ರಾಜಕೀಯ

ಲಾಕ್ ಡೌನ್ : ರಾಜ್ಯಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ ಕೇಂದ್ರ ವಿಫಲ- ವೀರಪ್ಪ ಮೊಯ್ಲಿ

Nagaraja AB

ನವದೆಹಲಿ: ರಾಜ್ಯಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಲಾಕ್ ಡೌನ್ ಘೋಷಣೆ ಮಾಡುವ ಮೂಲಕ ಕೇಂದ್ರ ಸರ್ಕಾರ ದೊಡ್ಡ ತಪ್ಪು ಮಾಡಿದೆ ಎಂದು ಮಾಜಿ ಕೇಂದ್ರ ಸಚಿವ ಎಂ. ವೀರಪ್ಪ ಮೊಯ್ಲಿ ಆರೋಪಿಸಿದ್ದಾರೆ.

21 ದಿನಗಳ ಲಾಕ್ ಡೌನ್ ಅವಧಿ ಮುಗಿದ ನಂತರ ಅವ್ಯವಸ್ಥೆಯನ್ನು ಸರಿಪಡಿಸುವ  ನಿಟ್ಟಿನಲ್ಲಿ ತನ್ನ ಮುಂದಿನ ಯೋಜನೆಯನ್ನು ತಿಳಿಸುವಂತೆ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಲಾಕ್ ಡೌನ್ ಘೋಷಣೆ ಮಾಡುವ ಮುನ್ನ ರಾಜ್ಯಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಾಗಿತ್ತು. ಆದರೆ, ಇದನ್ನು ಮಾಡದೆ ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ದೊಡ್ಡ ತಪ್ಪು ಮಾಡಿದ್ದಾರೆ. ಹೆಚ್ಚಿನ ಸಿದ್ಧತೆಗಾಗಿ ಯಾವುದೇ ನೋಟಿಸ್ ಕೂಡಾ ನೀಡಿಲ್ಲ, ದಿಢೀರನೆ ಲಾಕ್ ಡೌನ್ ಜಾರಿ ಆಘಾತವನ್ನುಂಟುಮಾಡಲಾಯಿತು ಎಂದು ಅವರು ಟೀಕಿಸಿದ್ದಾರೆ.

ಇಂಗ್ಲೆಂಡ್ , ಕೆನಡಾದಂತಹ ರಾಷ್ಟ್ರಗಳಲ್ಲಿ ಪರಿಸ್ಥಿತಿಯನ್ನು ಯುದ್ಧದ ರೀತಿಯಲ್ಲಿ ನಿರ್ವಹಿಸಲಾಗುತ್ತಿದೆ. ಆದರೆ, ನಮ್ಮಲ್ಲಿ ಆ ರೀತಿಯಲ್ಲಿ ನಡೆಯುತ್ತಿಲ್ಲ, ಆರ್ಥಿಕ ಹಾಗೂ ಆರೋಗ್ಯ ತುರ್ತುಪರಿಸ್ಥಿತಿ ಜಾರಿ ಮಾಡದೆ ಲಾಕ್ ಡೌನ್ ಮಾಡಿರುವುದರಿಂದ ಸಾಕಷ್ಟು ಅವ್ಯವಸ್ಥೆ ಉಂಟಾಗಿದೆ ಎಂದು ಅವರು ಹೇಳಿದ್ದಾರೆ

ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳಲ್ಲಿ ಪರೀಕ್ಷೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.ಪರೀಕ್ಷೆಯನ್ನು ದೊಡ್ಡ ಪ್ರಮಾಣದಲ್ಲಿ ನಡೆಸಿದ ಮಾತ್ರಕ್ಕೆ ಈ ಸಮಸ್ಯೆಯನ್ನು ತಡೆಗಟ್ಟಬಹುದು ಎಂದು ಯೋಚಿಸಿಲ್ಲ ಎಂದು ಸುದ್ದಿಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮೊಯ್ಲಿ ತಿಳಿಸಿದ್ದಾರೆ.

ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳಲ್ಲಿ ಕೋವಿಡ್-19 ಪರಿಸ್ಥಿತಿ ನಿಬಾಯಿಸುವ ನಿಟ್ಟಿನಲ್ಲಿ ರಚನೆಯಾಗಿರುವ ಕಾಂಗ್ರೆಸ್ ಕಾರ್ಯ ಪಡೆಯಲ್ಲಿ ಮೊಯ್ಲಿ ಕೂಡಾ ಸದಸ್ಯರಾಗಿದ್ದಾರೆ. 

ಅಂತಾರಾಷ್ಟ್ರೀಯ ಸ್ಥಗಿತ ಹಾಗೂ ಆಂತರಿಕ ಲಾಕ್ ಡೌನ್ ನಿಂದಾಗಿ ವ್ಯವಹಾರಕ್ಕೆ ಸಾಕಷ್ಟು ತೊಂದರೆಯಾಗಿದೆ ಏಪ್ರಿಲ್ 14 ರ ನಂತರ ಸರ್ಕಾರ ಏನು ಮಾಡಲಿದೆ, ಏನೆಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂಬುದನ್ನು ಸ್ಪಷ್ಟಪಡಿಸಬೇಕು, ಲಾಕ್ ಡೌನ್ ಮಾರ್ಪಾಡು ಮತ್ತಿತರ ಅಂಶಗಳನ್ನು ತಿಳಿಸಬೇಕು, ಇಲ್ಲದಿದ್ದರೆ ಮತ್ತಷ್ಟು ಅವ್ಯವಸ್ಥೆ ಉಂಟಾಗಲಿದೆ ಎಂದು ಅವರು ಸಲಹೆ ನೀಡಿದ್ದಾರೆ.

SCROLL FOR NEXT