ರಾಜಕೀಯ

ಕೊರೋನಾ ಹಾವಳಿಗೆ ಜಾತಿ-ಧರ್ಮಗಳ ಬಣ್ಣ ಹಚ್ಚುವ ಕೆಲಸ: ಕ್ರಮಕ್ಕೆ ಸಿದ್ದರಾಮಯ್ಯ ಒತ್ತಾಯ

Srinivasamurthy VN

ಬೆಂಗಳೂರು: ಕೊರೋನಾ ಹಾವಳಿಗೆ ಜಾತಿ-ಧರ್ಮಗಳ ಬಣ್ಣ ಹಚ್ಚುವ ಕೆಲಸ ನಡೆಯುತ್ತಿದ್ದು, ಈ ಸಂಬಂಧ ಸಿಎಂ ಬಿಎಸ್ ವೈ ನೀಡಿರುವ ಎಚ್ಚರಿಕೆ ಸ್ವಾಗತಾರ್ಹ. ಆದರೆ ಅವರು ನುಡಿದಂತೆ ನಡೆಯ ಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಕೊರೊನಾ ಹಾವಳಿಗೆ ಜಾತಿ-ಧರ್ಮಗಳ ಬಣ್ಣಹಚ್ಚಿ ಸಮಾಜವನ್ನು ಒಡೆಯುವ ಕೆಲಸವನ್ನು ಕೆಲವರು, ಸುಳ್ಳು ಸುದ್ದಿ, ತಿರುಚಿದ ವಿಡಿಯೋ ತುಣುಕುಗಳ ಮೂಲಕ ಮಾಡುತ್ತಿದ್ದಾರೆ. ಇಂತಹವರ ಬಗ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಖಡಕ್ ಎಚ್ಚರಿಕೆ ನೀಡಿರುವುದನ್ನು ನಾನು  ಸ್ವಾಗತಿಸಿ ಬೆಂಬಲಿಸುತ್ತೇನೆ. ಅವರು ನುಡಿದಂತೆ ನಡೆಯ ಬೇಕೆಂದು ಆಗ್ರಹಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿಯೂ ಆಗಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ಕೊರೊನಾ ಸೋಂಕಿನ ಭೀತಿಯಿಂದ ಹಲವಾರು ಖಾಸಗಿ ವೈದ್ಯರು ಕ್ಲಿನಿಕ್‌ಗಳನ್ನು ಮುಚ್ಚಿರುವ ವರದಿಗಳು ಬರುತ್ತಿವೆ. ಇದು ಅಮಾನವೀಯ ನಿರ್ಧಾರ. ಇದರಿಂದ ಬೇರೆ ಸಾಮಾನ್ಯ ಕಾಯಿಲೆಯುಳ್ಳವರು ಚಿಕಿತ್ಸೆ ಇಲ್ಲದೆ ಬವಣೆ ಪಡುತ್ತಿದ್ದಾರೆ.  ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಕೇಂದ್ರ ಆರೋಗ್ಯ ಇಲಾಖೆ ತಕ್ಷಣ ಮಧ್ಯೆ ಪ್ರವೇಶಿಸಿ ಈ ಸಮಸ್ಯೆಯನ್ನು ಬಗೆಹರಿಸಬೇಕು.

ತಪಾಸಣಾ ಕಿಟ್‌ ಕೊರತೆಯಿಂದಾಗಿ ನಿರೀಕ್ಷಿತ ಸಂಖ್ಯೆಯಲ್ಲಿ ಕೊರೊನಾ ಸೋಂಕು ಪರೀಕ್ಷೆ ನಡೆಯುತ್ತಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ಅವಶ್ಯಕ ಪ್ರಮಾಣದಲ್ಲಿ ಪೂರೈಕೆ ಮಾಡದಿರುವ ಕಾರಣ ತಮಿಳು ನಾಡು ನೇರವಾಗಿ ಒಂದು ಲಕ್ಷ ತಪಾಸಣಾ ಕಿಟ್ ಗಳನ್ನು ಆಮದು  ಮಾಡಿಕೊಳ್ಳುತ್ತಿದೆಯಂತೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೂಡ ಇಂತಹ ದಿಟ್ಟ ನಿರ್ಧಾರ ಕೈಗೊಳ್ಳಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ

SCROLL FOR NEXT