ರಾಜಕೀಯ

ಸಿದ್ದರಾಮಯ್ಯ ವಿರುದ್ಧ ರಮೇಶ್ ಜಾರಕಿಹೊಳಿ ಪರೋಕ್ಷ ವಾಗ್ದಾಳಿ

Lingaraj Badiger

ಬೆಳಗಾವಿ: ಮೈತ್ರಿ ಸರ್ಕಾರ ಅಸ್ಥಿರಗೊಳ್ಳಬೇಕೆಂದು ಬಯಸಿದ್ದೇ ಅವರು. ಸರ್ಕಾರ ಪತನಗೊಂಡಿರುವುದು ನಮ್ಮಿಂದಲ್ಲ. ರಾಜ್ಯ ಮತ್ತು ರಾಷ್ಟ್ರಮಟ್ಟದ ನಾಯಕರಿಂದ ಎಂದು ಅನರ್ಹ ಶಾಸಕ ರಮೇಶ್ ಜಾರಕಿಹೊಳಿ‌ ಅವರು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆ ವ್ಯಕ್ತಿ ನಾಯಕನಾಗಿರುವರೆಗೆ ಕಾಂಗ್ರೆಸ್‌ಗೆ ಉಳಿಗಾಲವಿಲ್ಲ. ಕಾಂಗ್ರೆಸ್ ನಲ್ಲಿ 80  ಶಾಸಕರು ಆಯ್ಕೆಯಾಗಿದ್ದರು. ಇವರೇ ನಾಯಕರಾಗಿ ಮುಂದುವರೆದರೆ ಮುಂದಿನ ಚುನಾವಣೆಯಲ್ಲಿ 30 ಶಾಸಕರು ಆಯ್ಕೆ ಆಗುವುದು ಕಷ್ಟ ಎಂದು ಭವಿಷ್ಯ ನುಡಿದರು.

ನಾಯಕ ಎನಿಸಿಕೊಂಡವರು ತಮ್ಮ ವ್ಯಕ್ತಿತ್ವದಲ್ಲಿ ಖಚಿತತೆ ಹೊಂದಿರಬೇಕು. ಗೊಂದಲಕಾರಿ ವ್ಯಕ್ತಿತ್ವದ ಇಂತವರನ್ನು ಪಕ್ಷ ಹೇಗೆ ನಾಯಕ ಎಂದು ಒಪ್ಪಿಕೊಂಡಿತೋ ಎಂದು ಸಿದ್ದರಾಮಯ್ಯ ಅವರನ್ನು ಲೇವಡಿ ಮಾಡಿದರು.

ನಾಯಕರಾಗಿದ್ದವರು ಮೈತ್ರಿ ಸರ್ಕಾರದಲ್ಲಿ ಸಮಸ್ಯೆಯಾದಾಗ ಒಂದು ದಿನವೂ ನಮ್ಮೊಂದಿಗೆ ಸರಿಯಾಗಿ ಮಾತನಾಡಲಿಲ್ಲ. ಸಮಸ್ಯೆ  ಬಗೆಹರಿಸಲಿಲ್ಲ. ಸಮಸ್ಯೆ ಸರಿಪಡಿಸಿ ಎಂದರೆ ನಮ್ಮನ್ನೇ ದಬಾಯಿಸುತ್ತಿದ್ದರು. ನಮಗಿಂತ ಮೊದಲು ಸರಕಾರ ಅವರಿಗೆ ಬಿಳಬೇಕಾಗಿತ್ತು ಎಂದು ಸಿದ್ದರಾಮಯ್ಯ ಅವರನ್ನು ಟೀಕಿಸಿದರು. 

ಒಬ್ಬನ ಕಪಿಮುಷ್ಠಿಯಲ್ಲಿ ಕಾಂಗ್ರೆಸ್ ಇದೆ ಎಂದು ಏಕವಚನದಲ್ಲಿಯೇ ಸಿದ್ದರಾಮಯ್ಯ ವಿರುದ್ಧ ಪರೋಕ್ಷ ವಾಗ್ದಾಳಿ ಮುಂದಯವರೆಸಿದ ರಮೇಶ್ ಜಾರಕಿಹಿಳಿ, ಸಿದ್ದರಾಮಯ್ಯ ನಮ್ಮ ಸಮಸ್ಯೆಗಳ ಬಗ್ಗೆ ಚರ್ಚಿಸಿ ಮಾತನಾಡಿದ್ದಾರೆ ಎಂದು ಹೇಳಿಲ್ಲ. ಹಾಗೆ ಹೇಳಿದ್ದಲ್ಲಿ ತಾವು ರಾಜಕೀಯ ನಿವೃತ್ತಿ ಪಡೆಯುವುದಾಗಿ ಸವಾಲು ಹಾಕಿದರು.

SCROLL FOR NEXT