ರಾಜಕೀಯ

ಉಪಚುನಾವಣೆ ಸಮರ: ಅಭ್ಯರ್ಥಿಗಳ ಆಯ್ಕೆಯಲ್ಲಿ ಕಾಂಗ್ರೆಸ್'ನಿಂದ ಎಚ್ಚರಿಕೆಯ ಹೆಜ್ಜೆ

Manjula VN

ಬೆಂಗಳೂರು: ಉಪಚುನಾವಣೆಗೆ ಕಾಂಗ್ರೆಸ್ ಪಕ್ಷ ಸಂಭವನೀಯ ಅಭ್ಯರ್ಥಿಗಳ ಪಟ್ಟೆ ಅಖೈರುಗೊಳಿಸಲು ಮಹತ್ವದ ಕಾಂಗ್ರೆಸ್ ಚುನಾವಣಾ ಸಮಿತಿ ಸಭೆಯನ್ನು ಗುರುವಾರ ಬೆಂಗಳೂರಿನಲ್ಲಿ ನಡೆಸಲಿದ್ದು, ತಮ್ಮದೇ ಪಕ್ಷದ ನಾಯಕರು ಈಗಾಗಲೇ ಕೈಕೊಟ್ಟ ಹಿನ್ನಲೆಯಲ್ಲಿ ಸಾಕಷ್ಟು ಸಮಸ್ಯೆಗಳನ್ನು ಅನುಭವಿಸಿರುವ ಕಾಂಗ್ರೆಸ್ ಇದೀಗ ಅಭ್ಯರ್ಥಿಗಳ ಆಯ್ಕೆಯಲ್ಲಿ ಎಚ್ಚರಿಕೆ ಹೆಜ್ಜೆ ಇಡಲು ಆರಂಭಿಸಿದೆ. 

15 ವಿಧಾನಸಭಾ ಕ್ಷೇತ್ರಗಳ ಪೈಕಿ ಈ ಹಿಂದೆ ಕಾಂಗ್ರೆಸ್ 12 ಕ್ಷೇತ್ರಗಳಲ್ಲಿ ಗೆಲವು ಸಾಧಿಸಿತ್ತು. ಅದರಲ್ಲಿ ಮೂರು ಕ್ಷೇತ್ರಗಳು ಜೆಡಿಎಸ್'ಗೆ ಸೇರಿದ್ದಾಗಿದೆ. 

ನಾಮಪತ್ರ ಸಲ್ಲಿಕೆಗೆ ಇನ್ನು ಕೆಲವೇ ದಿನಗಳು ಬಾಕಿಯಿದ್ದು, ಅಭ್ಯರ್ಥಿಗಳ ಪಟ್ಟಿಯನ್ನು ಈಗಾಗಲೇ ಕಾಂಗ್ರೆಸ್ ಅಂತಿಮಗೊಳಿಸಿದೆ. 

ಅಭ್ಯರ್ಥಿಗಳ ಆಯ್ಕೆ ಕುರಿತ ಕಾರ್ಯ ಪೂರ್ಣಗೊಂಡಿದ್ದು, ಶೀಘ್ರದಲ್ಲಿಯೇ ಕೆ.ಸಿ.ವೇಣುಗೋಪಾಲ್ ಅವರು ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಲಿದ್ದಾರೆ ಎಂದು ಕಾಂಗ್ರೆಸ್ ಹಿರಿಯ ನಾಯಕರೊಬ್ಬರು ಹೇಳಿದ್ದಾರೆ. 

ಉಪ ಚುನಾವಣೆಯಲ್ಲಿ ಹೊರಗಿನವರಿಗೆ ಟಿಕೆಟ್ ನೀಡುವುದಿಲ್ಲ. ಬದಲಾಗಿ ಪಕ್ಷದ ನಿಷ್ಠಾವಂತರು ಹಾಗೂ ಗೆಲ್ಲುವ ಸಾಮರ್ಥ್ಯವಿರುವ ಅಭ್ಯರ್ಥಿಗಳಿಗೆ ಟಿಕೆಟ್ ನೀಡುತ್ತೇವೆಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಹೇಳಿದ್ದಾರೆ. 

ಹೊಸಕೋಟೆ ಮತ್ತು ಕೆ.ಆರ್.ಪುರ ಕ್ಷೇತ್ರಗಳಿಂದ ಸ್ಪರ್ಧೆಗೆ ಬಿಜೆಪಿಯ ಶರತ್ ಬಚ್ಚೇಗೌಡ, ನಂದೀಶ್ ರೆಡ್ಡಿ ಅವರನ್ನು ಕಾಂಗ್ರೆಸ್'ಗೆ ಕರೆತರುವ ಪ್ರಯತ್ನ ನಡೆದಿದೆ ಎಂಬ ಮಾತುಗಳಿವೆಯಲ್ಲಾ ಎಂಬ ಪ್ರಶ್ನೆಗೆ ಉತ್ತರಿಸಿರುವ ಅವರು, ಬೇರೆ ಪಕ್ಷಗಳ ಯಾವುದೇ ನಾಯಕರ ಸಂಪರ್ಕಿಸುವ ಪ್ರಯತ್ನವನ್ನು ಮಾಡಿಲ್ಲ. ಅದೆಲ್ಲಾ ಊಹಾಪೋಹವಷ್ಟೇ. ನಾವು ಯಾರನ್ನೋ ಎಲ್ಲಿಂದಲ್ಲೇ ಕರೆತಂದು ಟಿಕೆಟ್ ಕೊಡುವುದಿಲ್ಲ. ನಮ್ಮದೇ ಪಕ್ಷದ ನಿಷ್ಠಾವಂತ ಹಾಗೂ ಗೆಲ್ಲುವ ಸಾಮರ್ಥ್ಯವಿರುವ ಅಭ್ಯರ್ಥಿಗಳನ್ನು ಅಂತಿಗೊಳಿಸಿ ಟಿಕೆಟ್ ನೀಡುತ್ತೇವೆಂದು ತಿಳಿಸಿದ್ದಾರೆ. 

ಕೆಪಿಸಿಸಿ ಕಾರ್ಯಕಾರಿ ಅಧ್ಯಕ್ಷ ಈಶ್ವರ್ ಖಂಡ್ರೆ ಮಾತನಾಡಿ, ಅನರ್ಹ ಶಾಸಕರು ಅಥವಾ ಅವರೊಂದಿರುವ ನಾಯಕರು ಚುನಾವಣೆಯಲ್ಲಿ ಬಿಜೆಪಿ ಪರ ಕೆಲಸ ಮಾಡಿದರೆ ಅಥವಾ ಚುನಾವಣೆಯಲ್ಲಿ ಸ್ಪರ್ಧಿಸಿದರೆ, ಅದು ಬಿಜೆಪಿಗೆ ಯಾವುದೇ ರೀತಿಯ ಸಹಾಯ ಮಾಡುವುದಿಲ್ಲ. ಆದರೆ, ಕಾಂಗ್ರೆಸ್ ಪಕ್ಷಕ್ಕೇ ಸಹಾಯವಾಗಲಿದೆ ಎಂದಿದ್ದಾರೆ. 

SCROLL FOR NEXT