸೂಚಿಸಿದರೇ ಮತ್ತೊಂದು ಕಡೆಯಿಂದ ಅವರು ಟೀಕೆ ಎದುರಿಸಲೇ ಬೇಕಾಗುತ್ತದೆ. 

ರಾಜ್ಯ ಮತ್ತು ಕೇಂದ್ರ ಎರಡರಲ್ಲೂ ಬಿಜೆಪಿ ಅಧಿಕಾರದಲ್ಲಿರುವುದರಿಂದ ಸುಮಲತಾ  ಕೇಸರಿ ಪಕ್ಷದ ವಿರುದ್ಧ ಹೋಗಲು ಸಾಧ್ಯವಿಲ್ಲ, ಕೆ.ಆರ್ ಪೇಟೆ ವಿಧಾನಸಭೆ ಚುನಾವಣೆಯಲ್ಲಿ ಸುಮಲತಾ ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸುತ್ತಾರೆ ಎಂದು ಮಂಡ್ಯ ಜಿಲ್ಲೆ ಬಿಜೆಪಿ ಅಧ್ಯಕ್ಷ ಕೆರಗೋಡು ಶಿವಣ್ಣ ಹೇಳಿದ್ದಾರೆ.

SCROLL FOR NEXT