ರಾಜಕೀಯ

ಮದ್ಯ ಮಾರಾಟ ವಿಚಾರ: ಪ್ರಜ್ವಲ್‌ ರೇವಣ್ಣ-ಪ್ರೀತಂ ಗೌಡ ವಾಕ್ಸಮರ, ಪರಸ್ಪರ ಏಕವಚನದಲ್ಲಿ ನಿಂದನೆ

Srinivasamurthy VN

ಹಾಸನ: ಅಕ್ರಮ ಮದ್ಯ ಮಾರಾಟ ವಿಚಾರಕ್ಕೆ ಸಂಬಂಧಿಸಿದಂತೆ ಸಂಸದ ಪ್ರಜ್ವಲ್‌ ರೇವಣ್ಣ ಹಾಗೂ ಹಾಸನ ಕ್ಷೇತ್ರದ ಶಾಸಕ ಪ್ರೀತಂ ಗೌಡ ನಡುವೆ ತೀವ್ರ ವಾಕ್ಸಮರ ನಡೆದಿದೆ.

ಹಾಸನದಲ್ಲಿ ಕೊರೋನಾ ವೈರಸ್ ಸೋಂಕಿನ ನಿಯಂತ್ರಣ ಕ್ರಮ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅಧ್ಯಕ್ಷತೆಯಲ್ಲಿ ನಡೆಯುತ್ತಿದ್ದ ಸಭೆಯಲ್ಲಿ ಇಬ್ಬರೂ ನಾಯಕರು ಪರಸ್ಪರ ವಾಕ್ಸಮರ ನಡೆಸಿದ್ದು, ವಾಕ್ಸಮರ ತಾರಕಕ್ಕೇರಿ ಇಬ್ಬರೂ ಏಕ ವಚನದಲ್ಲಿ ನಿಂದಿಸಿಕೊಂಡ ಘಟನೆ ನಡೆದಿದೆ.

ಮೊದಲು ವಿಷಯ ಪ್ರಸ್ತಾಪಿಸಿದ ಪ್ರಜ್ವಲ್‌ ರೇವಣ್ಣ, ‘ಲಾಕ್‌ಡೌನ್‌ ಇದ್ದರೂ ಮದ್ಯ ಮಾರಾಟ ಮಾಡುತ್ತಿದ್ದ ನಗರದ ಬಿಜೆಪಿ ಕಾರ್ಯಕರ್ತನಿಗೆ ಸೇರಿದ ಕ್ವಾಲಿಟಿ ಬಾರ್‌ ಮೇಲೆ ಅಧಿಕಾರಿಗಳು ದಾಳಿ ನಡೆಸಿದ ವೇಳೆ ಸ್ಟಾಕ್‌ನಲ್ಲಿ ವ್ಯತ್ಯಾಸ ಬಂದಿದೆ. ಈವರೆಗೂ ಏಕೆ ಕ್ರಮ ಕೈಗೊಂಡಿಲ್ಲ‌?’ ಎಂದು ಪೊಲೀಸ್‌ ವರಿಷ್ಠಾಧಿಕಾರಿ ಆರ್‌.ಶ್ರೀನಿವಾಸಗೌಡ ಹಾಗೂ ಅಬಕಾರಿ ಉಪ ಆಯುಕ್ತ ಗೋಪಾಲಕೃಷ್ಣಗೌಡ ಅವರನ್ನು ತರಾಟೆಗೆ ತೆಗೆದುಕೊಂಡರು.

ಈ ವೇಳೆ ಮಧ್ಯ ಪ್ರವೇಶಿಸಿದ ಶಾಸಕ ಪ್ರೀತಂ ಗೌಡ ಅವರು, ನಿಯಮ ಉಲ್ಲಂಘಿಸಿದ ಯಾವುದೇ ಬಾರ್‌ ಪರವಾನಗಿಯನ್ನು ರದ್ದುಗೊಳಿಸಲಿ. ಅದು ಬಿಟ್ಟು ಶಾಸಕನ ಆಪ್ತನಿಗೆ ಸೇರಿದ ಬಾರ್ ಎಂದು ಮಾಧ್ಯಮಗಳಿಗೆ ಸಂಸದರು ಹೇಳಿಕೆ ನೀಡಿರುವುದು ಸರಿಯಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಇಬ್ಬರ ನಡುವೆ ವಾಕ್ಸಮರ ಮುಂದುವರಿಯಿತು. ಒಂದು ಹಂತದಲ್ಲಿ ಇಬ್ಬರೂ ಏರುಧನಿಯಲ್ಲಿ ವಾಗ್ದಾಳಿ ನಡೆಸಿ ಏಕವಚನದಲ್ಲಿ ಮಾತಾಡಿದರು, 

ಉಭಯ ನಾಯಕರನ್ನು ಸಮಾಧಾನ ಮಾಡಲು ಸಭೆಯಲ್ಲಿ ಪಾಲ್ಗೊಂಡಿದ್ದ ಸಚಿವರು, ಶಾಸಕರು ಹಾಗೂ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್‌ ಸಿಂಗ್ ಅವರು ಹರಸಾಹಸಪಟ್ಟರು. ಈ ವೇಳೆ ಸಚಿವ ಮಾಧುಸ್ವಾಮಿ ಅವರು 'ಎಲ್ಲಾ ಮದ್ಯದಂಗಡಿಗಳನ್ನು ಪರಿಶೀಲನೆ ಮಾಡಿ, ಸೀಲ್ ಹಾಕಬೇಕು. ಮತ್ತೆ ಸೀಲ್‌ ಓಪನ್‌ ಮಡಿದಾಗ ಸ್ಟಾಕ್‌ ವ್ಯತ್ಯಾಸವಿದ್ದರೆ ಕ್ರಮ ಕೈಗೊಳ್ಳುವಂತೆ’  ಅಧಿಕಾರಿಗಳಿಗೆ ಸೂಚಿಸಿದರು.

SCROLL FOR NEXT